ADVERTISEMENT

ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ; 1,158 ಅಂಶ ಕುಸಿದ ಸೆನ್ಸೆಕ್ಸ್‌

ಪಿಟಿಐ
Published 12 ಮೇ 2022, 11:27 IST
Last Updated 12 ಮೇ 2022, 11:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಐದನೇ ದಿನವೂ ಕರಡಿ ಕುಣಿತ ಮುಂದುವರಿದಿದೆ. ಹೂಡಿಕೆದಾರರು ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದ್ದರಿಂದ ತೀವ್ರ ಮಾರಾಟ ಒತ್ತಡ ಸೃಷ್ಟಿಯಾಗಿ ಸೆನ್ಸೆಕ್ಸ್‌ 1,158 ಅಂಶ ಕುಸಿತ ದಾಖಲಿಸಿತು.

ಗುರುವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡ 2.14ರಷ್ಟು ಇಳಿಕೆಯಾಗಿ 52,930 ಅಂಶ ತಲುಪಿತು. ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,386 ಅಂಶಗಳವರೆಗೂ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 359.10 ಅಂಶ ಕಡಿಮೆಯಾಗಿ 15,808 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಯಿತು.

ಎಚ್‌ಡಿಎಫ್‌ಸಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ಐಸಿಐಸಿಐ ಬ್ಯಾಂಕ್‌ ಸೇರಿದಂತೆ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯವಿರುವ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು.

ADVERTISEMENT

ಜಾಗತಿಕ ಆರ್ಥಿಕತೆಯ ಮೇಲೆ ಹಣದುಬ್ಬರ ಪರಿಣಾಮ, ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಕೇಂದ್ರ ಬ್ಯಾಂಕ್‌ಗಳ ನಿರ್ಧಾರಗಳ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ತಲ್ಲಣ ಉಂಟಾಗಿದೆ. ಅದರ ಪರಿಣಾಮ ಷೇರುಪೇಟೆಗಳಲ್ಲಿ ಕಂಡು ಬಂದಿರುವುದಾಗಿ ವಿಶ್ಲೇಷಿಸಲಾಗಿದೆ.

ಇಂಡಸ್‌ಇಂಡ್‌ ಬ್ಯಾಂಕ್‌, ಟಾಟಾ ಸ್ಟೀಲ್‌, ಬಜಾಜ್‌ ಫೈನಾನ್ಸ್‌, ಬಜಾಜ್‌ ಫಿನ್‌ಸರ್ವ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಟೈಟಾನ್‌, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್‌ ಹಾಗೂ ಎಸ್‌ಬಿಐ ಷೇರುಗಳು ಶೇಕಡ 2ರಿಂದ 5.6ರಷ್ಟು ಕುಸಿತ ಕಂಡಿವೆ.

ಈ ನಡುವೆ ವಿಪ್ರೊ ಮತ್ತು ಎಚ್‌ಸಿಎಲ್‌ ಟೆಕ್ನಾಲಜೀಸ್‌ ಷೇರುಗಳು ಅಲ್ಪ ಗಳಿಕೆ ದಾಖಲಿಸಿವೆ.

ಬುಧವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,609.35 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದರು.

ಇಂದು ಬ್ರೆಂಟ್‌ ಕಚ್ಚಾ ತೈಲ ದರವು ಶೇಕಡ 2.02ರಷ್ಟು ಕಡಿಮೆಯಾಗಿ ಪ್ರತಿ ಬ್ಯಾರೆಲ್‌ಗೆ 105.7 ಡಾಲರ್‌ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.