ADVERTISEMENT

Sensex | 4ನೇ ದಿನವೂ ಗೂಳಿ ಓಟ: 79 ಸಾವಿರ ದಾಟಿದ ಸೂಚ್ಯಂಕ; ಸಾರ್ವಕಾಲಿಕ ದಾಖಲೆ

ಪಿಟಿಐ
Published 27 ಜೂನ್ 2024, 6:02 IST
Last Updated 27 ಜೂನ್ 2024, 6:02 IST
<div class="paragraphs"><p>ಸೂಚ್ಯಂಕ</p></div>

ಸೂಚ್ಯಂಕ

   

ಮುಂಬೈ: ಇನ್ಫೊಸಿಸ್‌, ರಿಲಯನ್ಸ್‌ ಇಂಡಸ್ಟ್ರಿಸ್‌ ಹಾಗೂ ಟಿಸಿಎಸ್‌ ಷೇರುಗಳ ಖರೀದಿ ಭರಾಟೆಯಿಂದಾಗಿ ಸತತ ನಾಲ್ಕನೇ ದಿನವಾದ ಗುರುವಾರವೂ ದೇಶದ ಷೇರುಪೇಟೆಗಳಲ್ಲಿ ಗೂಳಿ ಓಟ ಮುಂದುವರಿಯಿತು. 

ಇದೇ ಮೊದಲ ಬಾರಿಗೆ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 79 ಸಾವಿರ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 24 ಸಾವಿರ ಅಂಶದ ಗಡಿ ದಾಟಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.

ADVERTISEMENT

ಸೆನ್ಸೆಕ್ಸ್ 568 ಅಂಶ ಏರಿಕೆ (ಶೇ 0.72ರಷ್ಟು) ಏರಿಕೆ ಕಂಡು, 79,243 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ದಿನದ ವಹಿವಾಟಿನಲ್ಲಿ 721 ಅಂಶ ಏರಿಕೆ ಕಂಡಿತ್ತು. 

ನಿಫ್ಟಿ 175 ಅಂಶ ಏರಿಕೆಯಾಗಿದ್ದು, 24,044 ಅಂಶಕ್ಕೆ ತಲುಪಿದೆ. ಇಂಟ್ರಾಡೇನಲ್ಲಿ 218 ಅಂಶ ಏರಿಕೆ ಕಂಡಿತ್ತು. 

ಸೆನ್ಸೆಕ್ಸ್ ಗುಚ್ಛದಲ್ಲಿನ ಅಲ್ಟ್ರಾಟೆಕ್‌ ಸಿಮೆಂಟ್ ಷೇರಿನ ಮೌಲ್ಯದಲ್ಲಿ ಶೇ 5ರಷ್ಟು ಏರಿಕೆಯಾಗಿದೆ. ಇನ್ಫೊಸಿಸ್‌, ಟಿಸಿಎಸ್‌, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯು ಸ್ಟೀಲ್‌, ಟಾಟಾ ಮೋಟರ್ಸ್‌, ಭಾರ್ತಿ ಏರ್‌ಟೆಲ್‌, ಪವರ್‌ ಗ್ರಿಡ್‌, ಕೋಟಕ್‌ ಮಹೀಂದ್ರ, ಟೆಕ್‌ ಮಹೀಂದ್ರ ಕಂಪನಿಯ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ.

ಎಲ್‌ ಆ್ಯಂಡ್‌ ಟಿ, ಸನ್‌ ಫಾರ್ಮಾ, ನೆಸ್ಲೆ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಮಾರುತಿ ಸುಜುಕಿ ಕಂಪನಿಯ ಷೇರುಗಳು ಇಳಿಕೆ ಕಂಡಿವೆ. 

‘ಬಹುತೇಕ ಎಲ್ಲಾ ವಲಯದ ಷೇರುಗಳು ಏರಿಕೆ ಕಂಡಿವೆ. ಅದರಲ್ಲೂ ಐ.ಟಿ ಮತ್ತು ಎನರ್ಜಿ ವಲಯದ ಕಂಪನಿಗಳ ಷೇರಿನ ಮೌಲ್ಯದಲ್ಲಿ ಭಾರಿ ಏರಿಕೆಯಾಗಿದೆ’ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಸೋಲ್‌, ಟೋಕಿಯೊ, ಹಾಂಗ್‌ಕಾಂಗ್‌ ಮಾರುಕಟ್ಟೆಯು ಇಳಿಕೆ ದಾಖಲಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ನಡೆದ ವಹಿವಾಟಿನಲ್ಲಿ ₹3,535 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಏರಿಕೆ ಹಾದಿಯಲ್ಲಿದೆ. ಶೇ 0.84ರಷ್ಟು ಹೆಚ್ಚಳವಾಗಿದ್ದು, ಪ್ರತಿ ಬ್ಯಾರೆಲ್‌ಗೆ 85.97 ಡಾಲರ್‌ಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.