ಹಲವು ರಸಗೊಬ್ಬರ ಕಂಪನಿಗಳ ಷೇರಿನ ಬೆಲೆ ಈ ವಾರ ಶೇ 2ರಿಂದ ಶೇ 14ರವರೆಗೂ ಹೆಚ್ಚಾಗಿದೆ. ಇನ್ನು ಕೆಲವು ಕಂಪನಿಗಳ ಷೇರಿನ ಮೌಲ್ಯವು ಶೇಕಡಾವಾರು ಲೆಕ್ಕದಲ್ಲಿ ಒಂದು ತಿಂಗಳಲ್ಲೇ ಎರಡಂಕಿಗಳಿಗಿಂತಲೂ ಹೆಚ್ಚಾಗಿರುವುದು ಹೂಡಿಕೆದಾರರ ಗಮನ ಸೆಳೆದಿದೆ.
**
ಕೇಂದ್ರ ಸರ್ಕಾರವು ‘ಭಾರತ್’ ಬ್ರ್ಯಾಂಡ್‌ನಡಿ ರಸಗೊಬ್ಬರ ಮಾರಾಟ ಮಾಡಲು ನಿರ್ಧರಿಸಿರುವುದು ರಸಗೊಬ್ಬರ ಹಾಗೂ ರಾಸಾಯನಿಕ ಉದ್ಯಮದಲ್ಲಿ ಸಂಚಲನ ಮೂಡಿಸಿದೆ. ಇದರ ನಡುವೆಯೇ ಷೇರುಪೇಟೆಯಲ್ಲಿ ಹಲವು ರಸಗೊಬ್ಬರ ಕಂಪನಿಗಳು ‘ಪೋಷಕಾಂಶ’ವನ್ನು ಹೆಚ್ಚಿಸಿಕೊಂಡು ತಮ್ಮ ಷೇರಿನ ಮೌಲ್ಯವನ್ನು ಗಗನಮುಖಿಯಾಗಿ ಬೆಳೆಸುತ್ತಿವೆ!
‘ದೀಪಕ್ ಫರ್ಟಿಲೈಸರ್ಸ್ & ಪೆಟ್ರೊಕೆಮಿಕಲ್ಸ್ ಕಾರ್ಪೊರೇಷನ್’, ‘ಜುವಾರಿ ಆಗ್ರೊ ಕೆಮಿಕಲ್ಸ್’, ‘ರಾಷ್ಟ್ರೀಯ ಕೆಮಿಕಲ್ಸ್ & ಫರ್ಟಿಲೈಸರ್ಸ್’ ಹಾಗೂ ‘ಫರ್ಟಿಲೈಸರ್ಸ್ ಕೆಮಿಕಲ್ಸ್ & ಟ್ರಾವಂಕೋರ್ ಲಿಮಿಟೆಡ್’ ಕಂಪನಿಗಳು ತಮ್ಮ ಷೇರಿನ ಮೌಲ್ಯವನ್ನು ಒಂದು ತಿಂಗಳಲ್ಲೇ ಶೇ 20ಕ್ಕಿಂತಲೂ ಹೆಚ್ಚು ಮಾಡಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿವೆ.
ಮುಂಬೈ ಷೇರು ವಿನಿಮಯ ಕೇಂದ್ರದ (BSE) ಪ್ರಧಾನ ಸೂಚ್ಯಂಕ ‘ಸೆನ್ಸೆಕ್ಸ್’ ಕಳೆದ ಒಂದು ವಾರದಲ್ಲಿ ಶೇ 1.36ರಷ್ಟು ಕುಸಿತ ಕಂಡಿದ್ದರೆ, ಒಂದು ತಿಂಗಳಲ್ಲಿ ಶೇ 6.45ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ‘ನಿಫ್ಟಿ–50’ ಸೂಚ್ಯಂಕವು ಒಂದು ವಾರದಲ್ಲಿ ಶೇ 1.12ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಆದರೆ, ಒಂದು ತಿಗಳಲ್ಲಿ ಶೇ 6.52ರಷ್ಟು ಮೌಲ್ಯವನ್ನು ವೃದ್ಧಿಸಿಕೊಂಡಿದೆ.
