ADVERTISEMENT

ಅದಾನಿ ಗ್ರೂಪ್‌ ಕಾರ್ಮೋಡದ ನಡುವೆಯೂ ಷೇರುಪೇಟೆಯಲ್ಲಿ ಗೂಳಿ ಓಟ

ಪಿಟಿಐ
Published 22 ನವೆಂಬರ್ 2024, 13:05 IST
Last Updated 22 ನವೆಂಬರ್ 2024, 13:05 IST
<div class="paragraphs"><p>ಷೇರುಪೇಟೆ</p></div>

ಷೇರುಪೇಟೆ

   

ಮುಂಬೈ: ದೇಶದ ಷೇರುಪೇಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಗೂಳಿಯ ನಾಗಾಲೋಟದಿಂದಾಗಿ ಸೂಚ್ಯಂಕಗಳು ಏರಿಕೆ ಕಂಡಿವೆ. 

ದೇಶೀಯ ಸಾಂಸ್ಥಿಕ ಹೂಡಿಕೆದಾರರು ಹೆಚ್ಚು ಷೇರುಗಳನ್ನು ಖರೀದಿಸಿದ್ದರಿಂದ  ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಹೂಡಿಕೆದಾರರ ಸಂಪತ್ತು ₹7.32 ಲಕ್ಷ ಕೋಟಿ ಏರಿಕೆಯಾಗಿದೆ.

ADVERTISEMENT

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1,961 ಅಂಶ ಏರಿಕೆ ಕಂಡು, 79,117 ಅಂಶಗಳಲ್ಲಿ ಸ್ಥಿರಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 2,062 ಅಂಶ ಏರಿಕೆ ಕಂಡಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 557 ಅಂಶ ಏರಿಕೆ ಕಂಡು, 23,907 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ಸೆನ್ಸೆಕ್ಸ್ ಗುಚ್ಛದಲ್ಲಿನ ಎಲ್ಲಾ ಕಂಪನಿಗಳ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಟಿಸಿಎಸ್‌, ಟೈಟನ್‌, ಐಟಿಸಿ, ಇನ್ಫೊಸಿಸ್‌, ಎಲ್‌ ಆ್ಯಂಡ್ ಟಿ, ರಿಲಯನ್ಸ್‌ ಇಂಡಸ್ಟ್ರಿಸ್‌, ಬಜಾಜ್‌ ಫೈನಾನ್ಸ್‌ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ. 

ಗುರುವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹5,320 ಕೋಟಿ ಮೌಲ್ಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹4,200 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಅದಾನಿ ಸಮೂಹದ 6 ಕಂಪನಿ ಷೇರಿನ ಮೌಲ್ಯ ಚೇತರಿಕೆ

ಅದಾನಿ ಸಮೂಹದ 10 ಕಂಪನಿಗಳ ಪೈಕಿ ಆರು ಕಂಪನಿಗಳ ಷೇರಿನ ಮೌಲ್ಯವು ಶುಕ್ರವಾರ ಚೇತರಿಕೆ ಕಂಡಿದೆ.

ಅಂಬುಜಾ ಸಿಮೆಂಟ್ಸ್‌ ಶೇ 3.50, ಎಸಿಸಿ ಶೇ 3.17, ಅದಾನಿ ಎಂಟರ್‌ಪ್ರೈಸಸ್‌ ಶೇ 2.16, ಅದಾನಿ ಪೋರ್ಟ್ಸ್‌ ಶೇ 2.05, ಅದಾನಿ ಟೋಟಲ್‌ ಗ್ಯಾಸ್‌ ಶೇ 1.18 ಹಾಗೂ ಎನ್‌ಡಿಟಿವಿ ಷೇರಿನ ಮೌಲ್ಯದಲ್ಲಿ ಶೇ 0.65ರಷ್ಟು ಏರಿಕೆಯಾಗಿದೆ.

ಅದಾನಿ ಗ್ರೀನ್‌ ಎನರ್ಜಿ ಶೇ 8.20, ಅದಾನಿ ಎನರ್ಜಿ ಸಲ್ಯೂಷನ್ಸ್‌ ಶೇ 6.92, ಅದಾನಿ ಪವರ್‌ ಶೇ 3.23 ಹಾಗೂ ಅದಾನಿ ವಿಲ್ಮರ್‌ ಷೇರಿನ ಮೌಲ್ಯದಲ್ಲಿ ಶೇ 0.73ರಷ್ಟು ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.