ADVERTISEMENT

ಸುಲಭ ಸಾಲಕ್ಕೆ ಕ್ರೆಡಿಟ್ ಸ್ಕೋರ್

ಹಣಕಾಸು ಸಾಕ್ಷರತೆ

ಪ್ರಜಾವಾಣಿ ವಿಶೇಷ
Published 17 ಮಾರ್ಚ್ 2019, 20:00 IST
Last Updated 17 ಮಾರ್ಚ್ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಡಿಮೆ ಬಡ್ಡಿ ದರಕ್ಕೆ ಸುಲಭದಲ್ಲಿ ಸಾಲ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ, ಸುಲಭ ಸಾಲಕ್ಕೆ ಮಾನದಂಡ ಕ್ರೆಡಿಟ್ ಸ್ಕೋರ್. ನಿಮ್ಮ ಹಣಕಾಸಿನ ವ್ಯವಹಾರದ ಶಿಸ್ತು ಮತ್ತು ಅಶಿಸ್ತಿಗೆ ಕ್ರೆಡಿಟ್ ಸ್ಕೋರ್ ಕನ್ನಡಿ ಇದ್ದಂತೆ.

ಸಾಲ ಮರುಪಾವತಿ ಇತಿಹಾಸ, ಸಮಯಕ್ಕೆ ಸರಿಯಾಗಿ ಸಾಲದ ಕಂತು ಪಾವತಿ, ಸಾಲ ಮರುಪಾವತಿಗೆ ತೆಗೆದುಕೊಂಡ ಅವಧಿ, ಸಾಲಕ್ಕೆ ಎಷ್ಟು ಬಾರಿ ಅರ್ಜಿ ಸಲ್ಲಿಸಲಾಗಿದೆ, ಸಾಲದ ಹಣ ಬಳಸುವಲ್ಲಿನ ವೈವಿಧ್ಯತೆ ಸೇರಿ ಹತ್ತಾರು ಸಂಗತಿಗಳು ಕ್ರೆಡಿಟ್ ಸ್ಕೋರ್ (ಸಾಲ ಸಾಮರ್ಥ್ಯದ ಅಂಕಗಳು) ನಿರ್ಧರಿಸುತ್ತವೆ.

ಕ್ರೆಡಿಟ್ ಸ್ಕೋರ್ ನೀಡುವವರು ಯಾರು?: ಕ್ರೆಡಿಟ್ ರೇಟಿಂಗ್ ಬ್ಯೂರೋಗಳಾದ– ಕ್ರೆಡಿಟ್ ಇನ್ಫಾರ್ಮೇಷನ್ ಬ್ಯೂರೊ ಆಫ್ ಇಂಡಿಯಾ ಲಿ.(CIBIL), ಈಕ್ವಿಫ್ಯಾಕ್ಸ್ , ಎಕ್ಪೀರಿಯಾನ್ ಸಂಸ್ಥೆಗಳು ಬ್ಯಾಂಕ್‌ಗಳಿಂದ ಮಾಹಿತಿ ಪಡೆದುಕೊಂಡು ಸಾಲದಾರರ ಮಾಹಿತಿಯನ್ನು ಭರ್ತಿ ಮಾಡಿ ದತ್ತಾಂಶವನ್ನು ಹಂಚಿಕೊಳ್ಳುತ್ತವೆ.

ADVERTISEMENT

300 ರಿಂದ 900ರವರೆಗೆ ಕ್ರೆಡಿಟ್ ಸ್ಕೋರ್ ಅಂಕಗಳನ್ನು ನೀಡಲಾಗುತ್ತದೆ. 750 ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಹಲವಾರು ಅಂತರ್ಜಾಲ ತಾಣಗಳು ಕೆಲ ಪೂರಕ ಮಾಹಿತಿ ಭರ್ತಿ ಮಾಡಿದರೆ ಉಚಿತವಾಗಿ ಕ್ರೆಡಿಟ್ ಸ್ಕೋರ್ ಮಾಹಿತಿಯನ್ನು ಒದಗಿಸುತ್ತವೆ.

ಸಾಲದ ವರದಿಯಲ್ಲಿ ಏನಿರುತ್ತದೆ?: ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅರ್ಜಿ ಸಲ್ಲಿಸಿದ ಕೂಡಲೇ ಅಧಿಕಾರಿಗಳು ಕ್ರೆಡಿಟ್ ರಿಪೋರ್ಟ್ ಮತ್ತು ಕ್ರೆಡಿಟ್ ಸ್ಕೋರ್ ಕೇಳುತ್ತಾರೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರಷ್ಟೇ ಸಾಲ ಸಿಗುತ್ತದೆ.

