ADVERTISEMENT

ಷೇರುಪೇಟೆಯಲ್ಲಿ ಖರೀದಿ ಭರಾಟೆ: ಸೆನ್ಸೆಕ್ಸ್ 2226 ಅಂಶ ಏರಿಕೆ, ಫಾರ್ಮಾಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 9:09 IST
Last Updated 7 ಏಪ್ರಿಲ್ 2020, 9:09 IST
   

ಮುಂಬೈ: ಯೂರೋಪ್‌ ಮತ್ತು ಏಷ್ಯಾದ ಇತರ ದೇಶಗಳ ಷೇರುಪೇಟೆಗಳಲ್ಲಿಕಂಡು ಬಂದ ಮುನ್ನಡೆ ಭಾರತೀಯ ಷೇರುಪೇಟೆಯಲ್ಲಿಯೂ ಪ್ರತಿಫಲಿಸಿತು. ದಿನವ ವಹಿವಾಟಿನ ಒಂದು ಹಂತದಲ್ಲಿಮುಂಬೈ ಪೇಟೆಯು (ಸೆನ್ಸೆಕ್ಸ್) ಶೇ 7.39 ಅಥವಾ 2037.72 ಅಂಶಗಳ ಮುನ್ನಡೆ ದಾಖಲಿಸಿತ್ತು. ರಾಷ್ಟ್ರೀಯ ಸಂವೇದಿ ಸೂಚ್ಯಂಕ (ನಿಫ್ಟಿ) 586.6 ಅಂಶಗಳ ಮುನ್ನಡೆ ದಾಖಲಿಸಿತು.

ಬ್ಯಾಂಕಿಂಗ್, ಐಟಿ, ಫಾರ್ಮಾ ಮತ್ತು ಆಟೊಮೊಬೈಲ್ ವಲಯಗಳಲ್ಲಿ ವಹಿವಾಟು ನಡೆಸುವ ಕಂಪನಿಗಳ ಷೇರುಗಳು ಇಡೀ ದಿನ ಬೇಡಿಕೆಯಲ್ಲಿದ್ದವು. ಕಳೆದ ದಿನದ ಅಂತ್ಯಕ್ಕೆ ಹೋಲಿಸಿದರೆ, ಮೌಲ್ಯವೂ ಹೆಚ್ಚಾಗಿತ್ತು.

ಮಧ್ಯಾಹ್ನ 2.30ಕ್ಕೆ ಮುಂಬೈ ಪೇಟೆಯು 29,817 ಅಂಶಗಳನ್ನು ದಾಖಲಿಸಿತ್ತು. ಹಿಂದಿನ ದಿನಕ್ಕೆ ಹೋಲಿಸಿದರೆ ಇದು 2,226 ಅಂಶಗಳ ಪ್ರಗತಿ. ನಿಫ್ಟಿ 8,719 ಅಂಶಗಳನ್ನು ದಾಖಲಿಸಿತ್ತು. ಹಿಂದಿನ ದಿನಕ್ಕೆ ಹೋಲಿಸಿದರೆ ಇದು 636 ಅಂಶಗಳ ಪ್ರಗತಿ.

ADVERTISEMENT

ಇಂದಿನ ವಹಿವಾಟಿನಲ್ಲಿ ಫಾರ್ಮಾ ವಲಯದ ಷೇರುಗಳು ಹೆಚ್ಚು ಮೌಲ್ಯ ಗಳಿಸಿದವು. 24 ಬಗೆಯ ಔಷಧಿಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದ್ದು ಇದರಕ್ಕೆ ಕಾರಣ. ಎನ್‌ಎಸ್‌ಇ ನಿಫ್ಟಿ ಬ್ಯಾಂಕ್ ಇಂಡೆಕ್ಸ್ ಮತ್ತು ನಿಫ್ಟಿ ಪ್ರೈವೇಟ್ ಬ್ಯಾಂಕ್‌ ಸೂಚ್ಯಂಕಗಳೂ ಶೇ 8ರ ಮುನ್ನಡೆ ದಾಖಲಿಸಿದವು.

