ADVERTISEMENT

ವಹಿವಾಟು ಆರಂಭದಲ್ಲೇ 1,000 ಅಂಶ ಕುಸಿದ ಸೆನ್ಸೆಕ್ಸ್‌; ಐಟಿ ಷೇರುಗಳಲ್ಲಿ ತಲ್ಲಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2022, 4:41 IST
Last Updated 18 ಏಪ್ರಿಲ್ 2022, 4:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಐಟಿ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿದ್ದು, ಸೋಮವಾರ ದೇಶದ ಷೇರುಪೇಟೆಗಳಲ್ಲಿ ತಲ್ಲಣ ಸೃಷ್ಟಿಸಿದೆ. ಇನ್ಫೊಸಿಸ್‌ ಷೇರು ಶೇಕಡ 9ರಷ್ಟು ಕುಸಿದಿದ್ದು, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,000 ಅಂಶ ಇಳಿಕೆಯಾಗಿದೆ.

ವಹಿವಾಟು ಆರಂಭದಲ್ಲೇ ಸೆನ್ಸೆಕ್ಸ್‌ ಶೇಕಡ 1.76ರಷ್ಟು ಕುಸಿದು 57,320.61 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇಕಡ 1.54ರಷ್ಟು ಇಳಿಕೆಯಾಗಿ 17,197.65 ಅಂಶಗಳಲ್ಲಿ ವಹಿವಾಟು ನಡೆದಿದೆ. ಕಳೆದ ವಾರ ಎರಡೂ ಷೇರುಪೇಟೆಗಳ ಸೂಚ್ಯಂಕ ಶೇಕಡ 1.5ಕ್ಕೂ ಅಧಿಕ ಕುಸಿತ ದಾಖಲಾಗಿತ್ತು.

ಸಾರ್ವಜನಿಕ ರಜೆಯ ಕಾರಣ ಗುರುವಾರದಿಂದ ಷೇರುಪೇಟೆಗಳಲ್ಲಿ ವಹಿವಾಟು ನಡೆದಿರಲಿಲ್ಲ. ಬುಧವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು ₹2,061.04 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

ADVERTISEMENT

ಮಾರ್ಚ್‌ ತ್ರೈಮಾಸಿಕದಲ್ಲಿ ಇನ್ಫೊಸಿಸ್‌ ಲಾಭಾಂಶವು ₹5,686 ಕೋಟಿ ವರದಿಯಾಗಿದ್ದು, ವಿಶ್ಲೇಷಕರು ₹5,980 ಕೋಟಿ ಲಾಭ ನಿರೀಕ್ಷಿಸಿದ್ದರು. ಇಂದು ವಹಿವಾಟು ಆರಂಭವಾಗುತ್ತಿದ್ದಂತೆ ಕಂಪನಿ ಷೇರು ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಪ್ರಸ್ತುತ ಪ್ರತಿ ಷೇರು ₹1,631ರಲ್ಲಿ ವಹಿವಾಟು ನಡೆದಿದೆ.

ಇದರೊಂದಿಗೆ ಬಹುತೇಕ ಐಟಿ ಷೇರುಗಳು ಇಳಿಕೆಯಾಗಿದ್ದು, ನಿಫ್ಟಿ ಐಟಿ ಸೂಚ್ಯಂಕ ಶೇಕಡ 4ರಷ್ಟು ಕುಸಿದಿದೆ.

ಟೆಕ್‌ ಮಹೀಂದ್ರಾ, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಎಚ್‌ಸಿಎಲ್‌ ಟೆಕ್‌ ಷೇರುಗಳು ತೀವ್ರ ಕುಸಿತಕ್ಕೆ ಒಳಗಾಗಿವೆ. ಇದೇ ಅವಧಿಯಲ್ಲಿ ಒನ್‌ಜಿಸಿ, ಐಟಿಸಿ, ಟಾಟಾ ಸ್ಟೀಲ್‌, ಎನ್‌ಟಿಪಿಸಿ, ಕೋಲ್‌ ಇಂಡಿಯಾ ಹಾಗೂ ಬಜಾಜ್‌ ಆಟೊ ಷೇರುಗಳು ಅಲ್ಪ ಗಳಿಕೆ ದಾಖಖಲಿಸಿವೆ.

ಅಮೆರಿಕದ ಡಾಲರ್‌ ಎದುರು ರೂಪಾಯಿ ಬೆಲೆ 24 ಪೈಸೆ ಕಡಿಮೆಯಾಗಿ ಪ್ರತಿ ಡಾಲರ್‌ಗೆ ₹76.43ರಲ್ಲಿ ವಹಿವಾಟು ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.