ADVERTISEMENT

Share Market | ಸೆನ್ಸೆಕ್ಸ್, ನಿಫ್ಟಿ ಏರಿಕೆ

ಪಿಟಿಐ
Published 26 ಜೂನ್ 2024, 14:22 IST
Last Updated 26 ಜೂನ್ 2024, 14:22 IST
<div class="paragraphs"><p>ಷೇರುಪೇಟೆ</p></div>

ಷೇರುಪೇಟೆ

   

(ಪಿಟಿಐ ಚಿತ್ರ)

ಮುಂಬೈ: ಏಷ್ಯಾದ ಷೇರುಪೇಟೆಯಲ್ಲಿನ ಸಕಾರಾತ್ಮಕ ವಹಿವಾಟಿನಿಂದಾಗಿ ದೇಶದ ಷೇರುಪೇಟೆಗಳಲ್ಲಿ ಬುಧವಾರವೂ ಗೂಳಿ ಓಟ ಮುಂದುವರಿಯಿತು. ರಿಲಯನ್ಸ್‌ ಇಂಡಸ್ಟ್ರಿಸ್ ಷೇರುಗಳ ಖರೀದಿ ಭರಾಟೆಯು ಸೂಚ್ಯಂಕಗಳು ಹೊಸ ಎತ್ತರಕ್ಕೆ ಜಿಗಿಯಲು ನೆರವಾಯಿತು.

ADVERTISEMENT

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 620 ಅಂಶ ಏರಿಕೆ (ಶೇ 0.80ರಷ್ಟು) ಕಂಡು 78,674 ಅಂಶಗಳಲ್ಲಿ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 705 ಅಂಶ ಏರಿಕೆ ಕಂಡಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 147 ಅಂಶ ಏರಿಕೆ (ಶೇ 0.62ರಷ್ಟು) ಕಂಡು 23,868 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿತು. 

ಸೆನ್ಸೆಕ್ಸ್‌ ಗುಚ್ಛದಲ್ಲಿನ ಭಾರ್ತಿ ಏರ್‌ಟೆಲ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಸನ್‌ ಫಾರ್ಮಾ, ಅದಾನಿ ಪೋರ್ಟ್ಸ್‌, ಎಕ್ಸಿಸ್‌ ಬ್ಯಾಂಕ್‌, ಎನ್‌ಟಿಪಿಸಿ ಹಾಗೂ ಬಜಾಜ್‌ ಫೈನಾನ್ಸ್‌ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ.

ಮಹೀಂದ್ರ ಆ್ಯಂಡ್‌ ಮಹೀಂದ್ರ, ಟಾಟಾ ಸ್ಟೀಲ್‌, ಟೆಕ್‌ ಮಹೀಂದ್ರ ಹಾಗೂ ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರಿನ ಮೌಲ್ಯ ಕುಸಿದಿದೆ. 

‘ಭಾರತದ ಜಿಡಿಪಿ ಬೆಳವಣಿಗೆ ಕುರಿತ ಧನಾತ್ಮಕ ವರದಿಗಳು ಮತ್ತು ಚಿಲ್ಲರೆ ಹಣದುಬ್ಬರವು ಇಳಿಕೆಯ ಹಾದಿಗೆ ಮರಳುತ್ತಿರುವುದು ದೇಶೀಯ ಸೂಚ್ಯಂಕಗಳ ಏರಿಕೆಗೆ ನೆರವಾಗಿದೆ. ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಏರಿಕೆ ಕಂಡಿವೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಸೋಲ್‌, ಟೋಕಿಯೊ, ಶಾಂಘೈ ಹಾಗೂ ಹಾಂಗ್‌ಕಾಂಗ್‌ ಮಾರುಕಟ್ಟೆಗಳು ಗಳಿಕೆ ಕಂಡಿವೆ. ಜಾಗತಿಕ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಶೇ 0.80ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 85.69 ಡಾಲರ್‌ ಆಗಿದೆ. 

ಮಂಗಳವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹1,175 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ರಿಲಯನ್ಸ್ ಎಂ–ಕ್ಯಾಪ್‌ಗೆ ₹80 ಸಾವಿರ ಕೋಟಿ ಸೇರ್ಪಡೆ

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರಿಸ್‌ ಷೇರಿನ ಮೌಲ್ಯದಲ್ಲಿ ಶೇ 4ರಷ್ಟು ಏರಿಕೆಯಾಗಿದ್ದು ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ಒಂದೇ ದಿನ ₹80359 ಕೋಟಿ ಸೇರ್ಪಡೆಯಾಗಿದೆ.  ಕಂಪನಿಯ ಮಾರುಕಟ್ಟೆ ಮೌಲ್ಯವು ₹20.48 ಲಕ್ಷ ಕೋಟಿ ದಾಟಿದೆ.  ಬಿಎಸ್ಇಯಲ್ಲಿ ಷೇರಿನ ಮೌಲ್ಯದಲ್ಲಿ ಶೇ 4.09ರಷ್ಟು ಏರಿಕೆಯಾಗಿದ್ದು ಪ್ರತಿ ಷೇರಿನ ಬೆಲೆ ₹3027 ಆಗಿದೆ. ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯದಲ್ಲಿ ಶೇ 3.87ರಷ್ಟು ಹೆಚ್ಚಳವಾಗಿದ್ದು ಪ್ರತಿ ಷೇರಿನ ಬೆಲೆಯು ₹3021ಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.