ಕೋವಿಡ್ ಶುರುವಾರ ನಂತರದ ಸರಿಸುಮಾರು ಎರಡು ವರ್ಷ ಷೇರುಪೇಟೆಯಲ್ಲಿ ಗೂಳಿ ಓಟವಿತ್ತು. ಪರಿಣಾಮವಾಗಿ, ಹೂಡಿಕೆದಾರರು ಹೆಚ್ಚಿನ ಲಾಭ ದೊರೆತು ಉತ್ಸಾಹದಲ್ಲಿದ್ದರು. ಆದರೆ ಕಳೆದ ಆರು ತಿಂಗಳಿಂದ ಮಾರುಕಟ್ಟೆಯಲ್ಲಿ
ಸೂಚ್ಯಂಕಗಳ ಏರಿಳಿತದ ಆಟ ಶುರುವಾಗಿದೆ. ಈ ಸಂದರ್ಭದಲ್ಲಿ, ಸಣ್ಣ ಹೂಡಿಕೆದಾರರ ಪೈಕಿ ಬಹಳಷ್ಟು ಮಂದಿ ಆತಂಕಕ್ಕೆ ಒಳಗಾಗಿ, ತಮ್ಮ ಮ್ಯೂಚುವಲ್ ಫಂಡ್ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ) ಮುಂದುವರಿಸಬೇಕೇ ಎನ್ನುವ ಗೊಂದಲದಲ್ಲಿದ್ದಾರೆ.
ಕೆಲವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮಾರುಕಟ್ಟೆ ಚೇತರಿಕೆ ಆಗುವವರೆಗೂ ಎಸ್ಐಪಿ ಮುಂದುವರಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ, ಷೇರುಪೇಟೆ ಕುಸಿದಾಗ ಎಸ್ಐಪಿ ನಿಲ್ಲಿಸಬೇಕೆ? ಬನ್ನಿ ಪರಿಶೀಲಿಸೋಣ.
ಏರಿಳಿತ ಸಹಜ: 1992ರಲ್ಲಿ ಹರ್ಷದ್ ಮೆಹ್ತಾ ಹಗರಣದ ಕಾರಣದಿಂದಾಗಿ ಷೇರು ಮಾರುಕಟ್ಟೆ ಭಾರೀ ಕುಸಿತ ಕಂಡಿತ್ತು. 1999ರ ‘ಡಾಟ್ ಕಾಂ ಬಬಲ್’ನಿಂದಾಗಿ ಷೇರುಪೇಟೆ ಸೂಚ್ಯಂಕಗಳು ಕೆಳಮುಖವಾಗಿದ್ದವು. 2008ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲೂ ಷೇರುಪೇಟೆ ಗಣನೀಯ ಇಳಿಕೆ ಕಂಡಿತ್ತು. 2020ರಲ್ಲಿ ಕೊರೊನಾ ಕಾರಣಕ್ಕೆ ಸೂಚ್ಯಂಕಗಳು ಕುಸಿದಿದ್ದವು. ಷೇರುಪೇಟೆಯಲ್ಲಿ ಏರಿಳಿತ ಸಹಜ. 1991ರಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 5,000 ಅಂಶಗಳಿಗಿಂತ ಕೆಳಗಿತ್ತು. ಇವತ್ತು ಸೆನ್ಸೆಕ್ಸ್ 58,000 ಅಂಶಗಳ ಆಸುಪಾಸಿನಲ್ಲಿದೆ. ಕುಸಿತಗಳೆಲ್ಲ ತಾತ್ಕಾಲಿಕ. ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆಯು ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿರುವುದು ಮೇಲಿನ ಉದಾಹರಣೆಗಳಿಂದ ಮನದಟ್ಟಾಗುತ್ತದೆ.
‘ಎಸ್ಐಪಿ’ ಎನ್ನುವುದು ಹೂಡಿಕೆ ಉತ್ಪನ್ನವಲ್ಲ: ಅದು ಹೂಡಿಕೆ ವಿಧಾನ. ಪೂರ್ವನಿಗದಿತ ದಿನದಂದು, ಪೂರ್ವ ನಿಗದಿತ ಮೊತ್ತವನ್ನು ಸ್ವಯಂಚಾಲಿತವಾಗಿ ಹೂಡಿಕೆ ಉತ್ಪನ್ನವೊಂದಕ್ಕೆ ವರ್ಗಾಯಿಸುವ ವಿಧಾನ ‘ಎಸ್ಐಪಿ’ (ವ್ಯವಸ್ಥಿತ ಹೂಡಿಕೆ ಯೋಜನೆ). ಮ್ಯೂಚುವಲ್ ಫಂಡ್ ಹೂಡಿಕೆಗಳಲ್ಲಿ ಎಸ್ಐಪಿ ವಿಧಾನ ಹೆಚ್ಚು ಚಾಲ್ತಿಯಲ್ಲಿದೆ.
