ಬೆಂಗಳೂರು:ಮಂಗಳವಾರ ಸಹ ದೇಶದ ಷೇರು ಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ದಾಖಲಾಗಿದ್ದು, ನಿಫ್ಟಿ ಮತ್ತು ಸೆನ್ಸೆಕ್ಸ್ ಇನ್ನಷ್ಟು ಎತ್ತರ ಮುಟ್ಟಿವೆ. ಐಟಿಸಿ ಹಾಗೂ ಹೀರೊ ಮೋಟೊಕಾರ್ಪ್ ಷೇರುಗಳು ಹೆಚ್ಚು ಗಳಿಕೆ ದಾಖಲಿಸಿದವು.
ರಾಷ್ಟ್ರೀಯ ಷೇರು ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇ 0.27ರಷ್ಟು ಏರಿಕೆಯೊಂದಿಗೆ 12,362.30 ಅಂಶ ತಲುಪಿದರೆ, ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶೇ 0.22ರಷ್ಟು ಹೆಚ್ಚಳದೊಂದಿಗೆ 41,952.63 ಅಂಶ ಮುಟ್ಟಿತು.
ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ವಹಿವಾಟು ಒಪ್ಪಂದ ನಡೆಯುವ ಸಾಧ್ಯತೆ ದಟ್ಟವಾದ ಕಾರಣದಿಂದ ಏಷ್ಯಾ ವಲಯದ ಷೇರುಗಳು ಹೊಸ ಎತ್ತರ ಕಂಡವು.
ಐಟಿಸಿ ಲಿಮಿಟೆಡ್ ಶೇ 1.74ರಷ್ಟು ಏರಿಕೆ ಕಂಡರೆ, ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೊ ಮೋಟೊಕಾರ್ಪ್ ಶೇ 2.15ರಷ್ಟು ಗಳಿಕೆ ದಾಖಲಿಸಿತು. ತ್ರೈಮಾಸಿಕದಲ್ಲಿ ಉತ್ತಮ ಲಾಭಾಂಶ ಗಳಿಕೆ ಹೊಂದಿರುವುದಾಗಿ ಪ್ರಕಟಿಸಿಕೊಂಡಿರುವ ಟಿವಿ18 ಬ್ರಾಡ್‌ಕಾಸ್ಟ್ ಷೇರು ಶೇ 16ರಷ್ಟು ಹೆಚ್ಚಿತು.
ಇನ್ನು ಎನ್‌ಟಿಪಿಸಿ ಷೇರು ಶೇ 1.48, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ 1.43, ಟೆಕ್ ಮಹೀಂದ್ರಾ ಶೇ 1.42, ಆಕ್ಸಿಸ್ ಬ್ಯಾಂಕ್ ಶೇ 1.38, ನೆಸ್ಟ್ಲೆ ಶೇ 1.32, ಎಚ್‌ಡಿಎಫ್‌ಸಿ ಶೇ 1.1 ಹಾಗೂ ಟಿಸಿಎಸ್ ಷೇರು ಶೇ 0.74ರಷ್ಟು ಗಳಿಕೆ ಕಂಡವು.
ಯೆಸ್ ಬ್ಯಾಂಕ್ ಷೇರು ಶೇ 8.43 ರಷ್ಟು ಕುಸಿದರೆ, ಇಂಡಸ್‌ಇಂಡ್ ಬ್ಯಾಂಕ್ ಷೇರು ಶೇ 3.99 ರಷ್ಟು ಇಳಿಕೆ ಕಂಡಿದೆ. ರಿಲಯನ್ಸ್, ಕೊಟಾಕ್ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಒಎನ್‌ಜಿಸಿ ಷೇರುಗಳ ಬೆಲೆ ಸಹ ಕುಸಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.