ADVERTISEMENT

Sensex | ನಿಫ್ಟಿ ಸಾರ್ವಕಾಲಿಕ ಗರಿಷ್ಠ

ಪಿಟಿಐ
Published 12 ಜೂನ್ 2024, 15:21 IST
Last Updated 12 ಜೂನ್ 2024, 15:21 IST
   

ಮುಂಬೈ: ಬಂಡವಾಳ ಸರಕು, ಪವರ್‌ ಹಾಗೂ ಕೈಗಾರಿಕಾ ಸೂಚ್ಯಂಕದ ಷೇರುಗಳ ಖರೀದಿಯಿಂದಾಗಿ ದೇಶದ ಷೇರು‍ಪೇಟೆಗಳಲ್ಲಿ ಬುಧವಾರ ಸಕಾರಾತ್ಮಕ ವಹಿವಾಟು ನಡೆದಿದ್ದು, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. 

ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಸೇರಿ ಪ್ರಮುಖ ಕಂಪನಿಗಳ ಷೇರು ಖರೀದಿಗೆ ಹೂಡಿಕೆದಾರರು ಮುಂದಾಗಿದ್ದು, ಕೂಡ ಸೂಚ್ಯಂಕಗಳು ಏರಿಕೆಯ ಹಾದಿ ಹಿಡಿಯಲು ನೆರವಾಯಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 149 ಅಂಶ ಏರಿಕೆ ಕಂಡು 76,606 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 593 ಅಂಶ ಏರಿಕೆ ಕಂಡಿತ್ತು. 

ADVERTISEMENT

ನಿಫ್ಟಿ 58 ಅಂಶ ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 23,322 ಅಂಶಗಳಲ್ಲಿ ಸ್ಥಿರಗೊಂಡಿತು. ಇಂಟ್ರಾಡೇನಲ್ಲಿ 177 ಅಂಶ ಏರಿಕೆ ಕಂಡು, 23,411 ಅಂಶಗಳಿಗೆ ತಲುಪಿತ್ತು.  

ಸೆನ್ಸೆಕ್ಸ್‌ ಗುಚ್ಛದಲ್ಲಿನ ಪವರ್‌ ಗ್ರಿಡ್‌ ಷೇರಿನ ಮೌಲ್ಯದಲ್ಲಿ ಶೇ 2.54ರಷ್ಟು ಏರಿಕೆಯಾಗಿದೆ. ಟೆಕ್‌ ಮಹೀಂದ್ರ, ಬಜಾಜ್‌ ಫೈನಾನ್ಸ್‌, ಎನ್‌ಟಿಪಿಸಿ, ಅಲ್ಟ್ರಾಟೆಕ್‌ ಸಿಮೆಂಟ್‌, ಎಲ್‌ ಆ್ಯಂಡ್‌ ಟಿ, ಟಾಟಾ ಸ್ಟೀಲ್‌, ಭಾರ್ತಿ ಏರ್‌ಟೆಲ್‌, ಬಜಾಜ್‌ ಫಿನ್‌ಸರ್ವ್‌ ಮತ್ತು ಎಚ್‌ಸಿಎಲ್‌ ಟೆಕ್ನಾಲಜೀಸ್‌ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ. 

ಮಹೀಂದ್ರ ಆ್ಯಂಡ್ ಮಹೀಂದ್ರ, ಹಿಂದುಸ್ತಾನ್‌ ಯೂನಿಲಿವರ್‌, ಇನ್ಫೊಸಿಸ್‌‌ ಮತ್ತು ಟೈಟನ್ ಕಂಪನಿಯ ಷೇರಿನ ಮೌಲ್ಯ ಇಳಿಕೆ ಕಂಡಿದೆ. 

ಸೋಲ್‌, ಶಾಂಘೈ ಮಾರುಕಟ್ಟೆಗಳು ಏರಿಕೆ ದಾಖಲಿಸಿದರೆ, ಟೋಕಿಯೊ, ಹಾಂಗ್‌ಕಾಂಗ್‌ ಮಾರುಕಟ್ಟೆಯು ಇಳಿಕೆ ಕಂಡಿವೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಶೇ 1.16ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 82.87 ಡಾಲರ್‌ ಆಗಿದೆ.

ಬಿಎಸ್‌ಇ ಎಂ–ಕ್ಯಾಪ್‌ ₹429 ಲಕ್ಷ ಕೋಟಿ

ನವದೆಹಲಿ: ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯವು ಬುಧವಾರದ ವಹಿವಾಟಿನಲ್ಲಿ ₹429.32 ಲಕ್ಷ ಕೋಟಿಗೆ (5.14 ಟ್ರಿಲಿಯನ್‌ ಡಾಲರ್‌) ತಲುಪಿದೆ.    ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಏರಿಕೆ ದಾಖಲಿಸಿದ್ದರಿಂದ ಎಂ–ಕ್ಯಾಪ್‌ ಸಾರ್ವಕಾಲಿಕ ಗರಿಷ್ಠಮಟ್ಟಕ್ಕೆ ಮುಟ್ಟಿದೆ. ‘ಆರಂಭಿಕ ವಹಿವಾಟಿನಲ್ಲಿ ಕಂಡಿದ್ದ ಏರಿಕೆಯನ್ನು ಅಂತ್ಯದ ವೇಳೆಗೆ ದೊಡ್ಡ ಬಂಡವಾಳವಾಗಿ ಪರಿವರ್ತಿಸಿಕೊಳ್ಳುವಲ್ಲಿ ಮಾರುಕಟ್ಟೆಗಳು ವೈಫಲ್ಯ ಕಂಡವು. ಆದರೆ ಸಾಧಾರಣ ಮಟ್ಟದಲ್ಲಿ ಏರಿಕೆ ಕಾಯ್ದುಕೊಂಡಿವೆ’ ಎಂದು ಮೆಹ್ತಾ ಸೆಕ್ಯುರಿಟೀಸ್‌ನ ಹಿರಿಯ ಉಪಾಧ್ಯಕ್ಷ (ಸಂಶೋಧನೆ) ಪ್ರಶಾಂತ್ ತಾಪ್ಸೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.