ADVERTISEMENT

2023ರಲ್ಲಿ ಹೂಡಿಕೆ: ಹೇಗಿದ್ದರೆ ಚೆನ್ನ?

ಹೊಸ ವರ್ಷದಲ್ಲಿಯೂ ದೇಶಿ ಷೇರುಪೇಟೆಗಳ ಉತ್ತಮ ಪ್ರದರ್ಶನ ನಿರೀಕ್ಷೆ

ವಿ.ಕೆ. ವಿಜಯಕುಮಾರ್
Published 1 ಜನವರಿ 2023, 2:58 IST
Last Updated 1 ಜನವರಿ 2023, 2:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾರತದ ಷೇರುಪೇಟೆಗಳು ಇತರ ಷೇರುಪೇಟೆಗಳಿಗಿಂತ ಹೆಚ್ಚಿನ ಸಾಧನೆ ತೋರಿದ್ದು 2022ರ ಷೇರು ಮಾರುಕಟ್ಟೆಗಳ ಏರಿಳಿತಗಳಲ್ಲಿ ಅತ್ಯಂತ ಮುಖ್ಯವಾದುದು. 2022ರಲ್ಲಿ ಎಸ್‌ಆ್ಯಂಡ್‌ಪಿ 500, ಎಂಎಸ್‌ಸಿಐ ವರ್ಲ್ಡ್‌ ಇಂಡೆಕ್ಸ್‌ ಒಳಗೊಂಡು ಜಗತ್ತಿನ ಪ್ರಮುಖ ‌ಷೇರುಪೇಟೆಗಳೆಲ್ಲವೂ ಶೇಕಡ 12ರಿಂದ ಶೇ 15ರವರೆಗೆ ಕುಸಿತ ಕಂಡಿವೆ. ಆದರೆ ಭಾರತದ ಷೇರುಪೇಟೆಗಳು ಉತ್ತಮ ಗಳಿಕೆ ಕಂಡಿವೆ. ಎನ್‌ಎಸ್‌ಇ ನಿಫ್ಟಿ ಡಿಸೆಂಬರ್‌ 26ರವರೆಗಿನ ವಹಿವಾಟಿನಲ್ಲಿ ಶೇ 3.8ರವರೆಗೆ ಗಳಿಕೆ ಕಂಡುಕೊಂಡಿದೆ. 2022ರಲ್ಲಿ ಭಾರತದ ಆರ್ಥಿಕತೆಯು ಉತ್ತಮ ಬೆಳವಣಿಗೆ ಕಂಡಿರುವುದೇ ಷೇರುಪೇಟೆಗಳ ಈ ಗಳಿಕೆಗೆ ಪ್ರಮುಖ ಕಾರಣ. 2023ರಲ್ಲಿಯೂ ಷೇರುಪೇಟೆಯು ಇದೇ ಹಾದಿಯಲ್ಲಿ ಸಾಗುವ ನಿರೀಕ್ಷೆ ಇದೆ.

ದೇಶಿ ಹೂಡಿಕೆದಾರರ ಭಾಗವಹಿಸುವಿಕೆಯು ನೆಚ್ಚಿಕೊಳ್ಳಬಹುದಾದ ಶಕ್ತಿಯಾಗಿ 2022ರಲ್ಲಿ ಬೆಳವಣಿಗೆ ಕಂಡಿದ್ದು ಷೇರುಪೇಟೆಗಳ ಓಟಕ್ಕೆ ಇನ್ನೊಂದು ಪ್ರಮುಖ ಕಾರಣ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಹೆಚ್ಚಿನ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಂತಹ ಸಂದರ್ಭದಲ್ಲಿ ದೇಶಿ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಷೇರುಗಳನ್ನು ಖರೀದಿಸಲು ಗಮನ ಹರಿಸಿದರು. ಆ ಮೂಲಕ ಷೇರುಪೇಟೆಗಳು ಹೆಚ್ಚು ಕುಸಿತ ಕಾಣುವುದನ್ನು ತಪ್ಪಿಸಿದರು. 2022ರಲ್ಲಿ ಡಿಸೆಂಬರ್ 20ರವರೆಗಿನ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು (ಎಫ್‌ಐಐ) ₹ 1.46 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇನ್ನೊಂದೆಡೆ ದೇಶಿ ಹೂಡಿಕೆದಾರರು ಡಿಸೆಂಬರ್‌ 27ರವರೆಗಿನ ವಹಿವಾಟಿನಲ್ಲಿ ₹ 2.51 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಹೂಡಿಕೆದಾರರ ಬಲ ಇಲ್ಲದಿದ್ದಿದ್ದರೆ, ವಿದೇಶಿ ಹೂಡಿಕೆದಾರರಿಂದ ನಡೆದ ಮಾರಾಟದ ಪರಿಣಾಮವಾಗಿ ಮಾರುಕಟ್ಟೆಗಳು ನೆಲಕಚ್ಚುತ್ತಿದ್ದವು.