ಉದಾಹರಣೆಗೆ, ಮ್ಯೂಚುವಲ್ ಫಂಡ್ ಒಂದರಲ್ಲಿ ಪ್ರತಿ ತಿಂಗಳ 10ನೆ ತಾರೀಕಿನಂದು ನೀವು ₹ 1000 ಹೂಡಿಕೆ ಮಾಡಲು ನಿರ್ಧರಿಸಿದ್ದರೆ ಮಾರುಕಟ್ಟೆ ಏರಿಳಿತಗಳಿಗೆ ತಲೆಕೆಡಿಸಿಕೊಳ್ಳದೆ ಪ್ರತಿ ತಿಂಗಳು ಆ ಹೂಡಿಕೆಯನ್ನು ಮುಂದುವರಿಸಿಕೊಂಡು ಹೋಗುವುದನ್ನು ಎಸ್ಐಪಿ ಎನ್ನಬಹುದು.
ಮಾರುಕಟ್ಟೆ ಕುಸಿದಾಗ?: ಮಾರುಕಟ್ಟೆ ಕುಸಿದಾಗ ಮ್ಯೂಚುವಲ್ ಫಂಡ್ ‘ಎನ್ಎವಿ’ (ನಿವ್ವಳ ಆಸ್ತಿ ಮೌಲ್ಯ- Net Asset Value ) ತಗ್ಗುತ್ತದೆ. ಈ ಸ್ಥಿತಿಯಲ್ಲಿ ನೀವು ಎಸ್ಐಪಿ ಮೂಲಕ ಹೆಚ್ಚು ಮ್ಯೂಚುವಲ್ ಫಂಡ್ ಯುನಿಟ್ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಬಳಿ ಹೆಚ್ಚು ಯುನಿಟ್ ಗಳಿದ್ದರೆ ಮುಂದೆ ಮಾರುಕಟ್ಟೆ ಪುಟಿದೆದ್ದಾಗ ನಿಮಗೆ ಹೆಚ್ಚು ಲಾಭ ಸಿಗುತ್ತದೆ. ಹಾಗಾಗಿ ಷೇರುಪೇಟೆ ಕುಸಿದಾಗ ಇನ್ನಷ್ಟು ಹೂಡಿಕೆ ಮಾಡಲು ಪ್ರಯತ್ನಿಸಬೇಕೇ ಹೊರತು ಎಸ್ಐಪಿ ಸ್ಥಗಿತಗೊಳಿಸಬಾರದು. ಎಸ್ಐಪಿಯಲ್ಲಿ ಪ್ರತಿ ತಿಂಗಳು ತೊಡಗಿಸುವ ಹಣ ಆಯಾ ತಿಂಗಳಲ್ಲಿ ಕಟ್ಟಿದ ತಾರೀಕಿಗೆ ಅನುಗುಣವಾಗಿ ವಾರ್ಷಿಕ ಸರಾಸರಿ ಲೆಕ್ಕಕ್ಕೆ ಒಳಪಡುವುದರಿಂದ ಲಾಭವಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಎಸ್ಐಪಿ ನಿಲ್ಲಿಸಬಾರದು ಎನ್ನುವುದಕ್ಕೆ ಇದು ಕೂಡ ಒಂದು ಪ್ರಮುಖ ಕಾರಣ.
