ADVERTISEMENT

ಷೇರು ಮಾರುಕಟ್ಟೆ | ಮುಂದುವರಿದ ಗೂಳಿ ಓಟ

ಪಿಟಿಐ
Published 13 ಜೂನ್ 2024, 14:38 IST
Last Updated 13 ಜೂನ್ 2024, 14:38 IST
ಷೇರುಪೇಟೆಯಲ್ಲಿ ಗೂಳಿ ಓಟ
ಷೇರುಪೇಟೆಯಲ್ಲಿ ಗೂಳಿ ಓಟ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿಯೂ ಗೂಳಿ ಓಟ ಮುಂದುವರಿಯಿತು.

ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಹಾಗಾಗಿ, ಆರ್‌ಬಿಐ ರೆಪೊ ದರ ಕಡಿತಗೊಳಿಸುವ ಸಾಧ್ಯತೆಯಿದೆ ಎಂಬ ಹೂಡಿಕೆದಾರರ ನಿರೀಕ್ಷೆಯಿಂದಾಗಿ ಷೇರು ಸೂಚ್ಯಂಕಗಳು ಏರಿಕೆ ಪಥದಲ್ಲಿ ಸಾಗಿವೆ. 

ಬಂಡವಾಳ ಸರಕು, ಗ್ರಾಹಕರ ಬಳಕೆಯ ವಸ್ತುಗಳು ಹಾಗೂ ಕೈಗಾರಿಕಾ ವಲಯದ ಷೇರುಗಳ ಖರೀದಿಯೂ ಇದಕ್ಕೆ ನೆರವಾಯಿತು ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 204 ಅಂಶ ಏರಿಕೆ ಕಂಡು, 76,810 ಅಂಶಗಳಲ್ಲಿ ವಹಿವಾಟು ಸ್ಥಿರಗೊಂಡಿತು. ಆರಂಭಿಕ ವಹಿವಾಟಿನಲ್ಲಿ 538 ಅಂಶ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 77,145 ಅಂಶಕ್ಕೆ ಮುಟ್ಟಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 75 ಅಂಶ ಏರಿಕೆ ಕಂಡು 23,398 ಅಂಶಗಳಲ್ಲಿ ಅಂತ್ಯಗೊಂಡಿತು. ವಹಿವಾಟಿನ ಒಂದು ಹಂತದಲ್ಲಿ 158 ಅಂಶ ಏರಿಕೆಯಾಗಿತ್ತು. 

ಸೆನ್ಸೆಕ್ಸ್ ಗುಚ್ಛದಲ್ಲಿನ ಮಹೀಂದ್ರ ಆ್ಯಂಡ್‌ ಮಹೀಂದ್ರ, ಟೈಟನ್‌, ಎಲ್‌ ಆ್ಯಂಡ್‌ ಟಿ, ಇಂಡಸ್‌ಇಂಡ್‌ ಬ್ಯಾಂಕ್‌, ಟೆಕ್‌ ಮಹೀಂದ್ರ, ಅಲ್ಟ್ರಾಟೆಕ್‌ ಸಿಮೆಂಟ್‌, ವಿಪ್ರೊ, ಟಿಸಿಎಸ್‌, ಬಜಾಜ್‌ ಫೈನಾನ್ಸ್‌ ಮತ್ತು ನೆಸ್ಲೆ ಇಂಡಿಯಾ ಕಂಪನಿ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. 

ಹಿಂದುಸ್ತಾನ್‌ ಯೂನಿಲಿವರ್‌, ಪವರ್‌ ಗ್ರಿಡ್‌, ಎಕ್ಸಿಸ್ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್‌ ಮತ್ತು ಐಟಿಸಿ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯವು 431.67 ಲಕ್ಷ ಕೋಟಿಗೆ ತಲುಪಿದ್ದು, ಸಾರ್ವಕಾಲಿಕ ದಾಖಲೆ ಬರೆದಿದೆ.

ಸೋಲ್‌, ಹಾಂಗ್‌ಕಾಂಗ್‌ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಟೋಕಿಯೊ, ಶಾಂಘೈ ಮಾರುಕಟ್ಟೆಯು ಇಳಿಕೆ ದಾಖಲಿಸಿವೆ.

‘ಅಮೆರಿಕ ಮತ್ತು ಭಾರತದಲ್ಲಿ ಹಣದುಬ್ಬರವು ಇಳಿಕೆಯಾಗಿದೆ. ಪ್ರಮುಖವಾಗಿ ಬ್ಯಾಂಕಿಂಗ್‌ ಸೂಚ್ಯಂಕದ ದೃಷ್ಟಿಯಲ್ಲಿ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಹಾಗಾಗಿ, ದೇಶೀಯ ಷೇರುಪೇಟೆಗಳು ಏರಿಕೆ ಕಂಡಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯ್‌ಕುಮಾರ್‌ ಹೇಳಿದ್ದಾರೆ.

ಅಮೆರಿಕದಲ್ಲಿ ಕಳೆದ ಎರಡು ತಿಂಗಳಿನಿಂದ ಚಿಲ್ಲರೆ ಹಣದುಬ್ಬರವು ಇಳಿಕೆಯಾಗಿದ್ದು, ನಿಗದಿತ ಗುರಿಯತ್ತ ಸಾಗುತ್ತಿದೆ ಎಂದು ಅಮೆರಿಕದ ಫೆಡರಲ್‌ ರಿಸರ್ವ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪ್ರಸಕ್ತ ವರ್ಷದಲ್ಲಿ ಒಂದು ಬಾರಿ ಮಾತ್ರ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.