2020ರ ಏಪ್ರಿಲ್‌ನಿಂದ 2021ರ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ನಿಫ್ಟಿ ಸೂಚ್ಯಂಕವು 7,511 ಅಂಶಗಳ ಕನಿಷ್ಠ ಮಟ್ಟದಿಂದ 18,604 ಅಂಶಗಳಿಗೆ ಏರಿಕೆ ಕಂಡಿದೆ. ಆದರೆ ಆ ಬಳಿಕ ಇದುವರೆಗೆ 18 ಸಾವಿರದ ಅಸುಪಾಸಿನಲ್ಲಿಯೇ ವಹಿವಾಟು ನಡೆಸುತ್ತಿದೆ. ಏಕೆಂದರೆ ಒಂದು ದಿನ ನಿಫ್ಟಿ ಸೂಚ್ಯಂಕ ಶೇ 2–3ರಷ್ಟು ಏರಿಕೆ ಆದರೆ ಇನ್ನೊಂದು ದಿನ ಅಷ್ಟೇ ಪ್ರಮಾಣದಲ್ಲಿ ಇಳಿಕೆ ಕಂಡಿದ್ದಿದೆ. ಅನಿಶ್ಚಿತತೆ ಹೆಚ್ಚಿದ್ದಾಗ ಇಂತಹ ಚಲನೆಗಳು ಇರುತ್ತವೆ.

ADVERTISEMENT

ಅನಿಶ್ಚಿತ ಪರಿಸ್ಥಿತಿ ಮುಂದುವರಿಯಲಿದೆ

ಅಮೆರಿಕದ ಹಣದುಬ್ಬರ ಮತ್ತು ಉಕ್ರೇನ್‌ ಸಂಘರ್ಷದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ಅನಿಶ್ಚಿತ ಪರಿಸ್ಥಿತಿಯು ಈಗಿನಂತೆಯೇ ಮುಂದುವರಿಯಲಿದೆ. 2023ರ ಆರಂಭದಲ್ಲಿ ದೇಶದ ಮಾರುಕಟ್ಟೆಗಳ ಚಲನೆಯು ಹೆಚ್ಚು ಅಸ್ಥಿರವಾಗಿರುವ ಸಾಧ್ಯತೆ ಇದೆ.

