ADVERTISEMENT

ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಸೆನ್ಸೆಕ್ಸ್‌ 992 ಅಂಶ ಏರಿಕೆ

ಪಿಟಿಐ
Published 25 ನವೆಂಬರ್ 2024, 14:34 IST
Last Updated 25 ನವೆಂಬರ್ 2024, 14:34 IST
ಸೆನ್ಸೆಕ್ಸ್‌
ಸೆನ್ಸೆಕ್ಸ್‌   

ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ದಿಗ್ವಿಜಯ ಸಾಧಿಸಿದೆ. ಇದರಿಂದ ಸೋಮವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಶೇ 1ಕ್ಕೂ ಹೆಚ್ಚು ಏರಿಕೆಯಾಗಿವೆ.

ಇಂಧನ, ಬ್ಯಾಂಕಿಂಗ್‌ ಷೇರುಗಳ ಖರೀದಿಯ ಹೆಚ್ಚಳವು ಸಹ ಷೇರು ಸೂಚ್ಯಂಕಗಳ ಏರಿಕೆಗೆ ಸಹಕಾರಿಯಾದವು. 

ಕಳೆದ ಎರಡು ದಿನದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳ ಏರಿಕೆಯಿಂದ ಹೂಡಿಕೆದಾರರ ಸಂಪತ್ತು ₹14 ಲಕ್ಷ ಕೋಟಿ ವೃದ್ಧಿಸಿದೆ. ಬಿಎಸ್‌ಇ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ ₹439 ಲಕ್ಷ ಕೋಟಿ (5.22 ಟ್ರಿಲಿಯನ್‌ ಡಾಲರ್‌) ಆಗಿದೆ.

ADVERTISEMENT

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 992 ಅಂಶ ಏರಿಕೆಯಾಗಿ, 80,109ಕ್ಕೆ ಅಂತ್ಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 314 ಅಂಶ ಹೆಚ್ಚಳವಾಗಿ 24,221ಕ್ಕೆ ಸ್ಥಿರಗೊಂಡಿತು. 

ಲಾರ್ಸೆನ್‌ ಆ್ಯಂಡ್‌ ಟೊಬ್ರೊ, ಎಸ್‌ಬಿಐ, ರಿಲಯನ್ಸ್‌ ಇಂಡಸ್ಟ್ರೀಸ್‌, ಪವರ್ ಗ್ರಿಡ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಟಿಸಿಎಸ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌ ಮತ್ತು ಎಕ್ಸಿಸ್‌ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಜೆಎಸ್‌ಡಬ್ಲ್ಯು ಸ್ಟೀಲ್‌, ಟೆಕ್‌ ಮಹೀಂದ್ರ, ಇನ್ಫೊಸಿಸ್‌, ಏಷ್ಯನ್‌ ಪೇಂಟ್ಸ್‌ ಮತ್ತು ಎಚ್‌ಸಿಎಲ್‌ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಅದಾನಿ ಗ್ರೀನ್‌ ಎನರ್ಜಿ ಷೇರಿನ ಮೌಲ್ಯ ಇಳಿಕೆ: ಅದಾನಿ ಸಮೂಹದ ಕಂಪನಿಗಳ ಪೈಕಿ 5 ಕಂಪನಿಗಳ ಷೇರಿನ ಮೌಲ್ಯ ಸೋಮವಾರ ಇಳಿಕೆಯಾಗಿದೆ. ಅದಾನಿ ಗ್ರೀನ್‌ ಎನರ್ಜಿಯ ಷೇರಿನ ಮೌಲ್ಯ ಶೇ 8ರಷ್ಟು ಕಡಿಮೆಯಾಗಿದೆ.

ಅದಾನಿ ಎನರ್ಜಿ ಸಲ್ಯೂಷನ್ಸ್‌, ಅದಾನಿ ಪವರ್‌, ಎನ್‌ಡಿಟಿವಿ, ಅದಾನಿ ಟೋಟಲ್‌ ಗ್ಯಾಸ್‌ ಷೇರಿನ ಮೌಲ್ಯ ಇಳಿದಿದೆ. ಅದಾನಿ ಪೋರ್ಟ್ಸ್‌, ಎಸಿಸಿ, ಅದಾನಿ ಎಂಟರ್‌ಪ್ರೈಸಸ್‌, ಅದಾನಿ ವಿಲ್ಮರ್‌, ಅಂಬುಜಾ ಸಿಮೆಂಟ್ಸ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.