ADVERTISEMENT

ರೆಪೊ ದರ ಏರಿಕೆ ಪರಿಣಾಮ: ಹೂಡಿಕೆದಾರರಿಗೆ ₹ 6.27 ಲಕ್ಷ ಕೋಟಿ ನಷ್ಟ

ಎರಡು ತಿಂಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

ಪಿಟಿಐ
Published 4 ಮೇ 2022, 13:43 IST
Last Updated 4 ಮೇ 2022, 13:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಬಡ್ಡಿ ದರ ಹೆಚ್ಚಿಸಿರುವುದು ದೇಶದ ಷೇರುಪೇಟೆಗಳಲ್ಲಿ ಕರಡಿ ಕುಣಿತಕ್ಕೆ ಎಡೆಮಾಡಿಕೊಟ್ಟಿತು.

ಅಮೆರಿಕದ ಫೆಡರಲ್‌ ರಿಸರ್ವ್‌ ಸಭೆಗೂ ಮೊದಲೇ ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ. ಜಾಗತಿಕ ಬಿಕ್ಕಟ್ಟು ಮತ್ತು ಉತ್ಪನ್ನಗಳ ಬೆಲೆ ಏರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಫೆಡರಲ್‌ ರಿಸರ್ವ್ ಸಹ ಬಡ್ಡಿದರ ಹೆಚ್ಚಿಸುವ ನಿರೀಕ್ಷೆ ಇದೆ.

ಮುಂಬೈ ಷೇರುಪೇಟೆಯು (ಬಿಎಸ್‌ಇ ಸೆನ್ಸೆಕ್ಸ್‌) ಹೆಚ್ಚಿನ ಮಾರಾಟದ ಒತ್ತಡಕ್ಕೆ ಒಳಗಾಗಿ 1,307 ಅಂಶ ಕುಸಿತ ಕಂಡಿತು. ಎರಡು ತಿಂಗಳ ಕನಿಷ್ಠ ಮಟ್ಟವಾದ 55,669 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 391 ಅಂಶ ಕುಸಿತ ಕಂಡು 16,678 ಅಂಶಗಳಿಗೆ ತಲುಪಿತು.

ಬಜಾಜ್‌ ಫೈನಾನ್ಸ್‌ ಷೇರು ಮೌಲ್ಯ ಶೇ 4.29ರಷ್ಟು ಗರಿಷ್ಠ ನಷ್ಟ ಕಂಡಿತು. ಬಿಎಸ್‌ಇ ಮಿಡ್‌ಕ್ಯಾಪ್‌ ಇಂಡೆಕ್ಸ್‌ ಶೇ 2.63ರಷ್ಟು ಮತ್ತು ಸ್ಮಾಲ್‌ಕ್ಯಾಪ್‌ ಇಂಡೆಕ್ಸ್ ಶೇ 2.11ರಷ್ಟು ಇಳಿಕೆ ಕಂಡವು. ಬಿಎಸ್ಇನಲ್ಲಿ ಪವರ್‌ಗ್ರಿಡ್‌, ಎನ್‌ಟಿಪಿಸಿ ಮತ್ತು ಕೋಟಕ್‌ ಮಹೀಂದ್ರ ಬ್ಯಾಂಕ್‌ ಷೇರುಗಳು ಮಾತ್ರವೇ ಗಳಿಕೆ ಕಂಡುಕೊಂಡವು.

ಅಮೆರಿಕದ ಫೆಡರಲ್‌ ರಿಸರ್ವ್‌ ಸಭೆಗೂ ಮುನ್ನ ಬಡ್ಡಿದರ ಹೆಚ್ಚಳ ಮಾಡುವ ಮೂಲಕ ಭಾರತದ ಮಾರುಕಟ್ಟೆಗಳಲ್ಲಿ ಆರ್‌ಬಿಐ ಕಂಪನ ಸೃಷ್ಟಿಸಿತು. ಇದರಿಂದಾಗಿ ಸೂಚ್ಯಂಕಗಳು ಹಠಾತ್‌ ಇಳಿಕೆ ಕಂಡವು ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಈಕ್ವಿಟಿ ರಿಸರ್ಚ್‌ನ ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 3.12ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 108.3 ಡಾಲರ್‌ಗಳಿಗೆ ತಲುಪಿತು.

₹ 6.27 ಲಕ್ಷ ಕೋಟಿ ನಷ್ಟ: ಮುಂಬೈ ಷೇರುಪೇಟೆಯಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ಷೇರುಪೇಟೆಯಲ್ಲಿ ನೋಂದಾಯಿತ ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿ ₹ 6.27 ಲಕ್ಷ ಕೋಟಿಯಷ್ಟು ನಷ್ಟ ಅಗಿದೆ. ಇದರಿಂದ ಷೇರುಪೇಟೆಯ ಒಟ್ಟಾರೆ ಸಂಪತ್ತು ಮೌಲ್ಯ ₹ 259.60 ಲಕ್ಷ ಕೋಟಿಗೆ ಇಳಿಕೆ ಕಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.