ಜಾಗತಿಕ ಆರ್ಥಿಕತೆಯ ಮೂರು ಚಾಲಕ ಶಕ್ತಿಗಳಾಗಿರುವ ಅಮೆರಿಕ, ಐರೋ‍ಪ್ಯ ವಲಯ ಮತ್ತು ಚೀನಾದಲ್ಲಿ ಆರ್ಥಿಕ ಬೆಳವಣಿಗೆಯು ಇಳಿಮುಖವಾಗಿದೆ. ಹೀಗಾಗಿ ಹೊಸ ವರ್ಷದಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆ ಪ್ರಮಾಣವು 2022ರಲ್ಲಿ ಆಗಿರುವುದಕ್ಕಿಂತಲೂ ಕಡಿಮೆ ಇರುವ ಅಂದಾಜು ಮಾಡಲಾಗಿದೆ. ಅಮೆರಿಕದಲ್ಲಿ ಹಣದುಬ್ಬರದ ಪ್ರಮಾಣ ಮತ್ತು ಬಡ್ಡಿದರವು 2023ರಲ್ಲಿ ಷೇರುಪೇಟೆಗಳ ದಿಕ್ಕನ್ನು ನಿರ್ಧರಿಸಲಿವೆ. ಅಮೆರಿಕದಲ್ಲಿ ಹಣದುಬ್ಬರವು 40 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅದನ್ನು ನಿಯಂತ್ರಿಸಲು ಫೆಡರಲ್ ರಿಸರ್ವ್ 2022ರಲ್ಲಿ ಬಿಗಿ ಹಣಕಾಸು ನೀತಿಯ ಮೊರೆ ಹೋಗಿದೆ. ಇದೀಗ ಹಣದುಬ್ಬರವು ಇಳಿಕೆ ಕಾಣುವ ಸೂಚನೆ ನೀಡಿದ್ದು, ಇಳಿಕೆ ಹಾದಿಯಲ್ಲೇ ಮುಂದುವರಿದರೆ 2023ನೇ ಇಸವಿಯ ಆರಂಭದಲ್ಲಿಯೇ ಫೆಡರಲ್‌ ರಿಸರ್ವ್ ಬಡ್ಡಿದರ ಏರಿಕೆಗೆ ತುಸು ವಿರಾಮ ನೀಡುವ ಸಾಧ್ಯತೆ ಇರಲಿದೆ. ಆಗ ಷೇರುಪೇಟೆಗಳಲ್ಲಿ ಮತ್ತೆ ಗೂಳಿ ಓಟಕ್ಕೆ ವೇಗ ದೊರೆಯಲಿದೆ.

2023ರಲ್ಲಿ ಬಂಡವಾಳ ಹೂಡಿಕೆ ಹೇಗೆ?

ಹೊಸ ವರ್ಷದಲ್ಲಿ ಹೂಡಿಕೆದಾರರು ತಮ್ಮ ಬಳಿ ಇರುವ ಹಣವನ್ನು ಒಂದೇ ಕಡೆ ಹೂಡಿಕೆ ಮಾಡದೇ ಹಲವು ಕಡೆಗಳಲ್ಲಿ ತೊಡಗಿಸಬೇಕು. ಬಡ್ಡಿದರ ಏರಿಕೆ ಆಗುವುದರ ಜೊತೆಗೆ ಬಾಂಡ್ ಗಳಿಕೆಯೂ ಹೆಚ್ಚಾಗುತ್ತಿದೆ. ಹೀಗಾಗಿ ನಿಶ್ಚಿತ ಆದಾಯ ತರುವ ಹೂಡಿಕೆಗಳು ಆಕರ್ಷಕವಾಗುತ್ತಿವೆ. ಡೆಟ್‌ ಫಂಡ್‌ಗಳ ಮೇಲೆ ಹೂಡಿಕೆ ಮಾಡುವುದು ಬ್ಯಾಂಕ್‌ ಠೇವಣಿಗಳ ಮೇಲಿನ ಹೂಡಿಕೆಗಿಂತಲೂ ಉತ್ತಮ. ಏಕೆಂದರೆ, ತೆರಿಗೆ ಪಾವತಿಸಿದ ನಂತರದ ಗಳಿಕೆಯು ಡೆಟ್‌ ಫಂಡ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ, ನಿಶ್ಚಿತ ಆದಾಯ ಬರುವ ಕಡೆಗಳಲ್ಲಿ ಹಣ ತೊಡಗಿಸುವುದು ಹೆಚ್ಚು ಸೂಕ್ತವಾಗಲಿದೆ. ಡಾಲರ್ ಮೌಲ್ಯ ನಿಧಾನವಾಗಿ ಕಡಿಮೆ ಆಗಲು ಆರಂಭವಾದಾಗ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಫೆಡರಲ್‌ ರಿಸರ್ವ್ ಬಡ್ಡಿದರ ಏರಿಕೆಗೆ ವಿರಾಮ ನೀಡಿದರೆ ಮಾತ್ರ ಹೀಗಾಗಲಿದೆ.

