ADVERTISEMENT

PV Web Exclusive | ‘ಗಳಿಕೆ ರೇಸ್‌’ನಲ್ಲಿ ಆಟೊ ವಲಯದ ಷೇರುಗಳ ನಾಗಾಲೋಟ

‘ಕರಡಿ ಕುಣಿತ’ದ ನಡುವೆಯೂ ಮೌಲ್ಯವರ್ಧಿಸಿಕೊಂಡ ಎಂ&ಎಂ, ಟಿವಿಎಸ್‌ ಮೋಟರ್‌ ಕಂಪನಿ

ವಿನಾಯಕ ಭಟ್ಟ‌
Published 27 ಜೂನ್ 2022, 0:30 IST
Last Updated 27 ಜೂನ್ 2022, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಾಗತಿಕ ವಿದ್ಯಮಾನದಿಂದಾಗಿ ಭಾರತೀಯ ಷೇರುಪೇಟೆಯು ‘ಕರಡಿ ಹಿಡಿತ’ಕ್ಕೆ ಸಿಲುಕಿ ನಲಗುತ್ತಿದ್ದರೂ ಆಟೊ ವಲಯದ ಹಲವು ಕಂಪನಿಗಳ ಷೇರು ‘ಗಳಿಕೆಯ ರೇಸ್‌’ನಲ್ಲಿ ‘ಗೂಳಿ ಓಟ’ ಪ್ರದರ್ಶಿಸುತ್ತಿವೆ. ಷೇರುಪೇಟೆಯಲ್ಲಿನ ಮಾರಾಟದ ಒತ್ತಡದ ನಡುವೆಯೂ ಎಂ&ಎಂ, ಟಿವಿಎಸ್‌ ಮೋಟರ್‌ ಕಂಪನಿಗಳು ತನ್ನ ಷೇರಿನ ಮೌಲ್ಯವನ್ನು ಶೇ 27ಕ್ಕಿಂತಲೂ ಹೆಚ್ಚು ವೃದ್ಧಿಸಿಕೊಂಡು ಗಮನ ಸೆಳೆಯುತ್ತಿವೆ...

****

ಮುಂಬೈ ಷೇರುಪೇಟೆ (BSE)ಯ ‘ಸೆನ್ಸೆಕ್ಸ್‌’ ಹಾಗೂ ರಾಷ್ಟ್ರೀಯ ಷೇರುಪೇಟೆ (NSE)ಯ ‘ನಿಫ್ಟಿ–50’ ಸೂಚ್ಯಂಕಗಳು ‘ಕರಡಿ ಹಿಡಿತ’ದಿಂದ ಬಿಡಿಸಿಕೊಳ್ಳಲು ಇನ್ನೂ ಹೆಣಗಾಡುತ್ತಿವೆ. ಇದರ ನಡುವೆಯೇ ಆಟೊ ವಲಯ (Auto Sector)ದ ಕಂಪನಿಗಳ ಷೇರುಗಳು ‘ಗಳಿಕೆಯ ರೇಸ್‌’ನಲ್ಲಿ ನಾಗಾಲೋಟ ಆರಂಭಿಸಿವೆ. ಕಳೆದ ಒಂದು ವಾರದಲ್ಲಿ ಆಟೊ ವಲಯದ ಸೂಚ್ಯಂಕವು ಶೇ 7ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

ADVERTISEMENT

ಜಾಗತಿಕ ಷೇರುಪೇಟೆಗಳಲ್ಲಿನ ನಕಾರಾತ್ಮಕ ವಹಿವಾಟು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಬಂಡವಾಳ ಹಿಂತೆಗೆದುಕೊಳ್ಳುತ್ತಿರುವುದು, ಹಣದುಬ್ಬರ ನಿಯಂತ್ರಣಕ್ಕಾಗಿ ಬಡ್ಡಿ ದರ ಪರಿಷ್ಕರಣೆ... ಹೀಗೆ ಹಲವು ಪ್ರಮುಖ ವಿದ್ಯಮಾನಗಳಿಂದಾಗಿ ಭಾರತೀಯ ಷೇರುಪೇಟೆಯು ಇನ್ನೂ ‘ಕರಡಿ ಹಿಡಿತ’ದಲ್ಲಿಯೇ ನಲಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಆಟೊ ವಲಯಗಳ ಹಲವು ಕಂಪನಿಗಳ ಷೇರಿನ ಮೌಲ್ಯ ಪುಟಿದೇಳುವ ಮೂಲಕ ಹೂಡಿಕೆದಾರರಲ್ಲಿ ಭರವಸೆಯ ಹೊಂಗಿರಣವನ್ನು ಮೂಡಿಸಿದೆ.

