ADVERTISEMENT

ಹಿಂಡನ್‌ಬರ್ಗ್‌ ವರದಿ ಪರಿಣಾಮ: ಅದಾನಿ ಸಮೂಹಕ್ಕೆ ₹9.5 ಲಕ್ಷ ಕೋಟಿ ನಷ್ಟ

ಪಿಟಿಐ
Published 7 ಫೆಬ್ರುವರಿ 2023, 1:07 IST
Last Updated 7 ಫೆಬ್ರುವರಿ 2023, 1:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ : ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ ₹ 9.5 ಲಕ್ಷ ಕೋಟಿಯಷ್ಟು ಇಳಿಕೆ ಕಂಡಿದೆ.

ಅಮೆರಿಕದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ ವರದಿ ಪ್ರಕಟವಾದ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯ ಇಳಿಕೆ ಕಾಣುತ್ತಲೇ ಇದೆ.

ಸೋಮವಾರದ ವಹಿವಾಟಿನ ಅಂತ್ಯದ ಹೊತ್ತಿಗೆ ಅದಾನಿ ಸಮೂಹದ 10 ಕಂಪನಿಗಳಲ್ಲಿ ಆರು ಕಂಪನಿಗಳ ಷೇರು ಮೌಲ್ಯ ಇಳಿಕೆ ಕಂಡಿತು. ನಾಲ್ಕು ಕಂಪನಿಗಳು ಸಕಾರಾತ್ಮಕವಾಗಿ ವಹಿವಾಟು ಅಂತ್ಯಗೊಳಿಸಿದವು.

ADVERTISEMENT

ಜನವರಿ 24ರಿಂದ ಫೆಬ್ರುವರಿ 6ರವರೆಗೆ ನಡೆದಿರುವ 9 ದಿನಗಳ ವಹಿವಾಟಿನಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ಶೇಕಡ 49ರಷ್ಟು (₹ 9.5 ಲಕ್ಷ ಕೋಟಿ) ಇಳಿಕೆ ಆಗಿದೆ ಎಂದು ಸ್ಟಾಕ್ಸ್‌ಬಾಕ್ಸ್‌ ಕಂಪನಿಯ ಸಂಶೋಧನಾ ಮುಖ್ಯಸ್ಥ ಮನಿಷ್‌ ಚೌಧರಿ ಮಾಹಿತಿ ನೀಡಿದ್ದಾರೆ.

ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯು ಅದಾನಿ ಸಮೂಹದ ಕಂಪನಿಗಳ ಷೇರುಗಳನ್ನು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾಗುವಂತೆ ಮಾಡಿತು. ಅದಾನಿ ಎಂಟರ್‌ಪ್ರೈಸ್‌ ತನ್ನ ಎಫ್‌ಪಿಒ ರದ್ದು ಮಾಡಿದ ನಿರ್ಧಾರವು ಮತ್ತಷ್ಟು ಏರಿಳಿತಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಅದಾನಿ ಸಮೂಹವು ಒಂದಿಷ್ಟು ಸಾಲವನ್ನು ಅವಧಿಗೆ ಮೊದಲೇ ತೀರಿಸಲಿದೆ ಎಂಬ ಮಾಹಿತಿಯು ಕೆಲವು ಕಂಪನಿಗಳ ಷೇರು ಮೌಲ್ಯದಲ್ಲಿ ಸ್ಥಿರತೆ ಮೂಡಿಸಿದಂತೆ ಕಾಣುತ್ತಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್ ರಿಸರ್ಚ್‌ನ ಮುಖ್ಯಸ್ಥ ದೀಪಕ್‌ ಜಸನಿ ತಿಳಿಸಿದ್ದಾರೆ.

ನಕಾರಾತ್ಮಕ ವಹಿವಾಟು: ದೇಶದ ಷೇರುಪೇಟೆಗಳಲ್ಲಿ ಸೋಮವಾರ ನಕಾರಾತ್ಮಕ ವಹಿವಾಟು ನಡೆಯಿತು. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 335 ಅಂಶ ಇಳಿಕೆ ಕಂಡರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 89 ಅಂಶ ಇಳಿಕೆ ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.