ದೇಶದಲ್ಲಿ ಸದಾ ಸುದ್ದಿಯಲ್ಲಿ ಇರುವ, ಒಂದಿಷ್ಟು ಜನ ಯುವಕರಿಗೆ ಸ್ಫೂರ್ತಿಯ ಸೆಲೆಯಂತೆ ಕಾಣಿಸುವ ಉದ್ಯಮಿಗಳ ಸಾಲಿನಲ್ಲಿ ಉದಯ್ ಕೋಟಕ್ ಅವರಿಗೆ ಒಂದು ಸ್ಥಾನ ಇದ್ದೇ ಇರುತ್ತದೆ. ಚೈತನ್ಯದಾಯಕ, ಸ್ಫೂರ್ತಿದಾಯಕ ಹಾಗೂ ಒಂದಿಷ್ಟು ಮೌಲ್ಯಗಳನ್ನು ಒಳಗೊಂಡಿರುವ ಮಾತುಗಳನ್ನು ಆಡುವ ಉದಯ್ ಕೋಟಕ್ ಅವರನ್ನು ಇಷ್ಟಪಡದಿರುವುದು ಕಷ್ಟವೂ ಹೌದು.
1985ನೆಯ ಇಸವಿಯ ಒಂದು ದಿನ ಯುವಕ ಉದಯ್ ಅವರು ಉದ್ಯಮಿ ಆನಂದ್ ಮಹೀಂದ್ರ ಅವರನ್ನು ಭೇಟಿ ಮಾಡಿದ್ದರು. ಆ ಭೇಟಿಯು, ಉದಯ್ ಅವರ ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲಿ ಮಹೀಂದ್ರ ಅವರು ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿತು. ಉತ್ಸಾಹಿ ಉದಯ್ ಅವರ ಮೇಲೆ ಭರವಸೆ ಇಟ್ಟು ಮಹೀಂದ್ರ ಅವರು ಹೂಡಿಕೆ ಮಾಡಿದರು. ‘ನಾನು ಮಾಡಿದ ಅತ್ಯುತ್ತಮ ತೀರ್ಮಾನ ಅದು’ ಎಂದು ಆ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರ ಬಗ್ಗೆ ಮಹೀಂದ್ರ ಬರೆದುಕೊಂಡಿದ್ದಾರೆ. ಉದಯ್ ಅವರು ಸ್ಥಾಪಿಸಿದ ಸಂಸ್ಥೆಯ ಹೆಸರು ಮಹೀಂದ್ರ ಅವರ ಹೂಡಿಕೆಯ ನಂತರ ‘ಕೋಟಕ್ ಮಹೀಂದ್ರ ಫೈನಾನ್ಸ್ ಲಿಮಿಟೆಡ್’ ಎಂದಾಯಿತು. 2003ರಲ್ಲಿ ಇದು ಬ್ಯಾಂಕಿಂಗ್ ಸೇವೆಗಳನ್ನೂ ಆರಂಭಿಸಿತು.
ಬೆರಗಾಗುವಂತಹ ಅಂಶ ಇರುವುದು ಹೆಸರು ಬದಲಾಗಿದ್ದರಲ್ಲಿ ಅಲ್ಲ. ಮಹೀಂದ್ರ 1985ರಲ್ಲಿ ಮಾಡಿದ ಹೂಡಿಕೆಯು ಹನುಮನ ವಿಕಾಸದಂತೆ ಬೆಳೆಯುತ್ತಲೇ ಹೋಯಿತು. 1985ರಲ್ಲಿ ಮಾಡಿದ್ದ ₹ 1 ಲಕ್ಷ ಹೂಡಿಕೆಯು, 32 ವರ್ಷಗಳ ನಂತರದಲ್ಲಿ ₹ 1,400 ಕೋಟಿ ಆಗಿ ಬೆಳೆದು ನಿಂತಿತ್ತು! ಈ ವಿವರ ನೀಡಿದ್ದು ಉದಯ್ ಅವರೇ. ಸಂಪತ್ತು ಸೃಷ್ಟಿಯಲ್ಲಿ ಈ ಪರಿಯ ಸಾಧನೆ ತೋರಿದ ಕೆಲವೇ ಕೆಲವು ಕಂಪನಿಗಳ ಸಾಲಿನಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ಕೂಡ ಒಂದು. ಇಂದು ಕೋಟಕ್ ಮಹೀಂದ್ರ ಬ್ಯಾಂಕಿನ ಮಾರುಕಟ್ಟೆ ಬಂಡವಾಳದ ಮೊತ್ತ ₹ 2.62 ಲಕ್ಷ ಕೋಟಿ.
