ADVERTISEMENT

ಸೆನ್ಸೆಕ್ಸ್‌ 322, ನಿಫ್ಟಿ 103 ಅಂಶ ಏರಿಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 13:21 IST
Last Updated 12 ಸೆಪ್ಟೆಂಬರ್ 2022, 13:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಜಾಗತಿಕ ಮಟ್ಟದಲ್ಲಿ ಷೇರುಪೇಟೆಗಳ ಸಕಾರಾತ್ಮಕ ಚಲನೆಯ ಜೊತೆಗೆ ದೇಶದಲ್ಲಿ ಬ್ಯಾಂಕಿಂಗ್‌, ಐ.ಟಿ ಮತ್ತು ಇಂಧನ ವಲಯದ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡವು. ಇದರಿಂದಾಗಿ ಸೋಮವಾರದ ವಹಿವಾಟಿನಲ್ಲಿ ಸೂಚ್ಯಂಕಗಳು ಏರಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 322 ಅಂಶ ಹೆಚ್ಚಾಗಿ 60,115 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 103 ಅಂಶ ಹೆಚ್ಚಾಗಿ 17,936 ಅಂಶಗಳಿಗೆ ಏರಿಕೆ ಕಂಡಿತು. ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,086 ಅಂಶ ಮತ್ತು ನಿಫ್ಟಿ 312 ಅಂಶ ಏರಿಕೆ ಕಂಡಿತು.

‘ಭಾರತದ ಆರ್ಥಿಕತೆಯು ಉತ್ತಮ ಚೇತರಿಕೆ ಕಂಡುಕೊಳ್ಳುತ್ತಿದೆ ಎನ್ನುವ ಅಂಶವು ಷೇರುಪೇಟೆಗಳಲ್ಲಿ ಸೂಚ್ಯಂಕಗಳ ಓಟಕ್ಕೆ ಪ್ರಮುಖ ಕಾರಣ ಆಗಿದೆ. ಬ್ಯಾಂಕ್‌ಗಳ ಸಾಲ ನೀಡಿಕೆಯು ಆಗಸ್ಟ್‌ನಲ್ಲಿ ಶೇಕಡ 15.5ರಷ್ಟು ಬೆಳವಣಿಗೆ ಕಂಡಿದೆ ಎಂದು ಆರ್‌ಬಿಐನ ವರದಿ ಹೇಳಿದೆ. ಈ ಅಂಶವು ಆರ್ಥಿಕತೆಯು ಚೇತರಿಸಿಕೊಳ್ಳುತ್ತಿರುವುದನ್ನು ಸೂಚಿಸುತ್ತಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ. ಬ್ಯಾಂಕಿಂಗ್‌ ವಿಭಾಗದಲ್ಲಿ ಬ್ಯಾಂಕ್‌ ನಿಫ್ಟಿ ಶೇ 11ರಷ್ಟು ಗಳಿಕೆ ಕಂಡಿದೆ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಜಾಗತಿಕ ಮಟ್ಟದಲ್ಲಿ ಯುರೋಪ್‌ ಮತ್ತು ಏಷ್ಯಾದ ಷೇರುಪೇಟೆಗಳ ಸೂಚ್ಯಂಕಗಳು ಏರಿಕೆ ಕಂಡವು. ಏಷ್ಯಾದಲ್ಲಿ ಟೋಕಿಯೊದ ನಿಕೇಯ್‌ ಶೇ 1.2ರಷ್ಟು ಗಳಿಕೆ ಕಂಡಿತು. ಹಾಂಕಾಂಗ್‌ ಮತ್ತು ಸೋಲ್‌ ಷೇರುಪೇಟೆಗಳಿಗೆ ಇಂದು ರಜೆ.

ಬ್ರೆಂಟ್‌ ಕಚ್ಚಾ ತೈಲ ದರ 28 ಸೆಂಟ್ಸ್‌ನಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 93.12 ಡಾಲರ್‌ಗೆ ತಲುಪಿತು.

ಮುಖ್ಯಾಂಶಗಳು

ಬಿಎಸ್‌ಇ ರಿಯಾಲ್ಟ್‌ ಶೇ 2.23ರಷ್ಟು ಗಳಿಕೆ

ಟೈಟಾನ್‌ ಷೇರು ಮೌಲ್ಯ ಶೇ 2.39ರಷ್ಟು ಗರಿಷ್ಠ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.