ADVERTISEMENT

ಗೂಳಿ ಓಟಕ್ಕೆ ಕರಡಿ ತಡೆ: ಸೆನ್ಸೆಕ್ಸ್‌ 426, ನಿಫ್ಟಿ 108 ಅಂಶ ಇಳಿಕೆ

ಪಿಟಿಐ
Published 10 ಜುಲೈ 2024, 14:03 IST
Last Updated 10 ಜುಲೈ 2024, 14:03 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಮುಂಬೈ/ ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಬುಧವಾರ ಗೂಳಿ ಓಟಕ್ಕೆ ತಡೆ ಬಿದ್ದಿದ್ದು, ಕರಡಿ ಕುಣಿತ ಜೋರಾಯಿತು.

ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ಸೂಚ್ಯಂಕಗಳು ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾಗಿದ್ದರಿಂದ ಇಳಿಕೆಯ ಹಾದಿ ಹಿಡಿದವು. ಇದರಿಂದ ಲೋಹ, ಆಟೊ ಮತ್ತು ಐ.ಟಿ ಷೇರುಗಳು ನಷ್ಟ ಕಂಡಿವೆ.

ADVERTISEMENT

ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಬೆಳವಣಿಗೆಯು ಮಂದಗತಿಯಲ್ಲಿದೆ. ಇದು ಸರಕುಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ಮತ್ತೊಂದೆಡೆ ಅಮೆರಿಕದ ಫೆಡರಲ್‌ ರಿಸರ್ವ್‌ನ ಬಡ್ಡಿ ದರ ಕಡಿತದ ಬಗ್ಗೆ ಅನಿಶ್ಚಿತತೆ ತಲೆದೋರಿದೆ. ಹಾಗಾಗಿ, ಸೂಚ್ಯಂಕಗಳು ಇಳಿಕೆ ಕಂಡಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮುಂಬೈ ಷೇರು ಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 426 ಅಂಶ ಇಳಿಕೆಯಾಗಿ 79,924ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನ ವೇಳೆ 915 ಅಂಶ ಕುಸಿತ ಕಂಡಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 108 ಅಂಶ ಕಡಿಮೆಯಾಗಿ 24,324ಕ್ಕೆ ಅಂತ್ಯಗೊಂಡಿತು. ವಹಿವಾಟಿನ ವೇಳೆ 291 ಅಂಶ ಕುಸಿದಿತ್ತು. 

ಟಾಟಾ ಸ್ಟೀಲ್‌, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ, ಜೆಎಸ್‌ಡಬ್ಲ್ಯು ಸ್ಟೀಲ್‌, ಟಾಟಾ ಮೋಟರ್ಸ್‌ ಮತ್ತು ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಏಷ್ಯನ್‌ ಪೇಂಟ್ಸ್‌, ಎನ್‌ಟಿಪಿಸಿ, ಪವರ್‌ ಗ್ರಿಡ್‌, ಅದಾನಿ ಪೋರ್ಟ್ಸ್‌ ಮತ್ತು ಭಾರ್ತಿ ಏರ್‌ಟೆಲ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 0.69 ಮತ್ತು ಮಿಡ್‌ಕ್ಯಾಪ್‌ ಸೂಚ್ಯಂಕ ಶೇ 0.19ರಷ್ಟು ಇಳಿದಿದೆ. ಬ್ರೆಂಟ್‌ ಕಚ್ಚಾ ತೈಲವು ಶೇ 0.24ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 84.66 (₹7,086) ಡಾಲರ್‌ಗೆ ಮುಟ್ಟಿದೆ.

ಮಹೀಂದ್ರ ಎಂ–ಕ್ಯಾಪ್‌ ₹24087 ಕೋಟಿ ಇಳಿಕೆ

ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ತನ್ನ ಎಸ್‌ಯುವಿ ಮಾದರಿಯ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಲು ದರ ಕಡಿತ ಮಾಡಿದ್ದರಿಂದ ಕಂಪನಿಯ ಷೇರಿನ ಮೌಲ್ಯದಲ್ಲಿ ಶೇ 7ರಷ್ಟು ಇಳಿಕೆಯಾಗಿದೆ.  ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ ₹2732 ಮತ್ತು ₹2729ಕ್ಕೆ ಇಳಿದಿದೆ.  ಒಂದೇ ದಿನ ಕಂಪನಿಯ ಮಾರುಕಟ್ಟೆ ಮೌಲ್ಯವು ₹24087 ಕೋಟಿ ಕರಗಿದೆ. ಒಟ್ಟು ಎಂ–ಕ್ಯಾಪ್‌ ₹3.39 ಲಕ್ಷ ಕೋಟಿ ಆಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.