ADVERTISEMENT

ಷೇರುಪೇಟೆಯಲ್ಲಿ ಕರಡಿ ಕುಣಿತ: ₹15 ಲಕ್ಷ ಕೋಟಿಯಷ್ಟು ಕರಗಿದ ಹೂಡಿಕೆದಾರರ ಸಂಪತ್ತು

ಪಿಟಿಐ
Published 5 ಆಗಸ್ಟ್ 2024, 13:36 IST
Last Updated 5 ಆಗಸ್ಟ್ 2024, 13:36 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಸುಳಿವು ಮತ್ತು ಇಸ್ರೇಲ್–ಇರಾನ್ ಯುದ್ಧ ವಾತಾವರಣದ ಬೆನ್ನಲ್ಲೇ ಜಾಗತಿಕ ಷೇರುಪೇಟೆಗಳಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಅದರ ಪರಿಣಾಮ ದೇಶೀಯ ಷೇರುಪೇಟೆಯೂ ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಬ್ಯಾಂಕಿಂಗ್, ಐಟಿ, ಲೋಹ, ತೈಲ ಮತ್ತು ಎಲ್‌ಪಿಜಿ ಷೇರುಗಳ ಮಾರಾಟದಲ್ಲಿ ಏರಿಕೆ ಕಂಡಿದ್ದರಿಂದ ಒಂದೇ ದಿನ ₹15 ಲಕ್ಷ ಕೋಟಿಯಷ್ಟು ಹೂಡಿಕೆದಾರರ ಸಂಪತ್ತು ಕರಗಿದೆ. ಷೇರುಪೇಟೆಯ ಸೂಚ್ಯಂಕಗಳು ಶೇಕಡ 3ರಷ್ಟು ಕುಸಿದಿವೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 2,222.55 ಅಂಶಗಳಷ್ಟು ಅಥವಾ ಶೇಕಡ 2.74ರಷ್ಟು ಕುಸಿದು 78,759.40 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ. ದಿನದ ವಹಿವಾಟಿನಲ್ಲಿ 2,686.09 ಅಂಶಗಳಷ್ಟು ಕುಸಿದು 78,295.86 ವಹಿವಾಟು ನಡೆಸಿದ್ದ ಸೆನ್ಸೆಕ್ಸ್ ಬಳಿಕ ಚೇತರಿಕೆ ಕಂಡಿದೆ.

ADVERTISEMENT

ಎನ್‌ಎಸ್‌ಇ ನಿಫ್ಟಿ 662.10 ಅಂಶಗಳಷ್ಟು ಅಥವಾ ಶೇಕಡ 2.68ರಷ್ಟು ಕುಸಿದು ತಿಂಗಳ ಕನಿಷ್ಠ ಮಟ್ಟ 24,055.60 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ದಿನದ ವಹಿವಾಟಿನಲ್ಲಿ 824 ಅಂಶಗಳಷ್ಟು ಕುಸಿದು 23,893.70ರಲ್ಲಿ ವಹಿವಾಟು ನಡೆಸಿದ್ದ ನಿಫ್ಟಿ ಬಳಿಕ ಚೇತರಿಕೆ ಕಂಡಿದೆ.

ಬಿಎಸ್‌ಇ ಕಂಪನಿಗಳ ಷೇರುಗಳ ಮೌಲ್ಯ ₹441.84 ಲಕ್ಷ ಕೋಟಿಗೆ ಕುಸಿಯುವ ಮೂಲಕ ಹೂಡಿಕೆದಾರರು ಒಂದೇ ದಿನ ₹15 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ. ಶುಕ್ರವಾರ ಹೂಡಿಕೆದಾರರು ₹4.46 ಲಕ್ಷ ಕೋಟಿ ಕಳೆದುಕೊಂಡಿದ್ದರು. ಎರಡು ದಿನಗಳಲ್ಲಿ ಷೇರುಪೇಟೆಯ ಒಟ್ಟು ನಷ್ಟ ₹19 ಲಕ್ಷ ಕೋಟಿಯಾಗಿದೆ.

ಏಷ್ಯಾ ಷೇರುಪೇಟೆಗಳಾದ ಸೋಲ್, ಟೋಕಿಯೊ, ಶಾಂಘೈ ಮತ್ತು ಹಾಂಕಂಗ್ ಕುಸಿತ ಕಂಡಿವೆ.