ಸಾಲದ ವರದಿಯಲ್ಲಿ ನೀವು ಯಾವ ಬ್ಯಾಂಕ್‌ನಿಂದ ಸಾಲ ಪಡೆದಿದ್ದೀರಿ, ಸಾಲದ ಮೊತ್ತವೆಷ್ಟು, ನಿಗದಿತ ಸಮಯಕ್ಕೆ ಮರುಪಾವತಿ ಆಗಿದೆಯಾ, ಸಾಲ ಮನ್ನಾ ಆಗಿದೆಯಾ, ಸಾಲದ ಅರ್ಜಿ ತಿರಸ್ಕೃತವಾಗಿದೆಯಾ ಎಂಬ ಮಾಹಿತಿ ಇರುತ್ತದೆ.

ಕ್ರೆಡಿಟ್ ರಿಪೋರ್ಟ್ /ಸ್ಕೋರ್ ಉಪಯೋಗ?: ಕ್ರೆಡಿಟ್ ರಿಪೋರ್ಟ್ /ಸ್ಕೋರ್ ಆಧರಿಸಿ ಬ್ಯಾಂಕ್‌ಗಳು ವ್ಯಕ್ತಿಯೊಬ್ಬನಿಗೆ ಸಾಲ ನೀಡಬಹುದೇ ಇಲ್ಲವೇ ಎನ್ನುವುದನ್ನು ತೀರ್ಮಾನಿಸುತ್ತವೆ.

ಸಾಲ ಪಡೆದ ವ್ಯಕ್ತಿಯು ಸರಿಯಾಗಿ ಮರುಪಾವತಿ ಮಾಡಿದರೆ ಅದರಿಂದ ಆತನಿಗೆ ಉತ್ತಮ ಕ್ರೆಡಿಟ್ ಸ್ಕೋರ್ ಸಿಗುತ್ತದೆ. ಸಾಲ ಪಾವತಿ ಮಾಡದಿದ್ದರೆ ಆತನ ಅಂಕಗಳು ತಗ್ಗುತ್ತವೆ. ಹೀಗಾಗಿ ಸಾಲ ಪಡೆದ ವ್ಯಕ್ತಿಯ ಇತಿಹಾಸ ತಿಳಿಯಲು ಇದು ಸಹಕಾರಿ.

ಕ್ರೆಡಿಟ್ ರಿಪೋರ್ಟ್‌ನಲ್ಲೂ ಲೋಪ!: ಕ್ರೆಡಿಟ್ ಸ್ಕೋರ್ ಮತ್ತು ಕ್ರೆಡಿಟ್ ರಿಪೋರ್ಟ್‌ನ ಮಾಹಿತಿಯನ್ನು ಪ್ರತಿ ತಿಂಗಳೂ ಭರ್ತಿ ಮಾಡುವ ಹೊಣೆಗಾರಿಗೆ ಆಯಾಯ ಬ್ಯಾಂಕ್‌ಗಳದ್ದು. ಹೀಗೆ ಕಾಲ ಮಿತಿಯಲ್ಲಿ ಮಾಹಿತಿಯನ್ನು ನವೀಕರಿಸುವಾಗ ಕೆಲ ತಪ್ಪುಗಳಾಗುವ ಸಾಧ್ಯತೆ ಇರುತ್ತದೆ.

ಉದಾಹರಣೆಗೆ ನಿಮ್ಮ ಹೆಸರು ಬಸವರಾಜ್‌, ನೀವು ಬ್ಯಾಂಕ್‌ನಿಂದ ₹ 10 ಲಕ್ಷ ಸಾಲ ಪಡೆದುಕೊಂಡು ಮರುಪಾವತಿ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಆದರೆ, ಬಸವರಾಜ್‌ ಬಿ. ಎನ್ನುವ ಮತ್ತೊಬ್ಬ ವ್ಯಕ್ತಿ ಅದೇ ಬ್ಯಾಂಕ್‌ನಿಂದ ಸಾಲ ಪಡೆದು ಮರುಪಾವತಿ ಮಾಡಿರುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಆ ಸಾಲ ಪಾವತಿ ಮಾಡದ ಬಸವರಾಜ ಅವರ ಮಾಹಿತಿ ನಿಮ್ಮ ಹೆಸರಿಗೆ ಭರ್ತಿ
ಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಾಲಕಾಲಕ್ಕೆ ಕ್ರೆಡಿಟ್ ಸ್ಕೋರ್ ಮೇಲೆ ನಿಗಾ ಇಡುವುದು ಅಗತ್ಯ. ಕ್ರೆಡಿಟ್ ರಿಪೋರ್ಟ್‌ನಲ್ಲಿ ತಪ್ಪುಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸಂಸ್ಥಗಳ ಜತೆ ವ್ಯವಹರಿಸಿ 30 ದಿನಗಳ ಒಳಗೆ ಸರಿಪಡಿಸಬಹುದು.