ಈ ವರ್ಷಾರಂಭದಿಂದ ಇಂದಿನವರೆಗಿನ (Year to Date - YTD) ವಹಿವಾಟವನ್ನು ಗಮನಿಸಿದಾಗ ‘ಸೆನ್ಸೆಕ್ಸ್‌’ ಸೂಚ್ಯಂಕವು ಶೇ 9.49ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಇದರ ನಡುವೆಯೇ ಈ ಅವಧಿಯಲ್ಲಿ ‘ಬಿಎಸ್‌ಇ ಆಟೊ’ ಸೂಚ್ಯಂಕವು ಶೇ 6.48ರಷ್ಟು ಮೌಲ್ಯ ಹೆಚ್ಚಿಸಿಕೊಂಡಿದೆ. ಈ ಅವಧಿಯಲ್ಲಿ ಸೆನ್ಸೆಕ್ಸ್‌ಗೆ ಹೋಲಿಸಿದರೆ ಬಿಎಸ್‌ಇ ಆಟೊ ಸೂಚ್ಯಂಕವು ಶೇ 15.97ರಷ್ಟು ಹೆಚ್ಚು ಅಂಶಗಳನ್ನು ಗಳಿಸಿಕೊಂಡಿದೆ. ಇದೇ ಸಮಯದಲ್ಲಿ ಬಿಎಸ್‌ಇ ಐಟಿ (ಶೇ –25.62), ಬಿಎಸ್‌ಇ ಮೆಟಲ್‌ (ಶೇ –20.62), ಬಿಎಸ್‌ಇ ಹೆಲ್ತ್‌ಕೇರ್‌ (ಶೇ –17.32), ಬಿಎಸ್‌ಇ ಫೈನಾನ್ಸ್‌ (ಶೇ –10.23)ನಂತಹ ಪ್ರಮುಖ ಸೂಚ್ಯಂಕಗಳು ಮೌಲ್ಯವನ್ನು ಕಳೆದುಕೊಂಡಿವೆ.

ಜೂನ್‌ 24ರಂದು ಸೆನ್ಸೆಕ್ಸ್‌ 52,727 ಅಂಶಗಳೊಂದಿಗೆ (52 ವಾರಗಳ ಕನಿಷ್ಠ ಮಟ್ಟ 50,921 ಹಾಗೂ ಗರಿಷ್ಠ ಮಟ್ಟ 62,245) ವಹಿವಾಟು ಅಂತ್ಯಗೊಳಿಸಿದೆ. ಕಳೆದ ಒಂದು ವರ್ಷದಲ್ಲಿ ಕೇವಲ ಶೇ 0.05ರಷ್ಟು ಏರಿಕೆ ಕಂಡಿದೆ. ಒಂದು ತಿಂಗಳಲ್ಲಿ ಶೇ 2.45 ಹಾಗೂ ಮೂರು ತಿಂಗಳಲ್ಲಿ ಶೇ 8.45ರಷ್ಟು ಕುಸಿತ ಕಂಡಿದೆ.

ಹೀಗಿದ್ದರೂ ಬಿಎಸ್‌ಇ ಆಟೊ ಸೂಚ್ಯಂಕವು ಜೂನ್‌ 24ಕ್ಕೆ 26,425 ಅಂಶಗಳೊಂದಿಗೆ (52 ವಾರಗಳ ಕನಿಷ್ಠ ಮಟ್ಟ 21,083 ಹಾಗೂ ಗರಿಷ್ಠ ಮಟ್ಟ 27,272) ವಹಿವಾಟು ಅಂತ್ಯಗೊಳಿಸಿದೆ. ಒಂದು ವರ್ಷದ ಅವಧಿಯಲ್ಲಿ ಶೇ 11.26ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಒಂದು ತಿಂಗಳಲ್ಲಿ ಶೇ 4.22 ಹಾಗೂ ಮೂರು ತಿಂಗಳಲ್ಲಿ ಶೇ 11.05ರಷ್ಟು ಏರಿಕೆಯನ್ನು ದಾಖಲಿಸಿದೆ.

