ಮುಂಬೈ:ಇನ್ಫೊಸಿಸ್ ಸಿಇಒ ಮತ್ತು ಸಿಎಫ್‌ಒ ವಿರುದ್ಧ ಕೇಳಿಬಂದಿರುವ ಆರೋಪದಿಂದ ಕಂಪನಿಯ ಷೇರುಗಳು ಭಾರಿ ಹಾನಿ ಅನುಭವಿಸಿತು. ಇದರಿಂದ ಷೇರುಪೇಟೆಯಲ್ಲಿ ಆರು ದಿನಗಳ ಸೂಚ್ಯಂಕದ ಓಟಕ್ಕೆ ಮಂಗಳವಾರ ತಡೆ ಬಿದ್ದಿತು.
ಅಲ್ಪಾವಧಿಯಲ್ಲಿ ವರಮಾನ ಮತ್ತು ಲಾಭ ಹೆಚ್ಚಿಸಿಕೊಳ್ಳಲು ಕಂಪನಿಯ ಉನ್ನತಾಧಿಕಾರಿಗಳು ನೀತಿ ಬಾಹಿರ ವಿಧಾನ ಅನುಸರಿಸಿದ್ದಾರೆ ಎಂದು ಇನ್ಫೊಸಿಸ್‌ನ ಉದ್ಯೋಗಿಗಳು ಎಂದು ಹೇಳಿಕೊಂಡಿರುವ ಅನಾಮ ಧೇಯ ಗುಂಪೊಂದು ಸೋಮವಾರ ಆರೋಪ ಮಾಡಿತ್ತು.
ಇದರಿಂದಾಗಿ ಮಂಗಳವಾರದ ವಹಿವಾಟಿನಲ್ಲಿ ಕಂಪನಿ ಷೇರುಗಳು ಶೇ 16.21ರಷ್ಟು ಭಾರಿ ಕುಸಿತ ಕಂಡಿತು. ಇದು ಆರು ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣದ ಇಳಿಕೆಯಾಗಿದೆ. ಪ್ರತಿ ಷೇರಿನ ಬೆಲೆ ₹ 643.30ಕ್ಕೆ ಇಳಿದಿದ್ದರಿಂದ, ಮಾರುಕಟ್ಟೆ ಮೌಲ್ಯದಲ್ಲಿ ₹ 53,451 ಕೋಟಿ ಕರಗಿತು.
ಟಾಟಾ ಮೊಟರ್ಸ್, ಭಾರ್ತಿ ಏರ್‌ಟೆಲ್, ಎಚ್‌ಸಿಎಲ್ ಟೆಕ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಶೇ 3.51ರವರೆಗೂ ಇಳಿಕೆ ಕಂಡಿವೆ.
ಷೇರುಪೇಟೆ ವಹಿವಾಟು: ಮಾರಾಟದ ಒತ್ತಡದಿಂದ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 334 ಅಂಶ ಇಳಿಕೆಯಾಗಿ 38,963 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 73 ಅಂಶ ಇಳಿಕೆ ಕಂಡು 11,588 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
‘ಕೆಲವು ಪ್ರಮುಖ ಕಂಪನಿಗಳ ಷೇರುಗಳಲ್ಲಿ ಕಂಡುಬಂದ ಲಾಭ ಗಳಿಕೆಯ ಒತ್ತಡ ಹಾಗೂ ಇನ್ಫೊಸಿಸ್ ಸಿಇಒ ಮೇಲಿನ ಆರೋಪದ ನಕಾರಾತ್ಮಕ ಪ್ರಭಾವದಿಂದಾಗಿ ಷೇರುಪೇಟೆಯಲ್ಲಿ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು. ಬ್ಯಾಂಕ್ ಷೇರುಗಳು ಗಳಿಕೆ ಕಂಡುಕೊಂಡರೆ, ಐ.ಟಿ ಷೇರುಗಳು ನಷ್ಟ ಕಂಡಿವೆ’ ಎಂದು ಆಶಿಕಾ ಸ್ಟಾಕ್ ಬ್ರೋಕಿಂಗ್ ಸಂಸ್ಥೆಯ ಮುಖ್ಯಸ್ಥ ಪಾರಸ್ ಬೋತ್ರಾ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.