ADVERTISEMENT

ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಏರಿಕೆ

ಪಿಟಿಐ
Published 9 ಜುಲೈ 2024, 14:37 IST
Last Updated 9 ಜುಲೈ 2024, 14:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಸಕಾರಾತ್ಮಕ ವಹಿವಾಟು ನಡೆದಿದ್ದು, ಸೂಚ್ಯಂಕಗಳು ಹೊಸ ಎತ್ತರಕ್ಕೆ ಜಿಗಿದಿವೆ. 

ಆಟೊ ಮತ್ತು ಎಫ್‌ಎಂಸಿಜಿ ವಲಯದ ಷೇರುಗಳ ಏರಿಕೆ ಹಾಗೂ ವಿದೇಶಿ ಬಂಡವಾಳದ ಒಳಹರಿವಿನ ಹೆಚ್ಚಳವು ಇದಕ್ಕೆ ನೆರವಾಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ 391 ಅಂಶ ಏರಿಕೆ ಕಂಡು, 80,351 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 112 ಅಂಶ ಏರಿಕೆ ಕಂಡು, 24,433 ಅಂಶಗಳಲ್ಲಿ ಸ್ಥಿರಗೊಂಡಿತು. 

ADVERTISEMENT

ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯವು ₹451 ಲಕ್ಷ ಕೋಟಿ ದಾಟಿದೆ.

ಉತ್ತರ ಪ್ರದೇಶದ ಸರ್ಕಾರವು ಪರಿಸರಸ್ನೇಹಿ ವಾಹನಗಳಿಗೆ ಉತ್ತೇಜನ ನೀಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಹೈಬ್ರೀಡ್‌ ಕಾರುಗಳ ಮೇಲಿನ ನೋಂದಣಿ ತೆರಿಗೆಯನ್ನು ಮನ್ನಾ ಮಾಡಿದೆ. ಹಾಗಾಗಿ, ಸೆನ್ಸೆಕ್ಸ್‌ ಗುಚ್ಛದಲ್ಲಿನ ಮಾರುತಿ ಸುಜುಕಿ ಇಂಡಿಯಾ ಷೇರಿನ ಮೌಲ್ಯದಲ್ಲಿ ಶೇ 7ರಷ್ಟು ಏರಿಕೆಯಾಗಿದೆ.

ಮಹೀಂದ್ರ ಆ್ಯಂಡ್‌ ಮಹೀಂದ್ರ, ಟೈಟನ್‌, ಸನ್‌ ಫಾರ್ಮಾ, ಐಟಿಸಿ, ನೆಸ್ಲೆ ಇಂಡಿಯಾ ಮತ್ತು ಟಾಟಾ ಮೋಟರ್ಸ್‌ ಷೇರಿನ ಮೌಲ್ಯವೂ ಏರಿಕೆಯಾಗಿದೆ. 

ರಿಲಯನ್ಸ್ ಇಂಡಸ್ಟ್ರಿಸ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಸೋಲ್‌, ಟೋಕಿಯೊ ಮತ್ತು ಶಾಂಘೈ ಮಾರುಕಟ್ಟೆಯು ಏರಿಕೆ ಕಂಡಿವೆ. ಹಾಂಗ್‌ಕಾಂಗ್‌ ಮಾರುಕಟ್ಟೆ ಇಳಿಕೆ ದಾಖಲಿಸಿದೆ. ಜಾಗತಿಕ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಶೇ 0.51ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 85.31 ಡಾಲರ್‌ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.