ಪಾಶ್ಚಿಮಾತ್ಯ ಬಿಕ್ಕಟ್ಟು ಷೇರುಪೇಟೆಗಳಲ್ಲಿ ದೊಡ್ಡಮಟ್ಟದ ಅನಿಶ್ಚಿತತೆ ಮೂಡಿಸಿದೆ. ಇಸ್ರೇಲ್–ಹಮಾಸ್ ಬಿಕ್ಕಟ್ಟು ಮಾರುಕಟ್ಟೆಯ ಮೇಲೆ ಈವರೆಗೆ ಹೆಚ್ಚು ಹಾನಿ ಉಂಟುಮಾಡಿಲ್ಲ. ಎಲ್ಲಿಯವರೆಗೆ ಈ ಬಿಕ್ಕಟ್ಟು ಸ್ಥಳೀಯ ಮಟ್ಟದಲ್ಲಿಯೇ ಇರುತ್ತದೆಯೋ ಅಲ್ಲಿಯವರೆಗೆ ಮಾರುಕಟ್ಟೆ ಮೇಲೆ ಪರಿಣಾಮದ ತೀವ್ರತೆ ಕಡಿಮೆ ಮಟ್ಟದಲ್ಲಿಯೇ ಇರಲಿದೆ.
ಒಂದೊಮ್ಮೆ ಬಿಕ್ಕಟ್ಟು ತೀವ್ರಗೊಂಡು ಬೇರೆ ಪ್ರದೇಶಗಳಿಗೂ ವ್ಯಾಪಿಸಿದರೆ, ಜಾಗತಿಕ ಕಚ್ಚಾ ತೈಲ ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಅದರಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಭಾರತದಂತಹ ದೇಶಗಳಿಗೆ ಸಮಸ್ಯೆ ಆಗಲಿದೆ. ಹೀಗಾಗಿ ಹೂಡಿಕೆದಾರರು ಹೆಚ್ಚು ಎಚ್ಚರಿಕೆಯಿಂದ ಇರಬೇಕು.
ಡಾಲರ್ ವೃದ್ಧಿ, ಬಾಂಡ್ ಗಳಿಕೆಯು ಅಲ್ಪಾವಧಿಯ ಅಪಾಯಗಳಾಗಿವೆ. ಅಕ್ಟೋಬರ್ ಆರಂಭದಲ್ಲಿ ಡಾಲರ್ ಇಂಡೆಕ್ಸ್ 107ಕ್ಕೆ ಏರಿಕೆ ಕಂಡಿದೆ. ಅಮೆರಿಕದ 10 ವರ್ಷಗಳ ಬಾಂಡ್ ಲಾಭವು ಶೇ 4.88ರಷ್ಟನ್ನು ದಾಟಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಡಾಲರ್ ಇಂಡೆಕ್ಸ್ 106ಕ್ಕಿಂತ ಕೆಳಕ್ಕೆ ಮತ್ತು 10 ವರ್ಷದ ಬಾಂಡ್ ಗಳಿಕೆಯು ಶೇ 4.65ಕ್ಕೆ ಇಳಿಕೆ ಕಂಡಿದೆ. ಡಾಲರ್ ಮತ್ತು ಬಾಂಡ್ ಗಳಿಕೆಯಿಂದಾಗಿ ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು ಕಂಡುಬರುತ್ತಿದೆ. ಸೆಪ್ಟೆಂಬರ್‌ನಲ್ಲಿ ₹26,689 ಕೋಟಿ ಮೌಲ್ಯದ ಹೊರಹರಿವು ಕಂಡುಬಂದಿದೆ. ಅಕ್ಟೋಬರ್‌ನ ಮೊದಲ ಆರು ದಿನಗಳಲ್ಲಿ ₹10,414 ಕೋಟಿ ಹಿಂತೆಗೆತ ಆಗಿದೆ. ಇದೇ ವೇಳೆ, ದೇಶಿ ಸಾಂಸ್ಥಿಕ ಹೂಡಿಕೆದಾರರು (ಡಿಐಐ), ಸಿರಿವಂತರು (ಎಚ್‌ಎನ್‌ಐ) ಮತ್ತು ರಿಟೇಲ್ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಮೂಲಕ ಷೇರುಪೇಟೆಯಲ್ಲಿ ಸ್ಥಿರತೆಗೆ ಕಾರಣವಾಗುತ್ತಿದ್ದಾರೆ.
