ಮುಂಬೈ: ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯ ಕಡಿತ ಮತ್ತು ವಿದೇಶಿ ಸಾಂಸ್ಥಿಕ ಬಂಡವಾಳ (ಎಫ್‌ಐಐ) ಒಳಹರಿವಿನ ಕಾರಣಗಳಿಂದಾಗಿ ದೇಶದ ಷೇರುಪೇಟೆಗಳಲ್ಲಿ ಬುಧವಾರ ಸಕಾರಾತ್ಮಕ ವಹಿವಾಟು ನಡೆಯಿತು.
ಐ.ಟಿ., ತೈಲ ಮತ್ತು ಅನಿಲ ಹಾಗೂ ಲೋಹ ವಲಯದ ಷೇರುಗಳ ಹೆಚ್ಚಿನ ಗಳಿಕೆಯಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶೇಕಡ 1ಕ್ಕೂ ಹೆಚ್ಚು ಏರಿಕೆ ಕಂಡಿತು. ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಬಿಎಸ್‌ಇನಲ್ಲಿ ಶೇ 2.47ರಷ್ಟು ಹೆಚ್ಚಾಗಿ ಪ್ರತಿ ಷೇರಿನ ಬೆಲೆ ₹ 2,501ಕ್ಕೆ ತಲುಪಿತು. ಇದರಿಂದಾಗಿ ರಿಲಯನ್ಸ್‌ನ ಮಾರುಕಟ್ಟೆ ಮೌಲ್ಯ ₹ 40,516 ಕೋಟಿ ಏರಿಕೆ ಕಂಡು ಒಟ್ಟಾರೆ ಮೌಲ್ಯವು ₹ 16.92 ಲಕ್ಷ ಕೋಟಿಗೆ ತಲುಪಿತು.
ಒಎನ್‌ಜಿಸಿ ಷೇರು ಮೌಲ್ಯ ಶೇ 4ರಷ್ಟು ಹೆಚ್ಚಾಗಿ ಪ್ರತಿ ಷೇರಿನ ಬೆಲೆ ₹ 132ಕ್ಕೆ ಏರಿಕೆ ಆಯಿತು. ವೇದಾಂತ ಷೇರು ಮೌಲ್ಯ ಶೇ 6.22ರಷ್ಟು ಹೆಚ್ಚಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 16,500ರ ಗಡಿ ದಾಟಿ ವಹಿವಾಟು ನಡೆಸಿತು.
ಜೂನ್‌ನಲ್ಲಿ 15,183 ಅಂಶಗಳಿಗೆ ಇಳಿಕೆ ಕಂಡಿದ್ದ ನಿಫ್ಟಿ ಶೇ 8ರಷ್ಟು ಚೇತರಿಕೆ ಕಂಡುಕೊಂಡಿದೆ. ಮಾರುಕಟ್ಟೆಗೆ ಪೂರಕವಾದ ಬೆಳವಣಿಗೆಗಳಿಂದಾಗಿ ಮುಂದಿನ ದಿನಗಳಲ್ಲಿಯೂ ಚೇತರಿಯು ಮುಂದುವರಿಯುವ ನಿರೀಕ್ಷೆ ಇದೆ. ಕಾರ್ಪೊರೇಟ್ ಗಳಿಕೆ ಹೆಚ್ಚಾಗಿರುವುದರಿಂದ ಅಮೆರಿಕದ ಮಾರುಕಟ್ಟೆ ಉತ್ತಮ ಚೇತರಿಕೆ ಕಂಡಿದೆ. ಇದರ ಜೊತೆಗೆ ವಿದೇಶಿ ಬಂಡವಾಳ ಒಳಹರಿವು ಆಗುತ್ತಿದ್ದು, ವಿದೇಶಿ ಹೂಡಿಕೆದಾರರು ಈ ತಿಂಗಳಿನಲ್ಲಿ ಐದು ದಿನ ಷೇರುಗಳನ್ನು ಖರೀದಿ ಮಾಡಿದ್ದಾರೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 1.17ರಷ್ಟು ಇಳಿಕೆ ಆಗಿ ಒಂದು ಬ್ಯಾರಲ್‌ಗೆ 106.1 ಡಾಲರ್‌ಗೆ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.