ಇಟಲಿ ಮತ್ತು ಫ್ರಾನ್ಸ್ ಸೇರಿದಂತೆ ಐರೋಪ್ಯ ದೇಶಗಳಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದು ವಿಶ್ವದ ಹಲವು ದೇಶಗಳ ಷೆರುಪೇಟೆಗಳಲ್ಲಿ ಭರವಸೆ ಮೂಡಿಸಿದೆ. ಹ್ಯಾಂಗ್‌ಸೆಂಗ್ (ಹಾಂಕಾಂಗ್), ನಿಕ್ಕಿ (ಟೊಕಿಯೊ), ಸ್ಟ್ರೇಟ್ ಟೈಮ್ಸ್ (ಸಿಂಗಪುರ), ತೈವಾನ್ ಮತ್ತು ಎಸ್‌ಇಟಿ (ಥಾಯ್ಲೆಂಡ್) ಷೇರುಪೇಟೆಗಳೂ ಶೇ 2ರಿಂದ 6ರ ಪ್ರಗತಿ ಸಾಧಿಸಿದ್ದವು.

ಐರೋಪ್ಯ ಮಾರುಕಟ್ಟೆಗಳಾದ ಸಿಎಸಿ (ಫ್ರಾನ್ಸ್), ಎಫ್‌ಟಿಎಸ್‌ಇ (ಲಂಡನ್) ಮತ್ತು ಡಿಎಎಕ್ಸ್ (ಜರ್ಮನಿ) ಷೇರುಪೇಟೆಗಳು ಶೇ 2ರಿಂದ 4ರಷ್ಟು ಗಳಿಕೆಯೊಂದಿಗೆ ದಿನದ ವಹಿವಾಟು ಆರಂಭಿಸಿದವು.

ನಿಫ್ಟಿಯ 50 ಕಂಪನಿಗಳ ಪೈಕಿ 48 ಕಂಪನಿಗಳು ಗಳಿಕೆ ದಾಖಲಿಸಿದವು. ಈಚಿನ ದಿನಗಳಲ್ಲಿ ಸತತ ಕುಸಿತ ಕಂಡಿದ್ದ ಇಂಡಸ್‌ ಇಂಡ್ ಬ್ಯಾಂಕ್ ಒಂದೇ ದಿನ ಶೇ 16ರ ಮುನ್ನಡೆ ಗಳಿಸಿ, ಟಾಪ್ ಗೇನರ್ ಎನಿಸಿಕೊಂಡಿತು.

ಆಕ್ಸಿಸ್ ಬ್ಯಾಂಕ್, ಡಾ.ರೆಡ್ಡೀಸ್, ಸಿಪ್ಲಾ, ಮಹೀಂದ್ರ ಅಂಡ್ ಮಹೀಂದ್ರ ಕಂಪನಿಗಳ ಷೇರುಮೌಲ್ಯ ಶೇ 10ರಿಂದ 14ರಷ್ಟು ಹೆಚ್ಚಾಯಿತು. ಬಜಾಜ್ ಫೈನಾನ್ಷಿಯಲ್ ಸರ್ವೀಸ್ ಮತ್ತು ಬಜಾಜ್ ಫೈನಾನ್ಸ್‌ ಕಂಪನಿಗಳು ಮಾತ್ರ ಇಡೀ ದಿನ ನಷ್ಟದಲ್ಲಿಯೇ ವಹಿವಾಟಾದವು. ಸರಾಸರಿ ಶೇ 2ರಿಂದ ಶೇ 4ರಷ್ಟು ಮೌಲ್ಯ ಕಳೆದುಕೊಂಡವು. ಫಾರ್ಮಾ ವಲಯದಲ್ಲಿ ಡಾ.ರೆಡ್ಡೀಸ್, ಸಿಪ್ಲಾ, ಅರಬಿಂದೋ ಫಾರ್ಮಾ ಮತ್ತು ಲ್ಯುಪಿನ್ ಶೇ 9-10ರಷ್ಟು ಗಳಿಕೆ ದಾಖಲಿಸಿತು.

ಮಹಾವೀರ ಜಯಂತಿ ಪ್ರಯುಕ್ತ ನಿನ್ನೆ (ಸೋಮವಾರ) ಷೇರು ಮಾರುಕಟ್ಟೆ ವಹಿವಾಟು ನಡೆಯಲಿಲ್ಲ. ಶುಕ್ರವಾರ (ಏಪ್ರಿಲ್ 10) ಗುಡ್‌ಫ್ರೈಡೆ ಪ್ರಯುಕ್ತ ಮಾರುಕಟ್ಟೆಗೆ ರಜೆ ಇದೆ. ಹೀಗಾಗಿ ಈ ವಾರ ಕೇವಲ ಮೂರು ದಿನ ವಹಿವಾಟು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.