ಮುಂಬೈ:ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊದ ಪ್ರವರ್ತಕರಾದ ರಾಹುಲ್ ಭಾಟಿಯಾ ಮತ್ತು ರಾಕೇಶ್ ಗಂಗ್ವಾಲ್ ನಡುವೆ ಹೆಚ್ಚಿರುವ ಒಡಕಿನಿಂದಾಗಿ ಸಂಸ್ಥೆಯ ಷೇರು ಮೌಲ್ಯ ಭಾರಿ ಕುಸಿತಕಂಡಿದೆ.
ಸಂಸ್ಥೆಯ ಕಾರ್ಪೊರೇಟ್ ಆಡಳಿತಕ್ಕೆ ಸಂಬಂಧಿಸಿ ರಾಕೇಶ್ ಗಂಗ್ವಾಲ್ ಅವರುಭಾರತೀಯ ಷೇರು ನಿಯಂತ್ರಣ ಮಂಡಳಿಗೆ (ಸೆಬಿ) ದೂರು ನೀಡಿ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಇಂಡಿಗೊ ಷೇರು ಮೌಲ್ಯ ಕುಸಿದಿದೆ.
ಇಂಡಿಗೊ ಷೇರು ಮೌಲ್ಯ ಶೇ 17.55ರಷ್ಟು ಕುಸಿದಿದ್ದು, ಒಂದು ಷೇರಿನ ಬೆಲೆ ₹1,291ಕ್ಕೆ ಇಳಿಕೆಯಾಗಿದೆ. ಬೆಳಿಗ್ಗೆ 9.30ರ ವೇಳೆ ಇಂಡಿಗೊ ಷೇರುಗಳು ಬಿಎಸ್‌ಇನಲ್ಲಿ (ಮುಂಬೈ ಷೇರುಪೇಟೆ ಸೂಚ್ಯಂಕ) ₹1,327ರಂತೆ ಮಾರಾಟವಾಗಿದ್ದವು. ಈ ಬೆಳವಣಿಗೆಗೂ ಮೊದಲು; ಈ ವರ್ಷ ಇಂಡಿಗೊ ಷೇರುಗಳ ಮೌಲ್ಯ ಶೇ 21ರಷ್ಟು ಹೆಚ್ಚಾಗಿತ್ತು.
ಈ ಮಧ್ಯೆ, ಸ್ಪೈಸ್‌ಜೆಟ್ ಷೇರು ಮೌಲ್ಯ ವೃದ್ಧಿಯಾಗಿದ್ದು, ಒಂದು ಷೇರಿನ ಬೆಲೆ ₹126.65ಕ್ಕೆ ತಲುಪಿದೆ
ಪ್ರವರ್ತಕರ ಮಧ್ಯೆ ಉಂಟಾಗಿರುವ ಒಡಕು ಅನಿಶ್ಚಿತತೆಗೆ ಕಾರಣವಾಗಿದ್ದು, ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿಶ್ಲೇಷಕರೊಬ್ಬರು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಸಂಸ್ಥೆಯ ಆಡಳಿತಾತ್ಮಕ ನಿಯಂತ್ರಣ ವಿಷಯದಲ್ಲಿ ವಿವಾದ ತಲೆದೋರಿದ್ದು, ಪ್ರವರ್ತಕರ ನಡುವಣ ಭಿನ್ನಾಭಿಪ್ರಾಯ ತೀವ್ರಗೊಂಡರೆ ದೇಶಿ ವಿಮಾನ ಯಾನ ವಲಯಕ್ಕೆ ಭಾರಿ ಹಾನಿ ಉಂಟು ಮಾಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವಿದೇಶ ಸೇವೆ ವಿಸ್ತರಣೆಗೆ ಸಂಬಂಧಿಸಿದಂತೆ ಗಂಗ್ವಾಲ್ಸ್ ಅವರ ಆಕ್ರಮಣಕಾರಿ ಧೋರಣೆಯು ಭಾಟಿಯಾ ಅವರಿಗೆ ಇಷ್ಟವಾಗಿಲ್ಲ. ತಮ್ಮದೇ ಆದ ತಂಡವನ್ನು ನೇಮಿಸಿಕೊಳ್ಳುವುದರ ಮೂಲಕ ಗಂಗ್ವಾಲ್ಸ್ ಅವರು ಸಂಸ್ಥೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಹೊರಟಿದ್ದಾರೆ ಎನ್ನುವುದು ಭಾಟಿಯಾ ಅವರ ಆತಂಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.