ADVERTISEMENT

ಷೇರುಪೇಟೆ ಕುಸಿತ: ಕಡಿಮೆಯಾಗ್ತಿಲ್ಲ ಕೋವಿಡ್-19ರ ಭೀತಿ

ಪಿಟಿಐ
Published 1 ಏಪ್ರಿಲ್ 2020, 11:21 IST
Last Updated 1 ಏಪ್ರಿಲ್ 2020, 11:21 IST
   
""

ಮುಂಬೈ: ವಿಶ್ವವನ್ನು ಆವರಿಸಿಕೊಂಡಿರುವ ಕೋವಿಡ್-19 ಭೀತಿಗೆ ಷೇರುಪೇಟೆಯು ಹೊರತಾಗಿಲ್ಲ. ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡಬಹುದು ಎಂಬ ಆತಂಕ ಇರುವ ಕಾರಣ, ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಷೇರುಪೇಟೆ ಸತತ ಕುಸಿತದತ್ತ ಸಾಗಿದೆ.

ಮುಂಬೈ ಪೇಟೆಯ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್)ಬುಧವಾರ 1,203 (ಶೇ 4.08) ಅಂಶಗಳ ಕುಸಿತ ದಾಖಲಿಸಿ, 28,265.31 ಅಂಶಗಳೊಂದಿಗೆ ದಿನದ ವಹಿವಾಟು ಮುಗಿಸಿತು. ರಾಷ್ಟ್ರೀಯ ಸಂವೇದಿಕ ಸೂಚ್ಯಂಕ (ನಿಫ್ಟಿ) 343.95 ಅಂಶಗಳ (ಶೇ 4) ಕುಸಿತ ದಾಖಲಿಸಿ, 8253.80 ಅಂಶಗಳೊಂದಿಗೆ ದಿನದ ವಹಿವಾಟು ಮುಗಿಸಿತು.

ಮುಂಬೈ ಪೇಟೆಯಲ್ಲಿ ಟೆಕ್‌ ಮಹೀಂದ್ರ ಅತಿ ಹೆಚ್ಚು (ಶೇ 9.21)ಕುಸಿತ ಕಂಡ ಷೇರು. ಒಂದೇ ದಿನ 52.05 ರೂಪಾಯಿ ಮೌಲ್ಯ ಕಳೆದುಕೊಂಡ ಟೆಕ್ ಮಹೀಂದ್ರ ₹ 512.90 ಮೊತ್ತದಲ್ಲಿ ದಿನದವಹಿವಾಟು ಮುಗಿಸಿತು. ಉಳಿದಂತೆ ಕೋಟಕ್ ಬ್ಯಾಂಕ್ (₹ 1182.10), ಆಕ್ಸಿಸ್ ಬ್ಯಾಂಕ್ (₹ 358.45), ಟಿಸಿಎಸ್ (₹ 1709.95) ಮತ್ತು ಹಿಂದೂಸ್ತಾನ್ ಯೂನಿಲಿವರ್ (₹ 2179.25) ಷೇರುಗಳು ಗಣನೀಯ ಪ್ರಮಾಣದಲ್ಲಿಮೌಲ್ಯ ಕಳೆದುಕೊಂಡವು.

ADVERTISEMENT

ಇನ್ನೊಂದೆಡೆ ಹಿರೊ ಮೊಟೊಕಾರ್ಪ್ (₹ 1629.25), ಬಜಾಜ್ ಆಟೊ (₹ 2045.65), ಬಜಾಜ್ ಫೈನಾನ್ಸ್ (₹ 2225) ಮತ್ತು ಟೈಟಾನ್ ಕಂಪನಿಯ ಷೇರುಗಳು (₹ 936.75) ಮುನ್ನಡೆ ದಾಖಲಿಸಿದವು.

ಮಾರುಕಟ್ಟೆ ಕುಸಿತಕ್ಕೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಕಂಡು ಬರುತ್ತಿರುವ ಹಿಂಜರಿತದ ವಾತಾವರಣವೇ ಮುಖ್ಯ ಕಾರಣ ಎನ್ನುವುದು ಹಲವು ಸ್ಟಾಕ್ ಬ್ರೋಕೇಜ್ ಕಂಪನಿಗಳ ಅಭಿಪ್ರಾಯವಾಗಿದೆ. ಕೆಲ ದೇಶಗಳಲ್ಲಿ ಲಾಕ್‌ಡೌನ್ ಅವಧಿ ವಿಸ್ತರಣೆಯಾಗಿದೆ. ಭಾರತದಲ್ಲಿ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿವೆ. ಹೀಗಾಗಿ ಮುಂದೇನು ಎಂಬ ಆತಂಕ ಎಲ್ಲೆಡೆ ಆವರಿಸಿದೆ ಎನ್ನುತ್ತಾರೆ ಅವರು.

ಹಾಂಕಾಂಗ್, ಸಿಯೊಲ್, ಟೊಕಿಯೊ ಮತ್ತು ಶಾಂಘೈ ಷೇರುಪೇಟೆಗಳು ಇಂದು ಕುಸಿತ ಕಂಡವು. ಯುರೋಪ್‌ ದೇಶಗಳಲ್ಲಿಯೂ ಷೇರು ಪೇಟೆ ಈಚಿನ ದಿನಗಳಲ್ಲಿ ಸತತ ಕುಸಿತ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.