ADVERTISEMENT

ಷೇರುಪೇಟೆ | ತೀವ್ರ ಕುಸಿತದ ಸಾಧ್ಯತೆ ಕಡಿಮೆ: ವಿ.ಕೆ. ವಿಜಯಕುಮಾರ್ ವಿಶೇಷ ಲೇಖನ

ವಿ.ಕೆ. ವಿಜಯಕುಮಾರ್
Published 17 ಜುಲೈ 2023, 10:24 IST
Last Updated 17 ಜುಲೈ 2023, 10:24 IST
ಷೇರುಪೇಟೆ (ಸಾಂದರ್ಭಿಕ ಚಿತ್ರ)
ಷೇರುಪೇಟೆ (ಸಾಂದರ್ಭಿಕ ಚಿತ್ರ)   

‌ದೇಶದ ಷೇರುಪೇಟೆಗಳಲ್ಲಿ ಸದ್ಯ ಗೂಳಿಯ ಓಟ ಜೋರಾಗಿದ್ದು, ಎರಡು ಅಂಶಗಳು ಷೇರುಪೇಟೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿವೆ. ಮೊದಲನೆಯದು ಜಾಗತಿಕ ವಿದ್ಯಮಾನಗಳು. ಎರಡನೆಯದು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು. ಜಾಗತಿಕ ಮಟ್ಟದಲ್ಲಿ ಅಮೆರಿಕದ ಮಾರುಕಟ್ಟೆ ‘ಎಸ್‌ಆ್ಯಂಡ್‌ಪಿ 500’ 52 ವಾರಗಳ ಗರಿಷ್ಠ ಮಟ್ಟದಲ್ಲಿದೆ. ‘ಯುರೊ ಸ್ಟಾಕ್ಸ್‌ 50’ ಸಹ 52 ವಾರಗಳ ಗರಿಷ್ಠ ಮಟ್ಟದಲ್ಲಿದೆ. ಜರ್ಮನಿಯು ಆರ್ಥಿಕ ಹಿಂಜರಿತದ ಸ್ಥಿತಿಗೆ ಕಾಲಿಟ್ಟಿದ್ದರೂ ಅಲ್ಲಿನ ಷೇರುಪೇಟೆ ‘ಡಿಎಎಕ್ಸ್‌’ 52 ವಾರಗಳ ಗರಿಷ್ಠ ಮಟ್ಟದಲ್ಲಿದೆ. ಫ್ರಾನ್ಸ್‌ನ ಸಿಎಸಿ, ದಕ್ಷಿಣ ಕೊರಿಯಾ, ತೈವಾನ್‌ ಸೂಚ್ಯಂಕಗಳು ಸಹ ಅದೇ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಜಪಾನ್‌ನ ನಿಕೇಯ್‌ ಶೇ 24ರಷ್ಟು ಗಳಿಕೆ ಕಂಡಿದೆ. ಈ ಬೆಳವಣಿಗೆಗಳು ಭಾರತದ ಷೇರುಪೇಟೆಗಳ ಮೇಲೆ ಪ್ರಭಾವ ಬೀರುತ್ತಿವೆ.

ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡುವುದಾದರೆ, ದೇಶದಲ್ಲಿ ಆರ್ಥಿಕ ಬೆಳವಣಿಗೆ ದರ ಬಲಿಷ್ಠವಾಗಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ. ಮುಂಬರುವ ಹಲವು ವರ್ಷಗಳವರೆಗೆ ಈ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. 2023–24ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯು ಶೇ 6.4ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಮಾಡಲಾಗಿದೆ. ಜಿಎಸ್‌ಟಿ ಮತ್ತು ನೇರ ತೆರಿಗೆ ಮೂಲಕ ವರಮಾನ ಸಂಗ್ರಹ ಹೆಚ್ಚಾಗುತ್ತಿದೆ. ಹಣದುಬ್ಬರ, ಚಾಲ್ತಿ ಖಾತೆ ಕೊರತೆ ನಿಯಂತ್ರಣಕ್ಕೆ ಬರುತ್ತಿವೆ. ಬ್ಯಾಂಕಿಂಗ್‌ ವ್ಯವಸ್ಥೆಯ ಹಣಕಾಸು ಸ್ಥಿತಿ ಉತ್ತಮವಾಗಿ ಇರುವುದು, ಕಾರ್ಪೊರೇಟ್‌ ವಲಯ ಸುಧಾರಿಸಿಕೊಂಡಿರುವುದು ಹಾಗೂ ತಯಾರಿಕಾ ವಲಯದ ಪಿಎಂಐ ಏರಿಕೆ ಕಾಣುತ್ತಿರುವುದು ದೇಶದ ಆರ್ಥಿಕ ಸ್ಥಿತಿಯು ಉತ್ತಮವಾಗಿದೆ ಎನ್ನುವುದನ್ನು ಸೂಚಿಸುತ್ತಿವೆ. ಭಾರತದ ಆರ್ಥಿಕ ಸ್ಥಿತಿಯು ಅನುಕೂಲಕರವಾಗಿ ಇರುವುದರಿಂದ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಪಿಐ) ಹೆಚ್ಚಾಗುತ್ತಿದೆ. ವಿದೇಶಿ ಹೂಡಿಕೆದಾರರು 2023ರ ಮೊದಲ ಎರಡು ತಿಂಗಳಿನಲ್ಲಿ ₹34,626 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಮೇ ಮತ್ತು ಜೂನ್‌ನಲ್ಲಿ ಕ್ರಮವಾಗಿ ₹43,838 ಮತ್ತು ₹47,148 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಜುಲೈನಲ್ಲಿಯೂ ಖರೀದಿ ಮುಂದುವರಿಸಿದ್ದಾರೆ.