ನಿಲ್ಲಿಸಿದರೆ ನಷ್ಟ: ಮ್ಯೂಚುವಲ್ ಫಂಡ್‌ಗಳ ಮೇಲೆ ಷೇರು ಮಾರುಕಟ್ಟೆಯ ಏರಿಳಿತ ಮತ್ತು ಅರ್ಥ ವ್ಯವಸ್ಥೆಯ ಸ್ಥಿತಿ ಪ್ರಭಾವ ಬೀರುತ್ತವೆ. ಮಾರುಕಟ್ಟೆ ಕುಸಿದಾಗ ಮ್ಯೂಚುವಲ್ ಫಂಡ್ ಹೂಡಿಕೆದಾರರು ತಾತ್ಕಾಲಿಕ ನಷ್ಟ ಅನುಭವಿಸುವಂತಾಗುತ್ತದೆ. ‘ಎನ್ಎವಿ’ ತಗ್ಗುತ್ತ ಹೋದಂತೆ ಹೂಡಿಕೆದಾರರು ಚಿಂತೆಗೀಡಾಗುತ್ತಾರೆ. ಆದರೆ ಮಾರುಕಟ್ಟೆ ಕುಸಿದ ತಕ್ಷಣ ಮ್ಯೂಚುವಲ್ ಫಂಡ್ ಹೂಡಿಕೆಯಿಂದ ಹೊರಬರಲು ಪ್ರಯತ್ನಿಸಿದರೆ ನಷ್ಟದ ಪ್ರಮಾಣ ಮತ್ತಷ್ಟು ಜಾಸ್ತಿಯಾಗುತ್ತದೆ. ಉದಾಹರಣೆ: ನೀವು ತಿಂಗಳಿಗೆ ₹ 4 ಸಾವಿರದಂತೆ 12 ತಿಂಗಳಲ್ಲಿ ಎಸ್ಐಪಿ ಮೂಲಕ ಮ್ಯೂಚುವಲ್ ಫಂಡ್‌ನಲ್ಲಿ ಒಟ್ಟು ₹ 48 ಸಾವಿರ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಮೇಲಿಂದ ಮೇಲೆ ಷೇರು ಮಾರುಕಟ್ಟೆ ಕುಸಿದ ತಕ್ಷಣ ನಿಮ್ಮ ಹೂಡಿಕೆ ₹40 ಸಾವಿರಕ್ಕೆ ಬರುತ್ತದೆ ಎಂದು ಭಾವಿಸೋಣ. ಹೀಗಾದಾಗ ನೀವು ಮ್ಯೂಚುವಲ್ ಫಂಡ್ ಹೂಡಿಕೆ ಹಿಂಪಡೆದರೆ ನಿಮಗೆ ಒಂದೇ ಬಾರಿ ₹ 8 ಸಾವಿರ ನಷ್ಟವಾಗುತ್ತದೆ. ಹೂಡಿಕೆ ಹಿಂತೆಗೆಯುವ ಬದಲು ಎಸ್ಐಪಿ ಹೂಡಿಕೆ ಮುಂದುವರಿಸಿ, ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿದ್ದಾಗ ಹೂಡಿಕೆಯಿಂದ ಹೊರಬಂದರೆ ಹೆಚ್ಚು ಲಾಭ ಸಿಗುತ್ತದೆ. ಬಹುತೇಕರು ಈ ಮುಂದಾಲೋಚನೆ ಮಾಡದೆ ಷೇರು ಮಾರುಕಟ್ಟೆ ಹೂಡಿಕೆಯಿಂದ ದಿಢೀರ್ ಹೊರಬಂದು ನಷ್ಟ ಅನುಭವಿಸುತ್ತಾರೆ.
ನೆನಪಿಡಿ: ಮಾರುಕಟ್ಟೆ ಕುಸಿಯುವಾಗ ಎಸ್ಐಪಿಯಿಂದ ಹೊರಬಂದರೆ ಸಂಪತ್ತು ಬೆಳೆಸುವ ಒಳ್ಳೆಯ ಅವಕಾಶ ಕಳೆದುಕೊಂಡಂತೆ. ಮಾರುಕಟ್ಟೆ ಏರಿಳಿತ ಈಕ್ವಿಟಿ ಮ್ಯೂಚುವಲ್ ಫಂಡ್ ಹೂಡಿಕೆಯ ಭಾಗ ಎನ್ನುವುದು ಗೊತ್ತಿರಲಿ. ಮಾರುಕಟ್ಟೆ ಕುಸಿದ ತಕ್ಷಣ ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆ ಸಂಪೂರ್ಣ ನಷ್ಟವಾಗುವುದಿಲ್ಲ. ದೀರ್ಘಾವಧಿಯಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಶೇ 12ರಿಂದ ಶೇ 16ರವರೆಗೆ ಲಾಭ ಕೊಟ್ಟಿವೆ. ಹಾಗಾಗಿ ಚಿಂತೆ ಮಾಡದೆ, ಬೀಳುವ ಮಾರುಕಟ್ಟೆಯಲ್ಲೂ ಎಸ್ಐಪಿ ಎಂಬ ಮಿತ್ರನನ್ನು ನೆಚ್ಚಿಕೊಳ್ಳಿ.
