ADVERTISEMENT

ಫೆ.16ರಿಂದ ರೈಲ್‌ಟೆಲ್‌ ಐಪಿಒ; ಪ್ರತಿ ಷೇರಿಗೆ ₹93–94 ನಿಗದಿ

ಪಿಟಿಐ
Published 11 ಫೆಬ್ರುವರಿ 2021, 16:38 IST
Last Updated 11 ಫೆಬ್ರುವರಿ 2021, 16:38 IST
ರೈಲ್‌ಟೆಲ್‌ ಐಪಿಒ–ಸಾಂದರ್ಭಿಕ ಚಿತ್ರ
ರೈಲ್‌ಟೆಲ್‌ ಐಪಿಒ–ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ರೈಲ್ವೆಗೆ ಸಂಬಂಧಿಸಿದ ಸರ್ಕಾರಿ ಸ್ವಾಮ್ಯದ ಮತ್ತೊಂದು ಸಂಸ್ಥೆಯ ಆರಂಭಿಕ ಷೇರು ಮಾರಾಟಕ್ಕೆ ಚಾಲನೆ ಸಿಗಲಿದೆ. ಫೆಬ್ರುವರಿ 16ರಿಂದ ರೈಲ್‌ಟೆಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಷೇರು ಖರೀದಿಗೆ ಸಾರ್ವಜನಿಕರು ಬಿಡ್‌ ಸಲ್ಲಿಸಬಹುದಾಗಿದೆ.

ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ ಪ್ರಕ್ರಿಯೆಯ (ಐಪಿಒ) ಮೂಲಕ ಕೇಂದ್ರ ಸರ್ಕಾರವು ರೈಲ್‌ಟೆಲ್‌ನಲ್ಲಿ ಶೇ 27.16ರಷ್ಟು ಪಾಲುದಾರಿಕೆಯನ್ನು 8,71,53,369 ಈಕ್ವಿಟಿ ಷೇರುಗಳ ಮೂಲಕ ಮಾರಾಟ ಮಾಡಲಿದೆ. ಪ್ರತಿ ಷೇರಿಗೆ ₹93ರಿಂದ ₹94 ನಿಗದಿ ಪಡಿಸಿರುವುದಾಗಿ ಸಂಸ್ಥೆಯು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ನಿಗದಿತ ಗರಿಷ್ಠ ಬೆಲೆಗೆ ಷೇರು ಮಾರಾಟವಾದರೂ ಸರ್ಕಾರಕ್ಕೆ ₹819 ಕೋಟಿ ಸಂಗ್ರಹವಾಗಲಿದೆ. ಐಪಿಒ ಬಿಡ್‌ ಸಲ್ಲಿಕೆಗೆ ಮೂರು ದಿನಗಳ ಕಾಲಾವಕಾಶವಿದ್ದು, ಫೆಬ್ರುವರಿ 18ರಂದು ಕೊನೆಯ ದಿನವಾಗಿದೆ. ಸಾಂಸ್ಥಿಕ ಹೂಡಿಕೆದಾರರಿಗೆ ಫೆಬ್ರುವರಿ 15ರಂದು ಬಿಡ್‌ ಸಲ್ಲಿಕೆ ಅವಕಾಶವಿದೆ.

ADVERTISEMENT

ಸಾರ್ವಜನಿಕ ವಲಯದ 'ಮಿನಿ ರತ್ನ' ಸಾಲಿಗೆ ಸೇರಿರುವ ರೈಲ್‌ಟೆಲ್‌, ಭಾರತೀಯ ರೈಲ್ವೆಗಾಗಿ ಆಪ್ಟಿಕಲ್‌ ಫೈಬರ್‌ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಬೃಹತ್‌ ದೂರಸಂಪರ್ಕ ಮೂಲ ಸೌಕರ್ಯ ಸಂಸ್ಥೆಯಾಗಿದೆ. ದೇಶದಾದ್ಯಂತ ಬ್ರಾಡ್‌ಬ್ಯಾಂಡ್‌ ಟೆಲಿಕಾಂ ಮತ್ತು ಮಲ್ಟಿಮೀಡಿಯಾ ಸಂಪರ್ಕವನ್ನು ಒದಗಿಸುತ್ತಿದೆ.

2020ರ ಜೂನ್‌ 30ರವರೆಗೂ ರೈಲ್‌ಟೆಲ್‌, ದೇಶದ ನಗರಗಳು ಮತ್ತು ಪಟ್ಟಣ ಪ್ರದೇಶಗಳ 5,677 ರೈಲ್ವೆ ನಿಲ್ದಾಣಗಳು ಹಾಗೂ 55,000 ಕಿ.ಮೀ. ವ್ಯಾಪ್ತಿಯಲ್ಲಿ ಆಪ್ಟಿಕ್‌ ಫೈಬರ್‌ ಸಂಪರ್ಕ ಸಾಧಿಸಿದೆ.

ಐಪಿಒದಲ್ಲಿ ಅರ್ಧದಷ್ಟು ಪಾಲು ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಿಡಲಾಗಿದೆ. ರಿಟೇಲ್‌ ಹೂಡಿಕೆದಾರರಿಗೆ ಶೇ 35 ಹಾಗೂ ಶೇ 15ರಷ್ಟು ಷೇರುಗಳನ್ನು ಬೃಹತ್ ಮೊತ್ತದ ಹೂಡಿಕೆದಾರರಿಗೆ ವಿತರಿಸಲಾಗುತ್ತದೆ.

2018ರ ಡಿಸೆಂಬರ್‌ನಲ್ಲಿ ಸಚಿವ ಸಂಪುಟವು ರೈಲ್‌ಟೆಲ್‌ನಲ್ಲಿ ಐಪಿಒ ಮೂಲಕ ಸರ್ಕಾರದ ಶೇ 25ರಷ್ಟು ಪಾಲು ಮಾರಾಟಕ್ಕೆ ಅನುಮೋದನೆ ನೀಡಿತ್ತು. ಐಸಿಐಸಿಐ ಸೆಕ್ಯುರಿಟೀಸ್‌, ಐಡಿಬಿಐ ಕ್ಯಾಪಿಟಲ್‌, ಎಸ್‌ಬಿಐ ಕ್ಯಾಪಿಟಲ್‌ ಮಾರ್ಕೆಟ್‌ ಈ ಐಪಿಒ ವಿತರಣೆ ಪ್ರಕ್ರಿಯೆ ನಡೆಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.