ಮುಂಬೈ: ಬಜೆಟ್ ದಿನವಾದ ಮಂಗಳವಾರ ಷೇರುಪೇಟೆಯು ಭಾರಿ ಏರಿಳಿತದ ನಡುವೆ ಅಂತಿಮವಾಗಿ ತುಸು ಇಳಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ಸುಮಾರು 1,200 ಅಂಶಗಳಷ್ಟು ಇಳಿಕೆ ಕಂಡಿದ್ದ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಬಳಿಕ ಚೇತರಿಕೆ ಕಂಡು ಅಂತಿಮವಾಗಿ 73.04 ಅಂಶಗಳ ಕುಸಿತದೊಂದಿಗೆ(ಶೇ.0.09) 80,429.04ರಲ್ಲಿ. ವಹಿವಾಟು ಅಂತ್ಯಗೊಳಿಸಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ಮಂಡಿಸುತ್ತಿದ್ದಾಗ ಸೆನ್ಸೆಕ್ಸ್ ಭಾರಿ ಏರಿಳಿತಕ್ಕೆ ಸಾಕ್ಷಿಯಾಗಿತ್ತು.
ಎಸ್‌ಟಿಟಿ, ಎಫ್ ಅಂಡ್ ಓ, ಎಲ್‌ಟಿಸಿಜಿ(ದೀರ್ಘಾವಧಿ ಬಂಡವಾಳ ಗಳಿಕೆ) ತೆರಿಗೆ ದರ ಹೆಚ್ಚಳದ ಘೋಷಣೆ ಮಾಡುತ್ತಿದ್ದಂತೆ 1,277.76 ಅಂಶಗಳಷ್ಟು(ಶೇ.1.58) ಕುಸಿದ ಸೂಚ್ಯಂಕವು 79,224.32 ಅಂಶಗಳಲ್ಲಿ ವಹಿವಾಟು ನಡೆಸುತ್ತಿತ್ತು. ಬಳಿಕ, ಕೆಲವು ಉತ್ಪನ್ನಗಳ ಮೇಲಿನ ತೆರಿಗೆ ಕಡಿತ ಮತ್ತು ಕಸ್ಟಮ್ಸ್ ಸುಂಕ ಕಡಿತ ನಿರ್ಧಾರಗಳ ಘೋಷಣೆಯಾದಾಗ ದಿನದ ಅತ್ಯಂತ ಕೆಳಮಟ್ಟದ ಕುಸಿತದಿಂದ ಸೂಚ್ಯಂಕ ಚೇತರಿಕೆ ಕಂಡಿತು.
ಎನ್‌ಎಸ್ಇ ನಿಫ್ಟಿ 30.20 ಅಂಶಗಳಷ್ಟು(ಶೇ.0.02) ಇಳಿಕೆ ಕಂಡು 24,479.05 ವಹಿವಾಟು ಮುಗಿಸಿತು. ಸುಮಾರು 435.05 ಅಂಶಗಳಷ್ಟು ಕುಸಿತ ಕಂಡಿದ್ದ ಎನ್‌ಎಸ್‌ಇ ಬಳಿಕ ಚೇತರಿಕೆ ದಾಖಲಿಸಿತು.
ಸೆನ್ಸೆಕ್ಸ್ ಷೇರುಗಳ ಪೈಕಿ ಟೈಟನ್ ಶೇಕಡ 6ಕ್ಕೂ ಅಧಿಕ ಮತ್ತು ಐಟಿಸಿ ಷೇರುಗಳು ಶೇಕಡ 5ಕ್ಕೂ ಅಧಿಕ ಲಾಭ ಕಂಡಿವೆ.
ಅದಾನಿ ಪೋರ್ಟ್ಸ್, ಎನ್‌ಟಿಪಿಸಿ, ಇನ್‌ಫೋಸಿಸ್, ಹಿಂದುಸ್ಥಾನ್ ಯುನಿಲಿವರ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಸನ್ ಫಾರ್ಮಾ ಷೇರುಗಳು ಅಧಿಕ ಗಳಿಕೆ ಕಂಡಿವೆ.
ಲಾರ್ಸನ್ ಅಂಡ್ ಟೌಬ್ರೊ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಅಧಿಕ ನಷ್ಟ ಅನುಭವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.