ADVERTISEMENT

Stock Market | ಸೆನ್ಸೆಕ್ಸ್ 738, ನಿಫ್ಟಿ 269 ಅಂಶ ಇಳಿಕೆ

ಪಿಟಿಐ
Published 19 ಜುಲೈ 2024, 13:00 IST
Last Updated 19 ಜುಲೈ 2024, 13:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಸತತ ನಾಲ್ಕು ದಿನಗಳ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ದೇಶದ ಷೇರುಪೇಟೆಗಳು ಶುಕ್ರವಾರ ಇಳಿಕೆ ಕಂಡಿವೆ. ಷೇರುದಾರರು ಲಾಭ ಮಾಡಿಕೊಳ್ಳಲು ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ, ಕರಡಿ ಕುಣಿತ ಜೋರಾಯಿತು.  

ಹೂಡಿಕೆದಾರರ ಸಂಪತ್ತು ಒಂದೇ ದಿನ ₹7.94 ಲಕ್ಷ ಕೋಟಿ ಕರಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಆರಂಭಿಕ ವಹಿವಾಟಿನಲ್ಲಿ 81,587 ಅಂಶಗಳಿಗೆ ತಲುಪಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿತ್ತು. ವಹಿವಾಟಿನ ಅಂತ್ಯದವರೆಗೂ ಈ ಏರಿಕೆ ಕಾಪಾಡಿಕೊಳ್ಳುವಲ್ಲಿ ವಿಫಲವಾಯಿತು. ಅಂತಿಮವಾಗಿ 738 ಅಂಶ ಇಳಿಕೆ ಕಂಡು (ಶೇ 0.91ರಷ್ಟು) 80,604 ಅಂಶಗಳಲ್ಲಿ ಸ್ಥಿರಗೊಂಡಿತು. 

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 269 ಅಂಶ ಇಳಿಕೆ ಕಂಡು (ಶೇ 1.09ರಷ್ಟು) 24,530 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ಸೆನ್ಸೆಕ್ಸ್‌ ಗುಚ್ಛದಲ್ಲಿನ ಟಾಟಾ ಸ್ಟೀಲ್‌ ಷೇರಿನ ಮೌಲ್ಯದಲ್ಲಿ ಶೇ 5ರಷ್ಟು ಹಾಗೂ ಜೆಎಸ್‌ಡಬ್ಲ್ಯು ಷೇರಿನ ಮೌಲ್ಯದಲ್ಲಿ ಶೇ 5ರಷ್ಟು ಇಳಿಕೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್‌, ಟಾಟಾ ಮೋಟರ್ಸ್‌, ಎನ್‌ಟಿಪಿಸಿ, ಅಲ್ಟ್ರಾಟೆಕ್‌ ಸಿಮೆಂಟ್‌, ಟೆಕ್‌ ಮಹೀಂದ್ರ, ಬಜಾಜ್‌ ಫಿನ್‌ಸರ್ವ್‌, ಪವರ್‌ ಗ್ರಿಡ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಇನ್ಫೊಸಿಸ್‌ ಷೇರಿನ ಮೌಲ್ಯದಲ್ಲಿ ಶೇ 2ರಷ್ಟು ಏರಿಕೆಯಾಗಿದೆ. ಐಟಿಸಿ, ಏಷ್ಯನ್‌ ಪೇಂಟ್ಸ್‌ ಮತ್ತು ಎಚ್‌ಸಿಎಲ್‌ ಟೆಕ್ನಾಲಜೀಸ್‌ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ. 

ಗುರುವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು, ₹5,483 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಷೇರುಪೇಟೆಯ ಅಂಕಿಅಂಶ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.