ಸಮೀಕ್ಷೆಗಳ ನೋಟ, ಪೇಟೆಯಲ್ಲಿ ಓಟ..!

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಮರಳುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿರುವುದು ಸೇರಿದಂತೆ ಹಲವು ಪ್ರಮುಖ ಕಾರಣಗಳಿಂದ ಸೂಚ್ಯಂಕಗಳು ಏರಿಕೆ ಕಂಡಿವೆ.

ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 3.7 ರಷ್ಟು (38,024) ಗಳಿಸಿದ್ದರೆ, ನಿಫ್ಟಿ ಶೇ 3.5 ರಷ್ಟು(11,426) ಪ್ರಗತಿ ಕಂಡಿದೆ. 2018ರ ನವೆಂಬರ್ ಬಳಿಕ ವಾರದ ಅವಧಿಯಲ್ಲಿನ ಗರಿಷ್ಠ ಗಳಿಕೆ ಇದಾಗಿದೆ.

ಪ್ರಭಾವ ಬೀರಿದ ಸಂಗತಿಗಳು: ಚುನಾವಣೆ ಬಳಿಕವೂ ಈಗಿನ ಸರ್ಕಾರವೇ ಆಯ್ಕೆಯಾಗುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದರಿಂದ ರಾಜಕೀಯ ಅನಿಶ್ಚಿತತೆ ಇರುವುದಿಲ್ಲ ಎಂಬ ಭಾವ ಹೂಡಿಕೆದಾರರಲ್ಲಿ ಕಂಡು ಬಂದಿದೆ. ವಿದೇಶಿ ಹೂಡಿಕೆದಾರರು ಕಳೆದ ವಾರ ₹ 12,298 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಜತೆಗೆ ಡಾಲರ್ ಎದುರು ರುಪಾಯಿ ಮೌಲ್ಯ ಬಲವರ್ಧನೆ ಮತ್ತು ಜಾಗತಿಕ ಪೇಟೆಗಳಲ್ಲಿನ ಉತ್ಸಾಹ ದೇಶಿ ಷೇರುಪೇಟೆಯಲ್ಲಿನ ಖರೀದಿ ಭರಾಟೆಗೆ ಕಾರಣವಾಗಿದೆ.

ಐಪಿಒ: ಎಂಬಸಿ ಆಫೀಸ್ ಪಾರ್ಕ್ಸ್ ಐಪಿಒ ಸೋಮವಾರ ಆರಂಭಗೊಳ್ಳಲಿದೆ. ಎಂಎಸ್‌ಟಿಸಿ, ಐಪಿಒ ನೀಡಿಕೆಯನ್ನು ಮಾರ್ಚ್ 20 ರ ವರೆಗೆ ವಿಸ್ತರಿಸಿದೆ.

ಎಚ್ಚರಿಕೆ ಅಗತ್ಯ: ಪೇಟೆಯ ಓಟ ಸಕಾರಾತ್ಮಕವಾಗಿದ್ದರೂ ಷೇರುಗಳ ಖರೀದಿ ವಿಚಾರದಲ್ಲಿ ಈಗ ಸಾಕಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ.

ಸೂಚ್ಯಂಕಗಳಲ್ಲಿ ಅನಿರೀಕ್ಷಿತ ಏರಿಳಿತಗಳಾಗುವ ಸಾಧ್ಯತೆ ಇರುವುದರಿಂದ ಹಣ ನಿರ್ವಹಣೆಗೆ ಹೂಡಿಕೆದಾರರು ಸಾಕಷ್ಟು ಪ್ರಾಮುಖ್ಯ ನೀಡಬೇಕಾಗುತ್ತದೆ.

ಮುನ್ನೋಟ: ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯದ ಮಂಡಳಿ, ಷೇರುಗಳ ಮರು ಖರೀದಿ ಕುರಿತು 18 ರಂದು ಸಭೆ ನಡೆಸಲಿದೆ. 19 ರಂದು ಜಿಎಸ್‌ಟಿ ಮಂಡಳಿಯ 34 ನೇ ಸಭೆ ನಡೆಯಲಿದೆ. 20 ರಂದು ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಸಭೆ ಸೇರಲಿದ್ದು ಬಡ್ಡಿ ದರಗಳ ಬಗ್ಗೆ ನಿರ್ಧರಿಸಲಿದೆ. ಇವುಗಳ ಜತೆಗೆ ಹಲವು ವಿದ್ಯಮಾನಗಳು ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿ., ಉಪಾಧ್ಯಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.