ರಸಗೊಬ್ಬರ ವಲಯದ ಹಲವು ಕಂಪನಿಗಳ ಷೇರಿನ ಬೆಲೆಯು ಈ ವಾರದ ವಹಿವಾಟಿನಲ್ಲಿ ಶೇ 2ರಿಂದ ಶೇ 14ರವರೆಗೂ ಹೆಚ್ಚಾಗಿದೆ. ಕೆಲವು ಕಂಪನಿಗಳ ಷೇರಿನ ಮೌಲ್ಯವು ಶೇಕಡಾವಾರು ಲೆಕ್ಕದಲ್ಲಿ ಒಂದು ತಿಂಗಳಲ್ಲಿ ಎರಡಂಕಿಗಿಂತಲೂ ಹೆಚ್ಚಾಗಿರುವುದು ಗಮನಾರ್ಹ ಸಂಗತಿ.
ದೀಪಕ್ ಫರ್ಟಿಲೈಸರ್ಸ್ ಮೌಲ್ಯ ಶೇ 46 ಹೆಚ್ಚಳ
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಕಳೆದ ಒಂದು ತಿಂಗಳ ವಹಿವಾಟನ್ನು ಅವಲೋಕಿಸಿದಾಗ ರಸಗೊಬ್ಬರ ವಲಯದಲ್ಲಿ ದೀಪಕ್ ಫರ್ಟಿಲೈಸರ್ಸ್ & ಪೆಟ್ರೊಕೆಮಿಕಲ್ಸ್ ಕಾರ್ಪೊರೇಷನ್ ಮೌಲ್ಯ ಹೆಚ್ಚಿಸಿಕೊಂಡ ಕಂಪನಿಗಳ ಪೈಕಿ ಮುಂಚೂಣಿಯಲ್ಲಿದೆ. ಕಳೆದ ಒಂದು ವಾರದಲ್ಲಿ ಶೇ 5.69ರಷ್ಟು ಮೌಲ್ಯ ಹೆಚ್ಚಿಸಿಕೊಂಡಿರುವ ಈ ಕಂಪನಿಯ ಷೇರಿನ ಬೆಲೆ ಒಂದು ತಿಂಗಳಲ್ಲಿ ಶೇ 46.46ರಷ್ಟು ಏರಿಕೆಯಾಗಿರುವುದು ವಿಶೇಷ. ಮೂರು ತಿಂಗಳಲ್ಲಿ ಶೇ 52.49, ಆರು ತಿಂಗಳಲ್ಲಿ ಶೇ 76.99 ಹಾಗೂ ಒಂದು ವರ್ಷದಲ್ಲಿ ಶೇ 134ರಷ್ಟು ಮೌಲ್ಯ ವೃದ್ಧಿಯಾಗಿದೆ.
2021ರ ನವೆಂಬರ್ 23ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹343.55) ಕುಸಿದ ದಿನದಿಂದ ಈ ಕಂಪನಿಯ ಷೇರಿನ ಬೆಲೆಯು ಇದುವರೆಗೆ ಶೇ 177ರಷ್ಟು ಏರಿಕೆಯಾಗಿದೆ. ಆಗಸ್ಟ್ 24ರಂದು 52 ವಾರಗಳ ಗರಿಷ್ಠ ಮಟ್ಟಕ್ಕೆ (₹996.85) ಏರಿದ್ದ ಷೇರಿನ ಬೆಲೆಯು, ಈ ಮಟ್ಟದಿಂದ ಕೇವಲ ಶೇ 4.29ರಷ್ಟು ಕೆಳಗಿದೆ.
ಜುವಾರಿ ಅಗ್ರೊ ಕೆಮಿಕಲ್ಸ್ ಕಂಪನಿಯ ಷೇರಿನ ಬೆಲೆಯು ಒಂದು ವಾರದಲ್ಲಿ ಶೇ 10.75ರಷ್ಟು ಹಾಗೂ ಒಂದು ತಿಂಗಳಲ್ಲಿ ಶೇ 28.75ರಷ್ಟು ಹೆಚ್ಚಾಗಿದೆ. ಮೂರು ತಿಂಗಳಲ್ಲಿ ಶೇ 33.86, ಆರು ತಿಂಗಳಲ್ಲಿ ಶೇ 63.22 ಹಾಗೂ ಒಂದು ವರ್ಷದಲ್ಲಿ ಶೇ 59.98ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ನವೆಂಬರ್ 29ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹101) ಕುಸಿದಿದ್ದ ಷೇರಿನ ಬೆಲೆಯು ಕಳೆದ ಏಪ್ರಿಲ್ 21ರಂದು 52 ವಾರಗಳ ಗರಿಷ್ಠ ಮಟ್ಟಕ್ಕೆ (₹218.85) ತಲುಪಿತ್ತು.
