ಬೆಂಗಳೂರು:ಬ್ಯಾಂಕಿಂಗ್ ಮತ್ತು ಟೆಲಿಕಾಂ ಕಂಪನಿಗಳ ಷೇರುಗಳಲ್ಲಿ ಸಕಾರಾತ್ಮ ವಹಿವಾಟು ದಾಖಲಾಗುತ್ತಿದ್ದಂತೆ ಮಂಗಳವಾರ ಷೇರುಪೇಟೆ ಸಂವೇದಿ ಸೂಚ್ಯಂಕವು ಏರಿಕೆ ಹಾದಿಯಲ್ಲಿ ಸಾಗಿದೆ.
ಕಳೆದ ತ್ರೈಮಾಸಿಕದಲ್ಲಿ ನಷ್ಟ ಅನುಭವಿಸಿರುವ ಟೆಲಿಕಾಂ ಕ್ಷೇತ್ರದ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ, ಡಿಸೆಂಬರ್‌ನಿಂದ ಮೊಬೈಲ್ ಸೇವಾ ದರಗಳನ್ನು ಹೆಚ್ಚಳ ಮಾಡುವುದಾಗಿ ಸೋಮವಾರ ಹೇಳಿವೆ. ಇದರಿಂದ ಹೂಡಿಕೆದಾರರು ಉಭಯ ಕಂಪನಿಗಳ ಷೇರು ಖರೀದಿಯಲ್ಲಿ ಉತ್ಸಾಹ ತೋರಿದ್ದು, ಏರ್‌ಟೆಲ್ ಶೇ 6ರಷ್ಟು ಏರಿಕೆಯೊಂದಿಗೆ ಪ್ರತಿ ಷೇರು ₹433 ಮುಟ್ಟಿದೆ. ವೊಡಾಫೋನ್ ಷೇರುಗಳಲ್ಲಿ ಶೇ 28ರಷ್ಟು ದಾಖಲೆಯ ಏರಿಕೆ ಕಂಡು ಪ್ರತಿ ಷೇರು ಬೆಲೆ ₹5.68 ಆಗಿದೆ.
ಇದನ್ನೂ ಓದಿ:ವೊಡಾಫೋನ್, ಏರ್‌ಟೆಲ್ ನಷ್ಟ ₹ 74 ಸಾವಿರ ಕೋಟಿ
ಟೆಲಿಕಾಂ ಕಂಪನಿಗಳ ಷೇರುಗಳಲ್ಲಿ ಏರಿಕೆ ಕಂಡಿರುವ ಪರಿಣಾಮ ಬ್ಯಾಂಕಿಂಗ್ ವಲಯದ ಮೇಲೂ ಆಗಿದ್ದು, ಶೇ 0.4ರಷ್ಟು ಹೆಚ್ಚಳ ದಾಖಲಿಸಿವೆ. ಐಟಿ ವಲಯದ ಷೇರುಗಳು ಶೇ 0.2ರಷ್ಟು ಏರಿಕೆ ಕಂಡಿದೆ.
ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಶೇ 0.51 ಏರಿಕೆಯೊಂದಿಗೆ 40,484 ಅಂಶಗಳನ್ನು ಮುಟ್ಟಿದೆ,ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ ಶೇ 0.38 ಚೇತರಿಕೆಯೊಂದಿಗೆ 11,929 ಅಂಶಗಳೊಂದಿಗೆ ವಹಿವಾಟು ಮುಂದುವರಿದಿದೆ.
ಆಗಸ್ಟ್ ಮಧ್ಯಭಾಗದಲ್ಲಿ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಷೇರುಪೇಟೆ, ಸರ್ಕಾರದ ಕ್ರಮಗಳಿಂದಾಗಿ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿದೆ. ಈವರೆಗೂ ನಿಫ್ಟಿ ಶೇ 12ರಷ್ಟು ಹೆಚ್ಚಳ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.