ವಲಯವಾರು ಏರಿಳಿತ: ಮಾರುಕಟ್ಟೆಯಲ್ಲಿ ವಲಯವಾರು ಏರಿಳಿತ ಯಾವಾಗಲೂ ಇರುತ್ತದೆ. ಯಾವೆಲ್ಲಾ ವಲಯಗಳು ಉತ್ತಮ ಗಳಿಕೆ ಕಂಡುಕೊಳ್ಳುತ್ತವೆ ಮತ್ತು ಯಾವ ವಲಯಗಳು ಕುಸಿತ ಕಾಣುತ್ತವೆ ಎನ್ನುವುದರ ಮೇಲೆ ಅವುಗಳ ಭವಿಷ್ಯ ನಿರ್ಧಾರ ಆಗುತ್ತದೆ. ಕೋವಿಡ್‌ ಸಂದರ್ಭದಲ್ಲಿ ಗೂಳಿ ಓಟ ಜೋರಾಗಿತ್ತು. 2020ರ ಮಾರ್ಚ್‌ನಲ್ಲಿ 7,511 ಅಂಶಗಳಲ್ಲಿ ಇದ್ದ ನಿಫ್ಟಿ 2021ರ ಅಕ್ಟೋಬರ್‌ ವೇಳೆಗೆ 16,804 ಅಂಶಗಳಿಗೆ ಏರಿಕೆ ಕಂಡಿತು. ಕೋವಿಡ್‌ನಿಂದಾಗಿ 2020ರಲ್ಲಿ ಫಾರ್ಮಾ ವಲಯ ಉತ್ತಮ ಗಳಿಕೆ ಕಂಡಿತು. ಡಿಜಿಟಲೀಕರಣಕ್ಕೆ ವೇಗ ದೊರೆತಿದ್ದರಿಂದ 2021ರಲ್ಲಿ ಐ.ಟಿ. ವಲಯದ ಗಳಿಕೆ ಹೆಚ್ಚಾಯಿತು. ಇದೀಗ ದೇಶಿ ಆರ್ಥಿಕತೆಯ ಮೇಲೆ ಅವಲಂಬಿತವಾಗಿರುವ ರಿಯಾಲ್ಟಿ, ಆಟೊಮೊಬೈಲ್‌, ಬಂಡವಾಳ ಸರಕುಗಳು ಮತ್ತು ಬ್ಯಾಂಕಿಂಗ್‌ ವಲಯಗಳು ಗಳಿಕೆ ಕಂಡುಕೊಳ್ಳುತ್ತಿವೆ.

ADVERTISEMENT

ವಲಯವಾರು ಗಳಿಕೆ: ನಿಫ್ಟಿ ಮೂರು ತಿಂಗಳಲ್ಲಿ ಶೇ 8.89ರಷ್ಟು ಗಳಿಕೆ ಕಂಡಿದೆ. ನಿಫ್ಟಿಯಲ್ಲಿ ರಿಯಾಲ್ಟಿ ವಲಯ ಶೇ 25.49ರಷ್ಟು ಗರಿಷ್ಠ ಗಳಿಕೆ ತಂದುಕೊಟ್ಟಿದೆ. ಆಟೊ ಶೇ 20.13, ಎಫ್‌ಎಂಸಿಜಿ ಶೇ 14.75, ಲೋಹ (11.73%), ಇಂಧನ (9.13%), ಫಾರ್ಮಾ (11.20%), ತೈಲ ಮತ್ತು ಅನಿಲ (8.49%), ಬ್ಯಾಂಕ್‌ (5.01%), ಐ.ಟಿ. (4.54%) ಗಳಿಕೆ ಕಂಡುಕೊಂಡಿವೆ. ಈ ಅಂಕಿ–ಅಂಶಗಳು ಜುಲೈ 13ರವರೆಗಿನ ಮಾಹಿತಿಯನ್ನು ಆಧರಿಸಿದೆ.

