ಮುಂಬೈ: ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿರುವ ವರದಿಯ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳ ಮೌಲ್ಯ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ.
ಅದಾನಿ ಎನರ್ಜಿ ಸೊಲೂಷನ್ಸ್ ಹಾಗೂ ಅದಾನಿ ಎಂಟರ್‌ಪ್ರೈಸಸ್ ಶೇ 20ರಷ್ಟು ಕುಸಿತ ಕಂಡಿವೆ. ಅದಾನಿ ಗ್ರೀನ್ ಎನರ್ಜಿ ಶೇ 19.17, ಅದಾನಿ ಟೋಟಲ್ ಗ್ಯಾಸ್ ಶೇ 18.14, ಅದಾನಿ ಪವರ್ 17.79 ಮತ್ತು ಅದಾನಿ ಪೋರ್ಟ್ಸ್ ಶೇ 15ರಷ್ಟು ಇಳಿಕೆ ಕಂಡಿವೆ.
ಅದೇ ಹೊತ್ತಿಗೆ ಅಂಬುಜಾ ಸಿಮೆಂಟ್ಸ್ ಶೇ 14.99, ಎಸಿಸಿ ಶೇ 14.54, ಎನ್‌ಡಿಟಿವಿ ಶೇ 14.37 ಮತ್ತು ಅದಾನಿ ವಿಲ್ಮರ್ ಶೇ 10ರಷ್ಟು ಕುಸಿತ ಕಂಡಿವೆ.
ಬಿಎಸ್‌ಇ ಸೆನ್ಸೆಕ್ಸ್ 547.76 ಅಂಶ ಇಳಿಕೆ ಕಂಡು 77,030.62 ಅಂಶಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 219.10 ಅಂಶ ಇಳಿಕೆಯಾಗಿ 23,306.45 ಅಂಶಕ್ಕೆ ತಲುಪಿದೆ.
₹2,237 ಕೋಟಿ ಲಂಚದ ಆರೋಪದಲ್ಲಿ 62 ವರ್ಷದ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ವಿನೀತ್ ಎಸ್. ಜೈನ್ ವಿರುದ್ಧ ಐದು ಅಂಶಗಳ ಕ್ರಿಮಿನಲ್ ಆರೋಪಪಟ್ಟಿಯನ್ನು ನ್ಯೂಯಾರ್ಕ್‌ನ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ಅಮೆರಿಕದ ಪ್ರಾಸಿಕ್ಯೂಟರ್ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.