ಭಾರತದ ಆರ್ಥಿಕತೆಗಿದೆ ಚೇತರಿಸಿಕೊಳ್ಳುವ ಗುಣ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯು ಶೇ 6.5ರಷ್ಟು ಬೆಳವಣಿಗೆ ಕಾಣುವ ಅಂದಾಜು ಮಾಡಲಾಗಿದೆ. ಪ್ರಮುಖ ಅಂಶಗಳು ಅದರ ಸೂಚನೆ ನೀಡುತ್ತಿವೆ. ನೇರ ತೆರಿಗೆ ಸಂಗ್ರಹವು ಏಪ್ರಿಲ್ 1 ರಿಂದ ಅಕ್ಟೋಬರ್ 9ರವರೆಗಿನ ಅವಧಿಯಲ್ಲಿ ಶೇ 21.8ರಷ್ಟು ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಿಎಸ್‌ಟಿ ಸಂಗ್ರಹ ಶೇ 11ರಷ್ಟು ಬೆಳವಣಿಗೆ ಕಂಡಿದೆ. ಸೆಪ್ಟೆಂಬರ್‌ನಲ್ಲಿ ಮುಂಗಾರು ಚೇತರಿಕೆ ಕಂಡಿದೆ. ಜಿಡಿಪಿಗೆ ಕೊಡುಗೆ ನೀಡುವ ಹಲವು ವಲಯಗಳು ಉತ್ತಮ ಬೆಳವಣಿಗೆ ಕಂಡಿವೆ. ಮೂಲಸೌಕರ್ಯ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸರ್ಕಾರವು ಹೆಚ್ಚು ವೆಚ್ಚ ಮಾಡುತ್ತಿದೆ. ಇದರಿಂದಾಗಿ ಸಿಮೆಂಟ್, ಉಕ್ಕು ಮತ್ತು ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಖಾಸಗಿ ಬಂಡವಾಳ ಹೂಡಿಕೆಯು ಸಹ ಬಂಡವಾಳ ಸರಕುಗಳ ವಿಭಾಗದಲ್ಲಿ ಚೇತರಿಕೆಗೆ ಕಾರಣವಾಗುತ್ತಿದೆ. ಐಷಾರಾಮಿ ಸರಕುಗಳ ಖರೀದಿ ಹೆಚ್ಚಾಗಿದೆ. ರಿಯಲ್ ಎಸ್ಟೇಟ್, ಹೋಟೆಲ್ ಮತ್ತು ಆಟೊಮೊಬೈಲ್ ವಲಯಗಳು ಉತ್ತಮ ಬೆಳವಣಿಗೆ ಕಾಣುತ್ತಿವೆ. ಸಾಲ ನೀಡಿಕೆ ಪ್ರಮಾಣ ಹೆಚ್ಚಾಗುತ್ತಿರುವುದು ಹಣಕಾಸು ಸಂಸ್ಥೆಗಳ ಆರೋಗ್ಯಕರ ಸ್ಥಿತಿಯನ್ನು ತಿಳಿಸುತ್ತಿವೆ. ಇನ್ನೊಂದು ಮಗ್ಗುಲಲ್ಲಿ ಜಾಗತಿಕ ಮಂದಗತಿಯ ಬೆಳವಣಿಗೆಯಿಂದಾಗಿ ದೇಶದ ಐ.ಟಿ. ವಲಯ ಚೇತರಿಕೆ ಕಾಣಲು ಕಷ್ಟಪಡುತ್ತಿದೆ. ಹೀಗಿದ್ದರೂ ಐ.ಟಿ. ವಲಯದ ಮೌಲ್ಯವು ಆಕರ್ಷಕವಾಗಿದೆ.
ಬಾಹ್ಯ ಅಪಾಯಗಳನ್ನು ಗಮನಿಸುವುದಾದರೆ, ಪಶ್ಚಿಮ ಏಷ್ಯಾದ ಪರಿಸ್ಥಿತಿಯು ಭಾರತದ ಪಾಲಿಗೆ ಅತಿದೊಡ್ಡ ಅಪಾಯವಾಗಿದೆ. ಚೀನಾದಲ್ಲಿ ರಿಯಲ್ ಎಸ್ಟೇಟ್ ವಲಯದ ಕುಸಿತವು ಜಾಗತಿಕ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅಲ್ಪಾವಧಿಗೆ ಅಮೆರಿಕ ಮತ್ತು ಚೀನಾದ ಆರ್ಥಿಕ ಬೆಳವಣಿಗೆಯು ಜಾಗತಿಕ ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸಲಿವೆ. ದೀರ್ಘಾವಧಿಗೆ ಬಂಡವಾಳ ಹೂಡಿಕೆ ಮಾಡುವವರು ಅಲ್ಪಾವಧಿಯ ಸಮಸ್ಯೆಗಳನ್ನು ಕಡೆಗಣಿಸಿ ಭಾರತದಲ್ಲಿ ಹೂಡಿಕೆ ಮುಂದುವರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.