ಮುಂಬೈ (ಪಿಟಿಐ): ಎರಡು ದಿನಗಳ ವಹಿವಾಟಿನಲ್ಲಿ ಮಾರಾಟ ಒತ್ತಡಕ್ಕೆ ಒಳಗಾಗಿ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಶುಕ್ರವಾರದ ವಹಿವಾಟಿನಲ್ಲಿ ಗಮನಾರ್ಹ ಚೇತರಿಕೆ ದಾಖಲಿಸಿತು.
ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ ಕಂಡು ಬಂದಿದ್ದರಿಂದ ಸಂವೇದಿ ಸೂಚ್ಯಂಕವು 391 ಅಂಶಗಳ ಏರಿಕೆ ದಾಖಲಿಸಿ, 37,556 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) 116 ಅಂಶಗಳ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಮಟ್ಟವಾದ 11,360 ಅಂಶಗಳಿಗೆ ತಲುಪಿತು.
ಇತ್ತೀಚೆಗೆ ನಷ್ಟಕ್ಕೆ ಗುರಿಯಾಗಿದ್ದ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಷೇರುಗಳಲ್ಲಿ ಮತ್ತೆ ಖರೀದಿ ಆಸಕ್ತಿ ಕಂಡು ಬಂದಿತು. ಸೇವಾ ವಲಯದಲ್ಲಿನ ಪ್ರಗತಿ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಕೊರತೆ ಆಗುವುದಿಲ್ಲ ಎಂದು ಹವಾಮಾನ ಇಲಾಖೆಯ ಸ್ಪಷ್ಟಪಡಿಸಿರುವುದು ಖರೀದಿ ಉತ್ಸಾಹಕ್ಕೆ ಪುಷ್ಟಿ ನೀಡಿತು.
ಎರಡು ದಿನಗಳ ವಹಿವಾಟಿನಲ್ಲಿ ಸೂಚ್ಯಂಕವು 441 ಅಂಶಗಳಿಗೆ ಎರವಾಗಿತ್ತು. ಸತತ ಎರಡನೇ ವಾರವೂ ಸೂಚ್ಯಂಕ ಏರಿಕೆ ದಾಖಲಿಸಿದೆ. ಗುರುವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ₹ 640 ಕೋಟಿ ಮತ್ತು ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 340 ಕೋಟಿಗಳಷ್ಟು ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.