ಮುಂಬೈ: ಜಾಗತಿಕವಾಗಿ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿರುವುದು ದೇಶದ ಷೇರುಪೇಟೆಯ ಮೇಲೂ ಪರಿಣಾಮ ಬೀರಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 800 ಅಂಶಗಳ ಏರಿಕೆ ಕಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಇನ್ಫೊಸಿಸ್ ಷೇರುಗಳು ಮಂಗಳವಾರ ಗಳಿಕೆ ದಾಖಲಿಸಿವೆ. ಮಧ್ಯಾಹ್ನ 2:30ರ ವರೆಗೂ ಸೆನ್ಸೆಕ್ಸ್ 801.81 ಅಂಶ ಏರಿಕೆಯಾಗಿ 49,366.08 ಅಂಶಗಳನ್ನು ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 233.4 ಅಂಶ ಹೆಚ್ಚಳದೊಂದಿಗೆ 14,514.70 ಅಂಶಗಳಲ್ಲಿ ವಹಿವಾಟು ನಡೆದಿದೆ.
ಬಜಾಜ್ ಫೈನಾನ್ಸ್ ಷೇರು ಶೇ 5.5ರಷ್ಟು ಜಿಗಿದಿದೆ. ರಿಲಯನ್ಸ್, ಎಸ್‌ಬಿಐ, ಒಎನ್‌ಜಿಸಿ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಹಾಗೂ ಆಕ್ಸಿಸ್ ಬ್ಯಾಂಕ್ ಷೇರುಗಳು ಶೇ 1ರಿಂದ ಶೇ 3ರಷ್ಟು ಏರಿಕೆಯಾಗಿವೆ. ಆದರೆ, ಐಟಿಸಿ ಷೇರು ಬೆಲೆ ಕುಸಿದಿದೆ.
ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 470.40 ಅಂಶ ಕಡಿಮೆಯಾದರೆ, ನಿಫ್ಟಿ 152.40 ಅಂಶಗಳು ಇಳಿಕೆಯಾಗಿತ್ತು. ವಿದೇಶಿ ಬಂಡವಾಳ ಹೂಡಿಕೆದಾರರು ಸೋಮವಾರ ₹650.60 ಕೋಟಿ ಮೌಲ್ಯದ ಷೇರು ಖರೀದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.