YTDಯನ್ನು ನೋಡಿದಾಗ ನಿಫ್ಟಿ–50 ಸೂಚ್ಯಂಕದ ಮೌಲ್ಯವು ಶೇ 9.54ರಷ್ಟು ನಷ್ಟವಾಗಿದೆ. ಇದೇ ಅವಧಿಯಲ್ಲಿ ನಿಫ್ಟಿ ಆಟೊ ಸೂಚ್ಯಂಕದ ಮೌಲ್ಯವು ಶೇ 5.91ರಷ್ಟು ವೃದ್ಧಿಯಾಗಿದೆ. ‘ನಿಫ್ಟಿ–50’ಗೆ ಹೋಲಿಸಿ ನೋಡಿದಾಗ ‘ನಿಫ್ಟಿ ಆಟೊ’ ಸೂಚ್ಯಂಕವು ಶೇ 15.45ರಷ್ಟು ಹೆಚ್ಚು ಅಂಶಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಈ ವಾರಾಂತ್ಯಕ್ಕೆ ‘ನಿಫ್ಟಿ–50’ ಸೂಚ್ಯಂಕವು 15,699 ಅಂಶಗಳೊಂದಿಗೆ (52 ವಾರಗಳ ಕನಿಷ್ಠ ಮಟ್ಟ 15,183.40 ಹಾಗೂ ಗರಿಷ್ಠ ಮಟ್ಟ 18,604.45) ವಹಿವಾಟು ಕೊನೆಗೊಳಿಸಿದೆ. ಒಂದು ವರ್ಷದ ಅವಧಿಯಲ್ಲಿ ಈ ಸೂಚ್ಯಂಕ ಬರೀ ಶೇ 0.58ರಷ್ಟು ಏರಿಕೆ ಕಂಡಿದೆ. ಒಂದು ತಿಂಗಳಲ್ಲಿ ಶೇ 2.64 ಹಾಗೂ ಮೂರು ತಿಂಗಳಲ್ಲಿ ಶೇ 8.85ರಷ್ಟು ಅಂಶಗಳ ಕುಸಿತವನ್ನೂ ದಾಖಲಿಸಿದೆ.

‘ಎನ್‌ಎಸ್‌ಇ ಆಟೊ’ ಸೂಚ್ಯಂಕವು 11,583 ಅಂಶಗಳೊಂದಿಗೆ (52 ವಾರಗಳ ಕನಿಷ್ಠ ಮಟ್ಟ 9,226.95 ಹಾಗೂ ಗರಿಷ್ಠ ಮಟ್ಟ 12,139.75) ಶುಕ್ರವಾರದ ವಹಿವಾಟನ್ನು ಅಂತ್ಯಗೊಳಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಸೂಚ್ಯಂಕವು ಶೇ 9.09ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಒಂದು ತಿಂಗಳಲ್ಲಿ ಶೇ 4.02ರಷ್ಟು ಹಾಗೂ ಮೂರು ತಿಂಗಳಲ್ಲಿ ಶೇ 11.24ರಷ್ಟು ಮೌಲ್ಯವನ್ನು ವೃದ್ಧಿಸಿಕೊಂಡಿದೆ.

ಗಳಿಕೆಯಲ್ಲಿ ಎಂ&ಎಂ, ಟಿವಿಎಸ್‌ ಮೋಟರ್‌ ಮುಂದೆ:

ಷೇರುಪೇಟೆಯಲ್ಲಿ ‘ಕರಡಿ ಕುಣಿತ’ದಿಂದಾಗಿ ಹಲವು ಕಂಪನಿಗಳ ಸಂಪತ್ತು ಕರಗುತ್ತಿವೆ.ಇದರ ನಡುವೆಯೂ ಹೂಡಿಕೆದಾರರು ಆಟೊ ವಲಯದ ಕಂಪನಿಗಳ ಷೇರು ಖರೀದಿಗೆ ಉತ್ಸಾಹ ತೋರಿದ ಪರಿಣಾಮ ಈ ವಲಯದ ಹಲವು ಕಂಪನಿಗಳ ಮಾರುಕಟ್ಟೆ ಬಂಡವಾಳ ಹೆಚ್ಚಾಗಿದೆ.