ಸಾಲ ನೀಡಿಕೆ ಹೆಚ್ಚುತ್ತಿರುವುದು ಹಾಗೂ ಬಂಡವಾಳ ವೆಚ್ಚ ಜಾಸ್ತಿ ಆಗುತ್ತಿರುವುದು ದೇಶದ ಅರ್ಥ ವ್ಯವಸ್ಥೆಯಲ್ಲಿ ಕಂಡುಬಂದಿರುವ ಎರಡು ಮಹತ್ವದ ಬೆಳವಣಿಗೆಗಳು. 2022ರಲ್ಲಿ ಸಾಲ ನೀಡಿಕೆ ಮತ್ತು ಬಂಡವಾಳ ಸಂಗ್ರಹ ಉತ್ತಮ ಸ್ಥಿತಿಯಲ್ಲಿವೆ. ಸಾಲ ನೀಡಿಕೆಯು ಸದ್ಯ ಶೇ 17.5ರ ಮಟ್ಟದಲ್ಲಿ ಬೆಳೆದಿದೆ. ಹೀಗಾಗಿ 2023ರಲ್ಲಿಯೂ ಈ ಎರಡು ವಲಯಗಳ ಬೆಳವಣಿಗೆ ಹೆಚ್ಚಿನ ಪ್ರಮಾಣದಲ್ಲಿ ಇರುವ ಅಂದಾಜು ಮಾಡಲಾಗಿದೆ.

ವಲಯವಾರು, ಬಂಡವಾಳ ಸರಕುಗಳು ಮತ್ತು ಸಿಮೆಂಟ್‌ ಉತ್ತಮ ಗಳಿಕೆ ಕಾಣುವ ಸಾಮರ್ಥ್ಯ ಹೊಂದಿವೆ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಆತಂಕ ಎದುರಾಗಿರುವುದರಿಂದ 2023ನೇ ವರ್ಷದ ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ (ಐ.ಟಿ.) ವಲಯದ ಷೇರುಗಳು ದುರ್ಬಲವಾಗಿಯೇ ಇರುವ ಸಾಧ್ಯತೆ ಇದೆ. ಒಂದೊಮ್ಮೆ ಅಮೆರಿಕದ ಆರ್ಥಿಕತೆಯು ಉತ್ತಮ ಬೆಳವಣಿಗೆ ಕಾಣುವ ಸೂಚನೆ ಕಂಡರೆ ಆಗ ಐ.ಟಿ. ಷೇರುಗಳು ಚೇತರಿಕೆ ಹಾದಿಗೆ ಮರಳಬಹುದು.

ಸದ್ಯ ಭಾರತದ ಷೇರುಪೇಟೆಗಳ ಮೌಲ್ಯವು ಗರಿಷ್ಠ ಮಟ್ಟದಲ್ಲಿ ಇದೆ. ಜಾಗತಿಕ ಮಟ್ಟದಲ್ಲಿ ಯಾವುದೇ ಬದಲಾವಣೆ ಕಂಡುಬಂದರೂ ಅದು ಭಾರತದ ಮೇಲೆಯೂ ಪರಿಣಾಮ ಬೀರಲಿದ್ದು, ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯು ದೀರ್ಘಾವಧಿಗೆ ಬಂಡವಾಳ ಹೂಡಿಕೆ ಮಾಡುವವರಿಗೆ ಹೊಸದಾಗಿ ಷೇರು ಖರೀದಿಗೆ ಉತ್ತಮ ಅವಕಾಶಗಳನ್ನು ನೀಡಲಿದೆ.

ಲೇಖಕ: ಮುಖ್ಯ ಹೂಡಿಕೆ ತಜ್ಞ, ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.