ADVERTISEMENT

₹3.24 ಲಕ್ಷ ಕೋಟಿ ಸಂಪತ್ತು ಗಳಿಕೆ: ಎರಡು ದಿನದ ನಂತರ ಜಿಗಿದ ಷೇರುಪೇಟೆ

ಪಿಟಿಐ
Published 4 ಜನವರಿ 2024, 14:25 IST
Last Updated 4 ಜನವರಿ 2024, 14:25 IST
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ
ಷೇರುಪೇಟೆ ವಹಿವಾಟು–ಸಾಂದರ್ಭಿಕ ಚಿತ್ರ   

ನವದೆಹಲಿ: ವರ್ಷದ ಮೊದಲ ದಿನ ಮಾತ್ರ ಅಲ್ಪ ಏರಿಕೆ ಕಂಡು, ಸತತ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಷೇರುಪೇಟೆ ಗುರುವಾರ ಏರಿಕೆ ಕಂಡಿದೆ. ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹3.24 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 490 ಅಂಶ ಇಳಿಕೆ ಕಂಡು 71,847ರಲ್ಲಿ ಸ್ಥಿರಗೊಂಡಿತು. ವಹಿವಾಟಿನ ವೇಳೆ 598 ಅಂಶಕ್ಕೇರಿ, 71,954 ಅನ್ನು ಮುಟ್ಟಿತ್ತು. ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳ ₹3.24 ಲಕ್ಷ ಕೋಟಿಯಷ್ಟು ಏರಿಕೆ ಆಗಿದೆ. ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ₹368 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಈ ವರೆಗಿನ ಗರಿಷ್ಠ ಮೌಲ್ಯವಾಗಿದೆ. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 141 ಅಂಶ ಏರಿಕೆಯಾಗಿ 21,658ಕ್ಕೆ ತಲುಪಿತು.

ADVERTISEMENT

ಎರಡು ಋಣಾತ್ಮಕ ವಹಿವಾಟಿನ ದಿನದ ನಂತರ, ಪ್ರಮುಖ ಬ್ಯಾಂಕ್‌ಗಳ ಮಾಸಿಕ ವಹಿವಾಟು ವರದಿಗಳಲ್ಲಿ ಕಂಡು ಬಂದು ವಹಿವಾಟು ಬೆಳವಣಿಗೆಯು ಮಾರುಕಟ್ಟೆಯು ಪುಟಿದೇಳಲು ಕಾರಣವಾಯಿತು.  ಸಾಲ ಹೆಚ್ಚಳ, ಮನೆಗಳ ಮಾರಾಟದಲ್ಲಿ ಏರಿಕೆಯ ನಿರೀಕ್ಷೆಯಿಂದಾಗಿ ಬ್ಯಾಂಕು ಮತ್ತು ರಿಯಲ್‌ ಎಸ್ಟೇಟ್‌ ವಲಯದ ಷೇರುಗಳು ಲಾಭ ಗಳಿಸಿದವು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಬಜಾಜ್‌ ಫೈನಾನ್ಸ್‌, ಎನ್‌ಟಿಪಿಸಿ, ಇಂಡಸ್‌ಇಂಡ್‌ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಟಾಟಾ ಮೋಟರ್ಸ್‌, ನೆಸ್ಟ್ಲೆ, ಪವರ್‌ ಗ್ರಿಡ್‌, ಇನ್ಫೊಸಿಸ್‌, ಬಜಾಜ್‌ ಫಿನ್‌ಸರ್ವ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಗಳಿಕೆ ಕಂಡಿವೆ. ಎಚ್‌ಸಿಎಲ್‌ ಟೆಕ್, ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಾಟಾ ಸ್ಟೀಲ್ ಮತ್ತು ಹಿಂದೂಸ್ತಾನ್‌ ಯೂನಿಲಿವರ್‌ ಇಳಿಕೆ ಕಂಡಿವೆ. 

ಬಿಎಸ್‌ಇ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಏರಿಕೆ ಕಂಡಿವೆ. ರಿಯಾಲ್ಟಿ, ಯುಟಿಲಿಟಿ, ದೂರಸಂಪರ್ಕ, ಸೇವೆಗಳು, ಹಣಕಾಸು ಸೇವೆಗಳು ಗಳಿಕೆ ಕಂಡಿದ್ದರೆ, ಆಟೊ ಮತ್ತು ಲೋಹ ಇಳಿಕೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.