ಈ ವರ್ಷಾರಂಭದಿಂದ ಇಂದಿನವರೆಗೆ ರಾಷ್ಟ್ರೀಯ ಷೇರುಪೇಟೆಯಲ್ಲಿ ನಡೆದ ವಹಿವಾಟನ್ನು ಲೆಕ್ಕ ಹಾಕಿದಾಗ, ‘ಗಳಿಕೆಯ ರೇಸ್‌’ನಲ್ಲಿ ಎಂ&ಎಂ ಕಂಪನಿಯು ಮೊದಲ ಸ್ಥಾನದಲ್ಲಿದೆ. ಈ ಕಂಪನಿಯು ತನ್ನ ಷೇರಿನ ಮೌಲ್ಯವನ್ನು ಶೇ 28.06ರಷ್ಟು ಹೆಚ್ಚಿಸಿಕೊಂಡಿದೆ. ಎಂ&ಎಂ ಕಂಪನಿಯ ಷೇರಿನ ಬೆಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಶೇ 40.02 ಹಾಗೂ ಒಂದು ತಿಂಗಳಲ್ಲಿ ಶೇ 13.22ರಷ್ಟು ಹೆಚ್ಚಾಗಿದೆ. ಶುಕ್ರವಾರದ ಅಂತ್ಯಕ್ಕೆ ₹ 1,072.05ರಲ್ಲಿ ವಹಿವಾಟು ಅಂತ್ಯಗೊಳಿಸಿರುವ ಎಂ&ಎಂ ಕಂಪನಿಯ ಷೇರಿನ ಮೌಲ್ಯವು ಕಳೆದ ಒಂದು ವಾರದ ಅವಧಿಯಲ್ಲಿ ₹ 74.4 (ಶೇ 7.45) ಹೆಚ್ಚಾಗಿದೆ.

ಟಿವಿಎಸ್‌ ಮೋಟರ್‌ ಕಂಪನಿಯು ಎರಡನೇ ಸ್ಥಾನದಲ್ಲಿದ್ದು, ವರ್ಷಾರಂಭದಿಂದ ಇಂದಿನವರೆಗೆ ಶೇ 27.39ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ನಾಲ್ಕು ತಿಂಗಳಲ್ಲಿ ಶೇ 31.17 ಹಾಗೂ ಒಂದು ತಿಂಗಳಲ್ಲಿ ಶೇ 12.68ರಷ್ಟು ವೃದ್ಧಿಯಾಗಿದೆ. ಟಿವಿಎಸ್‌ ಮೋಟರ್‌ ಕಂಪನಿಯು ಕಳೆದ ಒಂದು ವಾರದ ಅವಧಿಯಲ್ಲಿ ತನ್ನ ಷೇರಿನ ಮೌಲ್ಯವನ್ನು ₹ 58.60ರಷ್ಟು (ಶೇ 7.91) ಹೆಚ್ಚಿಸಿಕೊಂಡು, ₹ 798.75ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಈ ವರ್ಷದ ಆರಂಭದಿಂದ (YTD) ಲೆಕ್ಕ ಹಾಕಿ ನೋಡಿದಾಗ ‘ಗಳಿಕೆಯ ರೇಸ್‌’ನಲ್ಲಿ ಬಜಾಜ್‌ ಆಟೊ (ಶೇ 17.36), ಅಶೋಕ ಲೇಲ್ಯಾಂಡ್‌ (ಶೇ 14.33), ಮಾರುತಿ ಸುಝುಕಿ (ಶೇ 12.61), ಹೀರೊ ಮೋಟೊಕೊರ್ಪ್‌ (ಶೇ 12.10), ಐಚರ್‌ ಮೋಟರ್ಸ್‌ (ಶೇ 11.03) ಕಂಪನಿಗಳು ಎರಡಂಕಿಯಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.

ಹಿಂದೆ ಉಳಿದ ಟಾಟಾ ಮೋಟರ್ಸ್‌:

