ನವದೆಹಲಿ: ಡಿಜಿಟಲ್ ಮತ್ತು ರಿಟೇಲ್ ಉದ್ಯಮಗಳಿಗೆ ವಿದೇಶಿ ಸಂಸ್ಥೆಗಳಿಂದ ಹೂಡಿಕೆ ಪಡೆದಿರುವ ರಿಲಯನ್ಸ್ ಇಂಡಸ್ಟ್ರೀಸ್ ಈಗ ದೇಶೀಯ ಹೂಡಿಕೆದಾರರನ್ನು ಮತ್ತಷ್ಟು ಸೆಳೆದುಕೊಂಡಿದೆ. ಈ ವರ್ಷ ಕಂಪನಿಯ ಷೇರು ಶೇ 46ರಷ್ಟು ಏರಿಕೆ ದಾಖಲಿಸಿದ್ದು, ಜಾಗತಿಕ ಮಟ್ಟದಲ್ಲಿ ಎರಡನೇ ಅತಿ ದೊಡ್ಡ ಇಂಧನ ಸಂಸ್ಥೆಯಾಗಿ ಬೆಳೆದಿದೆ.
ಅಮೆರಿಕ ಮೂಲದ ಎಕ್ಸಾನ್ ಮೊಬೈಲ್ ಕಾರ್ಪೊರೇಷನ್ ಹಿಂದಿಟ್ಟಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸೌದಿ ಅರಾಮ್ಕೊ ಕಂಪನಿಯ ನಂತರದ ಸ್ಥಾನಕ್ಕೇರಿದೆ. ಶುಕ್ರವಾರದ ಪೇರುಪೇಟೆ ವಹಿವಾಟಿನಲ್ಲಿ ಶೇ 4.3ರಷ್ಟು ಹೆಚ್ಚಳ ಕಂಡ ರಿಲಯನ್ಸ್‌ನ ಮಾರುಕಟ್ಟೆ ಮೌಲ್ಯ 189 ಬಿಲಿಯನ್ ಡಾಲರ್ ತಲುಪಿತು. ಆದರೆ, ಜಾಗತಿಕವಾಗಿ ತೈಲ ಬೇಡಿಕೆ ಕುಸಿದಿರುವುದರಿಂದ ಎಕ್ಸಾನ್‌ನ ಷೇರು ಮೌಲ್ಯ ಈ ವರ್ಷ ಶೇ 39ರಷ್ಟು ಕುಸಿದಿದೆ.
ಜಗತ್ತಿನ ಅತಿ ದೊಡ್ಡ ತೈಲ ಕಂಪನಿ ಸೌದಿ ಅರಾಮ್ಕೊ ಮಾರುಕಟ್ಟೆ ಮೌಲ್ಯ 1.75 ಟ್ರಿಲಿಯನ್ (ಲಕ್ಷ ಕೋಟಿ) ಡಾಲರ್ ಇದೆ.
ಸೋಮವಾರದ ವಹಿವಾಟಿನಲ್ಲೂ ರಿಲಯನ್ಸ್ ಷೇರು ಗಳಿಕೆ ದಾಖಲಿಸಿದ್ದು, ಪ್ರತಿ ಷೇರು ಬೆಲೆ ₹2,154.95 ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ರಿಲಯನ್ಸ್ ಕಂಪನಿಯ ಆದಾಯದಲ್ಲಿ ಶೇ 80ರಷ್ಟು ಇಂಧನ ಉದ್ಯಮದಿಂದಲೇ ದಾಖಲಾಗಿದೆ. ಡಿಜಿಟಲ್ ಮತ್ತು ರಿಟೇಲ್ ಉದ್ಯಮವನ್ನು ವಿಸ್ತರಿಸುವ ಮುಕೇಶ್ ಅಂಬಾನಿ ಅವರ ಮಹಾತ್ವಾಕಾಂಕ್ಷೆಯಿಂದ ಜಿಯೊ ಪ್ಲಾಟ್‌ಫಾರ್ಮ್ಸ್‌ಗೆ 20 ಬಿಲಿಯನ್ ಡಾಲರ್ ಹೂಡಿಕೆ ಹರಿದು ಬಂದಿದೆ. ಇದರಿಂದಾಗಿ ಇದೇ ವರ್ಷ ಮುಕೇಶ್ ಅಂಬಾನಿ ಸಂಪತ್ತಿಗೆ 22.3 ಬಿಲಿಯನ್ ಡಾಲರ್ ಸೇರ್ಪಡೆಯಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸಾಲಿನಲ್ಲಿ ಅವರು 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ತಂದೆಯ ನಂತರದಲ್ಲಿ ಇಂಧನ ಉದ್ಯಮವನ್ನು ಬೆಳೆಸಿಕೊಂಡು ಬಂದ ಮುಕೇಶ್ ಈಗ ಭವಿಷ್ಯದ ಉದ್ಯಮದ ಕಡೆಗೆ ಮುಖ ಮಾಡಿದ್ದಾರೆ. ತಂತ್ರಜ್ಞಾನ ಮತ್ತು ರಿಟೇಲ್ ವಲಯಗಳನ್ನು ಮುಂದುವರಿಯುವ ಕ್ಷೇತ್ರಗಳಾಗಿ ಗುರುತಿಸಿಕೊಂಡು ಗೂಗಲ್ ಮತ್ತು ಫೇಸ್‌ಬುಕ್‌ನಂತಹ ಬೃಹತ್ ಕಂಪನಿಗಳಿಂದ ಹೂಡಿಕೆ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.
ಕೊರೊನಾ ವೈರಸ್ ಕಾರಣದಿಂದಾಗಿ ಲಾಕ್‌ಡೌನ್ ಜಾರಿಯಾಗಿ ವಿಶ್ವದ ಬಹುತೇಕ ಭಾಗಗಳಲ್ಲಿ ಸಂಚಾರ, ಸಾರಿಗೆ ಸ್ಥಗಿತಗೊಂಡಿತು. ತೈಲ ಬೇಡಿಕೆ ದಿಢೀರ್ ಕುಸಿತ ಉಂಟಾಯಿತು. ತೈಲ ಸಂಸ್ಕರಣಾ ಘಟಕಗಳು, ಸಂಗ್ರಹಗಳು ಭರ್ತಿಯಾದವು. ಬೇಡಿಕೆ ಇಳಿಯುವ ಜೊತೆಗೆ ಬೆಲೆಯೂ ತೀವ್ರ ಇಳಿಕೆಯಾಗಿ ತೈಲ ಕಂಪನಿಗಳಿಗೆ ಹೊಡೆತ ನೀಡಿದೆ. ಎಕ್ಸಾನ್ ಮತ್ತು ಶೆವರಾನ್ ಕಾರ್ಪೊರೇಷನ್ ಸೇರಿದಂತೆ ಬಹುತೇಕ ಎಲ್ಲ ಇಂಧನ ಕಂಪನಿಗಳು ನಷ್ಟ ಅನುಭವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.