ADVERTISEMENT

ಉಕ್ರೇನ್ ಮೇಲೆ ರಷ್ಯಾ ದಾಳಿ: ದೇಶೀಯ ಷೇರುಪೇಟೆ ಕುಸಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2022, 8:34 IST
Last Updated 24 ಫೆಬ್ರುವರಿ 2022, 8:34 IST
   

ಮುಂಬೈ: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿದ ಬೆನ್ನಲ್ಲೇ ಭಾರತದ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿದೆ.

ಮುಂಬೈ ಷೇರು ಸೂಚ್ಯಂಕ 1,457 ಅಂಶಗಳಷ್ಟು ಕುಸಿದಿದ್ದು, 55,774 ಅಂಶಗಳಲ್ಲಿ ವಹಿವಾಟು ಆರಂಭಿಸಿತು. ನಿಫ್ಟಿ 391 ಅಂಶ ಕುಸಿತ ಕಂಡು, 16,671 ಅಂಶಗಳಲ್ಲಿ ವಹಿವಾಟು ಆರಂಭಿಸಿತು. ಆರಂಭಿಕ ವಹಿವಾಟಿನಲ್ಲಿ. ಸೆನ್ಸೆಕ್ಸ್ ಮತ್ತು ನಿಫ್ಟಿಯ ಎಲ್ಲಾ ಷೇರುಗಳು ಕೆಂಪು ಬಣ್ಣದಲ್ಲಿ ವಹಿವಾಟು ಆರಂಭಿಸಿದವು.

ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಇಂದಿನ ಕುಸಿತವೂ ಸೇರಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಏಳನೇ ದಿನವೂ ಕುಸಿತ ದಾಖಲಿಸಿವೆ.

ವರ್ಷದ ಆರಂಭಕ್ಕೆ ಹೋಲಿಸಿದರೆ ಸೆನ್ಸೆಕ್ಸ್ ಶೇಕಡ 5.01ರಷ್ಟು (2,914 ಅಂಶ) ಮತ್ತು ನಿಫ್ಟಿ ಶೇಕಡ 4.29 (744 ಅಂಶ) ಕುಸಿತ ದಾಖಲಿಸಿವೆ.

ADVERTISEMENT

ಇಂಡಸ್‌ಲ್ಯಾಂಡ್ ಬ್ಯಾಂಕ್ ಷೇರುಗಳು ಶೇಕಡ 4.85 ರಷ್ಟು ಕುಸಿದಿದ್ದು, ₹ 904.60 ಬೆಲೆ ಇದೆ. ₹ 915ರಲ್ಲಿ ವಹಿವಾಟು ಆರಂಭವಾಗಿತ್ತು.

ಟೆಕ್ ಮಹೀಂದ್ರಾ ಐಟಿ ಷೇರುಗಳು ಶೇಕಡ 4.92 ರಷ್ಟು ಕುಸಿದು ₹ 1344ಕ್ಕೆ ಇಳಿದಿದೆ. ಭಾರ್ತಿ ಏರ್‌ಟೆಲ್ ಷೇರುಗಳು ಶೇಕಡ 4.39 ರಷ್ಟು ಕುಸಿದು, ₹ 673.73 ಬೆಲೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.