ರಾಷ್ಟ್ರೀಯ ಕೆಮಿಕಲ್ಸ್ & ಫರ್ಟಿಲೈಸರ್ಸ್ ಕಂಪನಿಯು ಒಂದು ವಾರದಲ್ಲಿ ಶೇ 14.87ರಷ್ಟು ಹಾಗೂ ಒಂದು ತಿಂಗಳಲ್ಲಿ ಶೇ 25.13ರಷ್ಟು ಮೌಲ್ಯ ವೃದ್ಧಿಸಿಕೊಂಡಿದೆ. ಈ ಕಂಪನಿಯು ಮೂರು ತಿಂಗಳಲ್ಲಿ ಶೇ 13.32, ಆರು ತಿಂಗಳಲ್ಲಿ ಶೇ 50.18 ಹಾಗೂ ಒಂದು ವರ್ಷದಲ್ಲಿ ಶೇ 47.23ರಷ್ಟು ಷೇರಿನ ಬೆಲೆಯನ್ನು ಹೆಚ್ಚಿಸಿಕೊಂಡಿದೆ. 2021ರ ನವೆಂಬರ್ 29ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹66) ಕುಸಿದಿದ್ದ ಈ ಕಂಪನಿಯ ಷೇರಿನ ಬೆಲೆಯು ಕಳೆದ ಏಪ್ರಿಲ್ 19ರಂದು 52 ವಾರಗಳ ಗರಿಷ್ಠ ಮಟ್ಟಕ್ಕೆ (112.65) ಏರಿಕೆ ಕಂಡಿತ್ತು.
ಕಳೆದ ಒಂದು ತಿಂಗಳಲ್ಲಿ ಫರ್ಟಿಲೈಸರ್ಸ್ ಕೆಮಿಕಲ್ಸ್ & ಟ್ರಾವಂಕೋರ್ ಲಿಮಿಟೆಡ್ ಶೇ 22.58, ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ಶೇ 16.35, ಗುಜರಾತ್ ನರ್ಮದಾ ವೆಲ್ಲಿ ಫರ್ಟಿಲೈಸರ್ಸ್ & ಕೆಮಿಕಲ್ಸ್ (ಜಿಎನ್‌ಎಫ್‌ಸಿ) ಶೇ 13.10, ಚಂಬಲ್ ಫರ್ಟಿಲೈಸರ್ಸ್ & ಕೆಮಿಕಲ್ಸ್ ಲಿಮಿಟೆಡ್ ಶೇ 10.75ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.
‘ಬ್ರ್ಯಾಂಡ್ ವ್ಯಾಲ್ಯೂ’ ಕುಸಿಯುವ ಆತಂಕ
ಭಾರಿ ಪ್ರಮಾಣದಲ್ಲಿ ಸಬ್ಸಿಡಿ ನೀಡುವುದರಿಂದ ‘ಭಾರತ್’ ಬ್ರ್ಯಾಂಡ್ ಹೆಸರಿನಲ್ಲೇ ಅಕ್ಟೋಬರ್‌ನಿಂದ ರಸಗೊಬ್ಬರಗಳನ್ನು ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ‘ಪ್ರಧಾನಮಂತ್ರಿ ಭಾರತೀಯ ಜನಉರ್ವರಕ್ ಪರಿಯೋಜನಾ’ (ಪಿಎಂಬಿಜೆಪಿ) ಅಡಿ ‘ಒಂದು ದೇಶ ಒಂದು ರಸಗೊಬ್ಬರ’ ಕಾರ್ಯ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದರಿಂದಾಗಿ ಯೂರಿಯಾ, ಡಿಎಪಿ ಸೇರಿ ಇನ್ನಿತರ ರಸಗೊಬ್ಬರಗಳನ್ನು ಉತ್ಪಾದಿಸುವ ಕಂಪನಿಗಳು ಇನ್ನು ಮುಂದೆ ಚೀಲಗಳ ಮೇಲೆ ದೊಡ್ಡದಾಗಿ ‘ಭಾರತ್’ ಹೆಸರನ್ನು ನಮೂದಿಸಬೇಕಾಗಿದೆ.