1985ರ ಲೆಕ್ಕಾಚಾರವನ್ನು ಒಮ್ಮೆ ಪಕ್ಕಕ್ಕೆ ಇರಿಸೋಣ. 2001ರ ನಂತರದಲ್ಲಿ ಆಗಿರುವ ಸಂಪತ್ತು ಸೃಷ್ಟಿಯನ್ನು ಒಮ್ಮೆ ಚಿಕ್ಕದಾಗಿ ಗಮನಿಸೋಣ. 2001ರಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯ ₹ 2.40 ಆಗಿತ್ತು. ಈಗ ಅದರ ಮೌಲ್ಯ ₹ 1,300ರ ಆಸುಪಾಸಿನಲ್ಲಿದೆ. ಅಂದರೆ, ಆ ಕಾಲಘಟ್ಟದಲ್ಲಿ ಈ ಬ್ಯಾಂಕಿನ ಮೇಲೆ ಮಾಡಿದ್ದ ₹ 1000 ಹೂಡಿಕೆಯು ಇಂದು ₹ 5.44 ಲಕ್ಷವಾಗಿ ಬೆಳೆದು ನಿಂತಿದೆ. ಭಾರತದ ಮಾರುಕಟ್ಟೆಯಲ್ಲಿ ಷೇರುದಾರರ ಪಾಲಿಗೆ ಈ ಪರಿಯಲ್ಲಿ ಸಂಪತ್ತನ್ನು ಸೃಷ್ಟಿಸಿಕೊಟ್ಟ ಕಂಪನಿಗಳ ಸಾಲಿನಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ಜೊತೆಯಲ್ಲೇ ಇನ್ನೂ ಕೆಲವು ಕಂಪನಿಗಳು ಇವೆ ಎಂಬುದು ನಿಜ. ಆದರೆ, ಇಂತಹ ಕಂಪನಿಗಳು ಸೃಷ್ಟಿಸಿದ ಸಂಪತ್ತಿನ ಮೊತ್ತವನ್ನು ನೋಡಿ ಹೂಡಿಕೆದಾರರು ಕಲಿಯಬೇಕಾದ ಪಾಠ ಏನು? ತಾಳ್ಮೆ, ಅವಸರ, ಇವತ್ತು ಹಾಕಿದ ಬಂಡವಾಳ ನಾಳೆಗೇ ದುಪ್ಪಟ್ಟಾಗಬೇಕು ಎಂಬ ಹಂಬಲ...?
ದೇಶದಲ್ಲಿ ಲಾಕ್‌ಡೌನ್ ಹೇರಿದ ತಕ್ಷಣ ಕುಸಿದುಬಿದ್ದಿದ್ದ ಷೇರು ಮಾರುಕಟ್ಟೆ ನಂತರದ ದಿನಗಳಲ್ಲಿ ಅಸಹಜ ಎಂಬ ರೀತಿಯಲ್ಲಿ ಜಿಗಿದಿದೆ. ಲಾಕ್‌ಡೌನ್ ಅವಧಿಯಲ್ಲಿ ಹೊಸದಾಗಿ ಷೇರು ಮಾರುಕಟ್ಟೆ ಪ್ರವೇಶಿಸಿದವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೊಸ ಹೂಡಿಕೆದಾರರಲ್ಲಿ ಹಲವರು, ನಿಜವಾದ ಹೂಡಿಕೆಗಿಂತ ಹೆಚ್ಚಾಗಿ ಷೇರುಗಳ ಟ್ರೇಡಿಂಗ್‌ನಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದೂ ಇದೆ. ಆದರೆ, ಷೇರುಗಳ ಟ್ರೇಡಿಂಗ್‌ನಲ್ಲಿ ಯಶಸ್ಸು ಎಲ್ಲರಿಗೂ ಲಭಿಸುವುದಿಲ್ಲ ಎಂಬುದನ್ನು ಮರೆಯಬಾರದು. ಅಂದಮಾತ್ರಕ್ಕೆ, ಷೇರುಪೇಟೆಯಿಂದ ಹಿಂದಕ್ಕೆ ಹೆಜ್ಜೆ ಇರಿಸಬೇಕಾಗಿಯೂ ಇಲ್ಲ.