ವಲಯವಾರು ಗಳಿಕೆ ಏನನ್ನು ಸೂಚಿಸುತ್ತಿದೆ?
* ನಿಫ್ಟಿ ರಿಯಾಲ್ಟಿ ಮತ್ತು ನಿಫ್ಟಿ ಆಟೊ ಉತ್ತಮ ಗಳಿಕೆ ಕಾಣುತ್ತಿರುವ ವಲಯಗಳಾಗಿವೆ. ರಿಯಲ್‌ ಎಸ್ಟೇಟ್‌ ವಲಯದಲ್ಲಿ ಹೂಡಿಕೆ ಮಾಡುವವರು ನಿರ್ಮಾಣಕ್ಕೆ ಸಂಬಂಧಿಸಿದ ಅಂದರೆ ಗೃಹ ಹಣಕಾಸು, ಸಿಮೆಂಟ್‌, ಎಲೆಕ್ಟ್ರಿಕಲ್ಸ್‌, ಇತ್ಯಾದಿಗಳಲ್ಲಿ ಹೂಡಿಕೆ ಮಾಡಬಹುದು. ಅಂತೆಯೇ ಆಟೊ ಬಿಡಿಭಾಗಗಳ ವಲಯದ ಮೂಲಕವೂ ವಾಹನ ವಲಯದಲ್ಲಿ ಹೂಡಿಕೆ ಮಾಡಬಹುದು.

* ಐ.ಟಿ. ವಲಯದ ಬೆಳವಣಿಗೆಯು ಸವಾಲಿನಿಂದ ಕೂಡಿದೆ. ಹೀಗಾಗಿ ನಿಫ್ಟಿ ಐ.ಟಿ. ಇಳಿಮುಖವಾಗಿದೆ. ದೀರ್ಘಾವಧಿಗೆ ಗುಣಮಟ್ಟದ ಷೇರುಗಳು ಖರೀದಿಗೆ ಒಳಗಾಗಬಹುದು.

* ಎಫ್‌ಎಂಸಿಜಿ ಉತ್ತಮ ಗಳಿಕೆ ಕಂಡಕೊಳ್ಳುತ್ತಿದೆ. ಮೌಲ್ಯವು ಗರಿಷ್ಠ ಮಟ್ಟದಲ್ಲಿಯೇ ಇದೆ.

* ಈಚಿನ ತಿಂಗಳುಗಳಲ್ಲಿ ಲೋಹ ವಲಯ ನಷ್ಟ ಕಾಣುತ್ತಿದೆ. ಜಾಗತಿಕವಾಗಿ ಲೋಹಗಳ ಬೆಲೆ ಇಳಿಕೆ ಕಾಣುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. 2023ರ ಅಂತ್ಯದವರೆಗೂ ಲೋಹಗಳ ಬೆಲೆಯು ಇಳಿಮುಖವಾಗಿಯೇ ಇರುವ ಸಾಧ್ಯತೆ ಇದೆ.

* ಕೆಲವು ತಿಂಗಳುಗಳಿಂದ ಫಾರ್ಮಾ ವಲಯದ ಗಳಿಕೆ ಹೆಚ್ಚಾಗುತ್ತಿದೆ. ದೀರ್ಘಾವಧಿಯಲ್ಲಿ ಉತ್ತಮ ಬೆಳವಣಿಗೆಯನ್ನು ತಂದುಕೊಡಬಲ್ಲದು.

ನಿಫ್ಟಿ ಮತ್ತು ಸೆನ್ಸೆಕ್ಸ್‌ ದಾಖಲೆ ಮಟ್ಟದಲ್ಲಿ ಇದ್ದು, ಮಾರುಕಟ್ಟೆ ಮೌಲ್ಯವೂ ಗರಿಷ್ಠ ಮಟ್ಟದಲ್ಲಿದೆ. ಹೀಗಿದ್ದರೂ ಆತಂಕ ಇಲ್ಲ. ಮಾರುಕಟ್ಟೆಯು ಇಳಿಕೆ ಕಾಣಬಹುದು. ಆದರೆ, ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ತೀವ್ರ ಕುಸಿತ ಕಾಣುವ ಸಾಧ್ಯತೆ ಕಡಿಮೆ ಇದೆ.

ಲೇಖಕ: ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.