ಕಂಪನಿಗಳು ಚೀಲದ ಮೂರನೇ ಒಂದು ಭಾಗದಲ್ಲಿ ಮಾತ್ರ ತಮ್ಮ ಹೆಸರನ್ನು ಪ್ರದರ್ಶಿಸಲು ಅವಕಾಶ ನೀಡಿದೆ. ಬೇರೆ ಬೇರೆ ಕಂಪನಿಗಳು ತಯಾರಿಸಿದರೂ ರಸಗೊಬ್ಬರಗಳು ಒಂದೇ ಆಗಿರುವುದರಿಂದ ‘ಭಾರತ್’ ಬ್ರ್ಯಾಂಡ್‌ನಲ್ಲಿ ಮಾತ್ರ ಮಾರಾಟವಾಗಬೇಕು ಎಂಬುದು ಕೇಂದ್ರ ಸರ್ಕಾರದ ಆಶಯ. ಒಂದೇ ಬ್ರ್ಯಾಂಡ್‌ನಡಿ ಮಾರಾಟ ಆಗುವುದರಿಂದ ಸ್ಥಳೀಯವಾಗಿಯೂ ರಸಗೊಬ್ಬರ ಮಾರಾಟವಾಗುವುದರಿಂದ ಸಾಗಾಟದ ಮೇಲಿನ ಸಬ್ಸಿಡಿ ವೆಚ್ಚ ತಗ್ಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.
ಕೆಲವು ರಸಗೊಬ್ಬರ ಕಂಪನಿಗಳು ಈಗಾಗಲೇ ತಮ್ಮ ‘ಬ್ರ್ಯಾಂಡ್’ ಹೆಸರಿನ ಮೂಲಕ ರೈತರಿಗೆ ಚಿರಪರಿಚಿತವಾಗಿದೆ. ಕಂಪನಿಗಳು ತಮ್ಮ ರಸಗೊಬ್ಬರ ಬಳಕೆಯಿಂದ ಆಗಲಿರುವ ಲಾಭಗಳ ಬಗ್ಗೆ ಪ್ರಚಾರ ಮಾಡಿ ರೈತರನ್ನು ಸೆಳೆಯುತ್ತಿದ್ದವು. ಆದರೆ, ಇನ್ನು ಮುಂದೆ ಎಲ್ಲವೂ ‘ಭಾರತ್’ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುವುದರಿಂದ ಕಂಪನಿಯ ‘ಬ್ರ್ಯಾಂಡ್ ವ್ಯಾಲ್ಯೂ’ ಮಹತ್ವ ಕಳೆದುಕೊಳ್ಳಲಿದೆ. ಇದು ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮೂಲಕ ಲಾಭ ಗಳಿಕೆಯ ಪ್ರಮಾಣ ಕುಗ್ಗಬಹುದು ಎಂಬ ಆತಂಕ ಈಗಾಗಲೇ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿಕೊಂಡಿರುವ ರಸಗೊಬ್ಬರ ಕಂಪನಿಗಳನ್ನು ಕಾಡುತ್ತಿದೆ.
ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಈಗ ಅಸ್ತಿತ್ವ ಕಂಡುಕೊಳ್ಳುತ್ತಿರುವ ಕಂಪನಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಈ ಹೊಸ ವ್ಯವಸ್ಥೆ ಅವಕಾಶ ಕಲ್ಪಿಸಿಕೊಡಲಿದೆ. ಇದರಿಂದ ಅಂತಹ ಕಂಪನಿಗಳಿಗೆ ವ್ಯಾಪಾರ ವಿಸ್ತರಣೆ ಮಾಡಿಕೊಳ್ಳಲು ಅನುಕೂಲವಾಗಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ.
ರಸಗೊಬ್ಬರ ಕಂಪನಿಗಳ ವಹಿವಾಟಿನ ಮೇಲೆ ಅಲ್ಪಾವಧಿಯಲ್ಲಿ ಈ ಯೋಜನೆಯು ಯಾವುದೇ ಪರಿಣಾಮ ಬೀರದಿದ್ದರೂ ದೀರ್ಘಾವಧಿಯಲ್ಲಿ ಇದು ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದರ ಮೇಲೆ ಹೂಡಿಕೆದಾರರು ನಿಗಾ ವಹಿಸಬೇಕು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.