‘ನಿಫ್ಟಿ ಆಟೊ’ ಸೂಚ್ಯಂಕವು ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತ 52 ವಾರಗಳ ಗರಿಷ್ಠ ಮಟ್ಟದ ಸಮೀಪಕ್ಕೆ ಬರುತ್ತಿವೆಯಾದರೂ ಇದರಲ್ಲಿರುವ ಒಟ್ಟು 15 ಕಂಪನಿಗಳ ಪೈಕಿ ಕೇವಲ ಆರು ಕಂಪನಿಗಳು ಮಾತ್ರ ವರ್ಷಾರಂಭದಿಂದ ಇಂದಿನವರೆಗಿನ ಅವಧಿಯಲ್ಲಿ ಮೌಲ್ಯ ಹೆಚ್ಚಿಸಿಕೊಂಡಿವೆ. ಉಳಿದ 9 ಕಂಪನಿಗಳು ಮೌಲ್ಯವನ್ನು ಕಳೆದುಕೊಂಡಿವೆ. ಈ ಅವಧಿಯಲ್ಲಿ ಮೌಲ್ಯ ಕಳೆದುಕೊಂಡಿರುವ ಕಂಪನಿಗಳ ಪೈಕಿ ಅಮರ ರಾಜ ಬ್ಯಾಟರೀಸ್‌ ಕಂಪನಿ (ಶೇ –26.85) ಮೊದಲ ಸ್ಥಾನದಲ್ಲಿದೆ. ಈ ಕಂಪನಿಯ ಷೇರಿನ ಬೆಲೆ ಕಳೆದ ಮೂರು ತಿಂಗಳಲ್ಲಿ ಶೇ 17.94 ಹಾಗೂ ಒಂದು ತಿಂಗಳಲ್ಲಿ ಶೇ 4.84ರಷ್ಟು ಕುಸಿದಿದೆ.

ಎಕ್ಸೈಡ್‌ ಇಂಡಸ್ಟ್ರೀಸ್‌ (ಶೇ –18.86), ಬಾಷ್‌ (ಶೇ –17.63), ಟಾಟಾ ಮೋಟರ್ಸ್‌ (ಶೇ –15.15), ಟ್ಯೂಬ್‌ ಇನ್‌ವೆಸ್ಟ್‌ಮೆಂಟ್‌ (ಶೇ – 9.47), ಬಾಲಕೃಷ್ಣ ಇಂಡಸ್ಟ್ರೀಸ್‌ (ಶೇ –8.24), ಭಾರತ್‌ ಫೋರ್ಜ್‌ (ಶೇ –7.55), ಎಂ.ಆರ್‌.ಎಫ್‌ (ಶೇ –3.80) ಕಂಪನಿಗಳು YTD ಲೆಕ್ಕಾಚಾರದ ‘ಗಳಿಕೆ ರೇಸ್‌’ನಲ್ಲಿ ಹಿಂದೆ ಉಳಿದಿವೆ. ಈ ಕಂಪನಿಗಳು ಈಗಷ್ಟೇ ಚೇತರಿಕೆಯ ಹಾದಿಯನ್ನು ಹಿಡಿಯುತ್ತಿವೆ.

ಷೇರುಪೇಟೆಯಲ್ಲಿನ ಮಾರಾಟದ ಒತ್ತಡದ ನಡುವೆಯೂ ಸದ್ಯಕ್ಕೆ ಗಳಿಗೆಯಲ್ಲಿ ಉಳಿದ ವಲಯಗಳಿಂತಲೂ ಆಟೊಮೊಬೈಲ್‌ ವಲಯ ಮುಂಚೂಣಿಯಲ್ಲಿದೆ. ವಾಹನಗಳ ತಯಾರಿಗೆ ಅತ್ಯಗತ್ಯವಾಗಿರುವ ಸ್ಟೀಲ್‌ ಹಾಗೂ ಅಲ್ಯೂಮಿನಿಯಂ ಲೋಹದ ಬೆಲೆಯಲ್ಲಿ ಇಳಿಕೆಯಾಗಿರುವುದು ಉತ್ಪಾದನಾ ವೆಚ್ಚದ ಮೇಲಿನ ಹೊರೆಯನ್ನು ತಗ್ಗಿಸಲಿವೆ. ಮುಂದಿನ ತ್ರೈಮಾಸಿಕದ ವೇಳೆಗೆ ಸೆಮಿಕಂಡಕ್ಟರ್‌ಗಳ ಕೊರತೆಯ ಪ್ರಮಾಣವೂ ಇಳಿಮುಖವಾಗುವ ನಿರೀಕ್ಷೆಯು ಆಟೊಮೊಬೈಲ್‌ ವಲಯದಲ್ಲಿ ಭರವಸೆಯ ಬೆಳಕನ್ನು ಮೂಡಿಸಿದೆ. ಹೀಗಾಗಿ ಹೂಡಿಕೆದಾರರು ಆಟೊ ವಲಯದತ್ತ ಚಿತ್ತ ಹರಿಸುತ್ತಿದ್ದಾರೆ ಎಂದು ಬ್ರೋಕರ್‌ ಸಂಸ್ಥೆಗಳು ವಿಶ್ಲೇಷಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.