ADVERTISEMENT

ಡಾಲರ್‌ ಎದುರು ರೂಪಾಯಿ ಚೇತರಿಕೆ; ಕರಡಿ ಹಿಡಿತ ತಪ್ಪಿಸಿಕೊಂಡ ಷೇರುಪೇಟೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2022, 4:56 IST
Last Updated 16 ಜೂನ್ 2022, 4:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರಡಿ ಹಿಡಿತದಲ್ಲಿದ್ದ ದೇಶದ ಷೇರುಪೇಟೆಗಳಲ್ಲಿ ಗುರುವಾರ ಸಕಾರಾತ್ಮಕ ವಹಿವಾಟು ದಾಖಲಾಗಿದೆ. ಇದೇ ವೇಳೆ ಡಾಲರ್‌ ಎದುರು ರೂಪಾಯಿ ಮೌಲ್ಯವು 15 ಪೈಸೆಯಷ್ಟು ಚೇತರಿಕೆ ಕಂಡಿದೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ 'ಫೆಡರಲ್ ರಿಸರ್ವ್‌' ಸಾಲದ ಮೇಲಿನ ಬಡ್ಡಿದರವನ್ನು ಬುಧವಾರ ಶೇಕಡ 0.75ರಷ್ಟು ಹೆಚ್ಚಳ ಮಾಡಿದೆ. ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಬಡ್ಡಿದರ ಹೆಚ್ಚಳ ಮಾಡಲಾಗಿದೆ. ಈ ನಿರ್ಧಾರವು ಜಾಗತಿಕ ಷೇರುಪೇಟೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.

ವಹಿವಾಟು ಆರಂಭದಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 601.11 ಅಂಶಗಳಷ್ಟು ಏರಿಕೆಯೊಂದಿಗೆ 53,142 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 171 ಅಂಶ ಹೆಚ್ಚಳವಾಗಿ 15,863 ಅಂಶ ಮುಟ್ಟಿತು.

ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌, ಮಾರುತಿ, ಐಸಿಐಸಿಐ ಬ್ಯಾಂಕ್‌, ಐಟಿಸಿ, ಎಚ್‌ಡಿಎಫ್‌ಸಿ ಹಾಗೂ ಎಸ್‌ಬಿಐ ಷೇರುಗಳ ಬೆಲೆ ಏರಿಕೆಯಾಗಿದೆ. ಭಾರ್ತಿ ಏರ್‌ಟೆಲ್‌, ಪವರ್‌ಗ್ರಿಡ್‌ ಹಾಗೂ ನೆಸ್ಟ್ಲೆ ಕಂಪನಿಗಳ ಷೇರು ಬೆಲೆ ಇಳಿಮುಖವಾಗಿದೆ.

ಬುಧವಾರ ಡಾಲರ್‌ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆಯ ಕುಸಿತ ಕಂಡಿತ್ತು. ಪ್ರತಿ ಡಾಲರ್‌ಗೆ 78.22ರಲ್ಲಿ ವಹಿವಾಟು ನಡೆಸಿದ್ದ ರೂಪಾಯಿ ಇಂದು 15 ಪೈಸೆಯಷ್ಟು ಚೇತರಿಕೆ ದಾಖಲಿಸಿದೆ. ಪ್ರಸ್ತುತ ಪ್ರತಿ ಡಾಲರ್‌ಗೆ 78.07 ರೂಪಾಯಿ ಇದೆ.

ಬ್ರೆಂಟ್‌ ಕಚ್ಚಾ ತೈಲದ ಫ್ಯೂಚರ್ಸ್‌ ಪ್ರತಿ ಬ್ಯಾರೆಲ್‌ಗೆ 119.16 ಡಾಲರ್‌ ತಲುಪಿದೆ.

ಷೇರುಪೇಟೆ ಮಾಹಿತಿ ಪ್ರಕಾರ, ಬುಧವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,531.15 ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.