ಫೆಡರಲ್ ಬಡ್ಡಿ ದರ ಹೆಚ್ಚಳ; ಕುಸಿದ ಷೇರುಪೇಟೆ
ಸೆಪ್ಟೆಂಬರ್ 23ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 58,098 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.26ರಷ್ಟು ಕುಸಿದಿದೆ. 17,327 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.16ರಷ್ಟು ತಗ್ಗಿದೆ. ರೂಪಾಯಿ ಮೌಲ್ಯ ಕುಸಿತ, ಅಮೆರಿಕದ ಫೆಡರಲ್ ಬ್ಯಾಂಕ್‌ನಿಂದ ಬಡ್ಡಿ ದರ ಹೆಚ್ಚಳ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ, ರಷ್ಯಾ ಉಕ್ರೇನ್ ಬಿಕ್ಕಟ್ಟು ಸೇರಿ ಅನೇಕ ಅಂಶಗಳು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿವೆ.
ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಪವರ್ ಇಂಡೆಕ್ಸ್ ಶೇ 5ರಷ್ಟು ಕುಸಿದಿದೆ. ರಿಯಲ್ ಎಸ್ಟೇಟ್ ಶೇ 4ರಷ್ಟು, ಕ್ಯಾಪಿಟಲ್ ಗೂಡ್ಸ್ ಶೇ 3ರಷ್ಟು ತಗ್ಗಿವೆ. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 1.3ರಷ್ಟು, ಮಿಡ್ ಕ್ಯಾಪ್ ಶೇ 1ರಷ್ಟು ಇಳಿಕೆ ದಾಖಲಿಸಿವೆ. ಆದರೆ ಎಫ್ಎಂಸಿಜಿ ಸೂಚ್ಯಂಕ ಶೇ 3.6ರಷ್ಟು, ಬಿಎಸ್ಇ ಹೆಲ್ತ್ ಕೇರ್ ಮತ್ತು ಆಟೊ ಸೂಚ್ಯಂಕಗಳು ಶೇ 1ರಷ್ಟು ಜಿಗಿದಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 4,361.77 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,137.96 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಇಳಿಕೆ–ಏರಿಕೆ: ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕ ಶೇ 1.25ರಷ್ಟು ಕುಸಿದಿದೆ. ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಶ್ರೀ ಸಿಮೆಂಟ್ಸ್, ಗೇಲ್ ಇಂಡಿಯಾ, ಇಂಡಸ್ ಟವರ್ಸ್, ಅದಾನಿ ಟ್ರಾನ್ಸ್‌ಮಿಷನ್, ಇನ್ಫೊ ಎಡ್ಜ್ ಇಂಡಿಯಾ, ಅಲ್ಟ್ರಾಟೆಕ್ ಸಿಮೆಂಟ್, ಸ್ಟಾರ್ ಹೆಲ್ತ್ ಆ್ಯಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿ, ಎನ್‌ಟಿಪಿಸಿ ಮತ್ತು ಟಾಟಾ ಪವರ್ ಕಂಪನಿ ಕುಸಿತ ಕಂಡಿವೆ.
ಅದಾನಿ ವಿಲ್ಮರ್, ಮ್ಯಾರಿಕೋ, ಸನ್ ಫಾರ್ಮಾ, ಹಿಂದೂಸ್ಥಾನ್ ಯುನಿ ಲಿವರ್, ಐಟಿಸಿ, ಅಂಬುಜಾ ಸಿಮೆಂಟ್ಸ್ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ಶೇ 4ರಿಂದ ಶೇ 12ರವರೆಗೆ ಗಳಿಸಿಕೊಂಡಿವೆ.
ಮುನ್ನೋಟ: ಸೆಪ್ಟೆಂಬರ್ 30ರಂದು ಆರ್‌ಬಿಐ ಹಣಕಾಸು ನೀತಿ ಸಮತಿ ಸಭೆ ನಿರ್ಣಯ ಹೊರಬೀಳಲಿದ್ದು ರೆಪೊ ದರದಲ್ಲಿ 30 ಮೂಲಾಂಶದಷ್ಟು ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಆರ್‌ಬಿಐ ನೀತಿಗೆ ಷೇರುಪೇಟೆ ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಅಮೆರಿಕದ ಜಿಡಿಪಿ ದತ್ತಾಂಶದ ಮೇಲೂ ಹೂಡಿಕೆದಾರರು ದೃಷ್ಟಿ ಹರಿಸಿದ್ದಾರೆ. ಇವಲ್ಲದೆ, ಜಾಗತಿಕ ಮತ್ತು ದೇಶಿ ವಿದ್ಯಮಾನ ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.
(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.