ತಕ್ಷಣದ ಲಾಭ ಮಾಡಿಕೊಳ್ಳುವುದಕ್ಕಿಂತಲೂ, ಸಂಪತ್ತು ಸೃಷ್ಟಿಯ ಕಡೆ ಹೆಚ್ಚಿನ ಆಸಕ್ತಿ ಇದ್ದಲ್ಲಿ ಒಳ್ಳೆಯ ಕಾರ್ಪೊರೇಟ್ ಹಿನ್ನೆಲೆ ಇರುವ ಕಂಪನಿಗಳ ಷೇರುಗಳನ್ನು ಖರೀದಿಸಿ, ದೀರ್ಘಾವಧಿಗೆ ಅವುಗಳನ್ನು ತಮ್ಮಲ್ಲಿಯೇ ಇರಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಒಳಿತು. ಇದು ಸಂಪತ್ತು ಸೃಷ್ಟಿಗೆ ಇರುವ ರಹದಾರಿ. ನಿಶ್ಚಿತ ಠೇವಣಿಗಳಲ್ಲಿ ಹಣ ಹೂಡಿಕೆ ಮಾಡಿ, ಅಸಲಿಗೆ ಬಡ್ಡಿ, ಬಡ್ಡಿಗೆ ಚಕ್ರಬಡ್ಡಿ ದೊರೆತು ಅಸಲು ಹಲವು ಪಟ್ಟು ಹೆಚ್ಚಾಗಲು ಬಹುಕಾಲ ಬೇಕಲ್ಲವೇ? ಅದೇ ರೀತಿ ಷೇರು ಮಾರುಕಟ್ಟೆಯಲ್ಲೂ ಹೂಡಿಕೆ ಮಾಡಿದ ಹಣವು ಬೃಹತ್ ಮೊತ್ತವಾಗಿ ಬೆಳೆಯಲು ಒಂದಿಷ್ಟು ಕಾಲ ಬೇಕು – ಸಾಮಾನ್ಯವಾಗಿ, ನಿಶ್ಚಿತ ಠೇವಣಿ ಬೆಳೆಯುವ ವೇಗಕ್ಕಿಂತಲೂ ಒಳ್ಳೆಯ ಕಂಪನಿಗಳ ಮೇಲೆ ಹೂಡಿಕೆ ಮಾಡಿದ ಹಣ ಹೆಚ್ಚು ವೇಗವಾಗಿ ಬೆಳೆಯುತ್ತದೆ ಎಂಬುದರಲ್ಲಿ ಅನುಮಾನ ಬೇಡ.
ಬೆಂಗಳೂರು ಮೂಲದ ಹೆಮ್ಮೆಯ ಸಾಫ್ಟ್‌ವೇರ್ ಕಂಪನಿ ವಿಪ್ರೊ ಲಿಮಿಟೆಡ್. ಈ ಕಂಪನಿಯ ಷೇರಿನ ಮೌಲ್ಯ ಈಗ ₹ 310ರ ಆಸುಪಾಸಿನಲ್ಲಿ ಇದೆ. 1999ರ ಜನವರಿಯಲ್ಲಿ ಷೇರಿನ ಮೌಲ್ಯವು ₹ 13.80 ಆಗಿತ್ತು. 1999ರಲ್ಲಿ ₹ 1,000 ಮೊತ್ತಕ್ಕೆ ಖರೀದಿಸಿದ ವಿಪ್ರೊ ಷೇರುಗಳ ಮೌಲ್ಯ ಈಗ ₹ 22 ಸಾವಿರ! ಇದೇ ಮೊತ್ತವನ್ನು ಬ್ಯಾಂಕಿನ ನಿಶ್ಚಿತ ಠೇವಣಿಯಲ್ಲಿ ಇರಿಸಿದ್ದಿದ್ದರೆ, ಆ ಬ್ಯಾಂಕಿನವರು ವಾರ್ಷಿಕ ಶೇಕಡ 10ರಷ್ಟು (ಅಷ್ಟೊಂದು ಬಡ್ಡಿ ಈಗ ಬ್ಯಾಂಕುಗಳಲ್ಲಿ ಸಿಗದು ಎಂಬುದು ನೆನಪಿರಲಿ) ಬಡ್ಡಿ ಕೊಟ್ಟಿದ್ದಿದ್ದರೆ, ಆ ಹಣ ಈಗ ₹ 7,400 ಆಗಿರುತ್ತಿತ್ತು. ಅಷ್ಟೇ! ಷೇರಿನ ಮೌಲ್ಯ ವೃದ್ಧಿಯಾದ ಬಗೆ ಹಾಗೂ ನಿಶ್ಚಿತ ಠೇವಣಿಗೆ ಬಡ್ಡಿ ಸಿಕ್ಕಿದ್ದರ ಪ್ರಮಾಣವನ್ನು ಹೋಲಿಸಿ ನೋಡಿದಾಗ, ಸಂಪತ್ತು ಸೃಷ್ಟಿಗೆ ಹೆಚ್ಚಿನ ಅವಕಾಶ ಇರುವುದು ಎಲ್ಲಿ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ, ರಿಟೇಲ್ ಹೂಡಿಕೆದಾರರ ಪಾಲಿಗೆ ಸಂಪತ್ತು ಸೃಷ್ಟಿಗೆ ಇರುವ ಉತ್ತಮ ಮಾರ್ಗವೆಂದರೆ ಒಳ್ಳೆಯ ಕಾರ್ಪೊರೇಟ್ ಆಡಳಿತ ಇರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಎಂಬುದೂ ಅರಿವಿಗೆ ಬರುತ್ತದೆ. ನೆನಪಿರಲಿ, ರಿಟೇಲ್ ಹೂಡಿಕೆದಾರರ ಪಾಲಿಗೆ ಸಂಪತ್ತು ಸೃಷ್ಟಿಗೆ ಪರ್ಯಾಯಗಳಿಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.