ಜಪಾನ್ ಷೇರುಪೇಟೆ ಸೂಚ್ಯಂಕವು ಶೇಕಡ 12.4ರಷ್ಟು ಕುಸಿದಿದೆ.

ಲೋಕಸಭಾ ಚುನಾವಣೆಯ ಫಲಿತಾಂಶದ ದಿನವಾದ ಜೂನ್‌ 4ರಂದು ಸೆನ್ಸೆಕ್ಸ್‌  ಮತ್ತು ನಿಫ್ಟಿ ಶೇ 5ರಷ್ಟು ಕುಸಿತ ಕಂಡಿದ್ದವು. 

ಸೆನ್ಸೆಕ್ಸ್‌ ಗುಚ್ಛದಲ್ಲಿ ಟಾಟಾ ಮೋಟರ್ಸ್‌ ಶೇ 7ರಷ್ಟು ಇಳಿಕೆ ಕಂಡಿದೆ. ಅದಾನಿ ಪೋರ್ಟ್ಸ್‌, ಟಾಟಾ ಸ್ಟೀಲ್‌, ಎಸ್‌ಬಿಐ, ಪವರ್‌ ಗ್ರಿಡ್‌, ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರಿನ ಮೌಲ್ಯವು ಇಳಿಕೆ ಕಂಡಿದೆ.

ಹಿಂದುಸ್ತಾನ್‌ ಯೂನಿಲಿವರ್‌ ಮತ್ತು ನೆಸ್ಲೆ ಷೇರಿನ ಮೌಲ್ಯದಲ್ಲಿ ಏರಿಕೆ ಆಗಿದೆ. ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಶೇ 4.21 ಮತ್ತು ಮಿಡ್‌ಕ್ಯಾಪ್‌ ಸೂಚ್ಯಂಕ ಶೇ 3.60ರಷ್ಟು ಇಳಿಕೆಯಾಗಿವೆ.

ಏಷ್ಯಾದ ಮಾರುಕಟ್ಟೆಯಲ್ಲಿ ಸೋಲ್‌, ಟೋಕಿಯೊ, ಶಾಂಘೈ ಮತ್ತು ಹಾಂಗ್‌ ಕಾಂಗ್‌ ನಕಾರಾತ್ಮಕ ವಹಿವಾಟು ದಾಖಲಿಸಿವೆ. ಜಪಾನ್‌ ಷೇರುಪೇಟೆ ಸೂಚ್ಯಂಕ ನಿಕ್ಕಿ ಶೇ 12ಕ್ಕೂ ಹೆಚ್ಚು ಇಳಿಕೆ ಕಂಡಿದೆ.

ಸೂಚ್ಯಂಕ ಇಳಿಕೆಗೆ ಕಾರಣವೇನು: ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳ ಮತ್ತು ಜಪಾನ್‌ನ ಯೆನ್‌ ಮೌಲ್ಯ ಏರಿಕೆಯಿಂದ ಅಮೆರಿಕದ ಆರ್ಥಿಕತೆಯು ಹಿಂಜರಿತದತ್ತ ಸಾಗಬಹುದು ಎಂಬ ಹೂಡಿಕೆದಾರರ ಕಳವಳಕ್ಕೆ ಜಾಗತಿಕ ಮಾರುಕಟ್ಟೆಗಳು ಸಿಲುಕಿದವು. ಇದರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಕಂಡು ಬಂದಿದೆ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಬ್ಯಾಂಕ್ ಆಫ್ ಜಪಾನ್‌ನ ಬಡ್ಡಿ ದರ ಏರಿಕೆಯು ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಇದು ಮಾರುಕಟ್ಟೆಯ ಆರ್ಥಿಕತೆಯನ್ನು ಮರುಪರಿಶೀಲಿಸುವಂತೆ ಮಾಡಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ ನಡೆದ ವಹಿವಾಟಿನಲ್ಲಿ ₹3,310 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದು ಸಹ ಷೇರು ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಷೇರು ಸೂಚ್ಯಂಕ ಇಳಿಕೆಗೆ ಕಾರಣವೇನು?

* ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳ

* ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಊಹಾಪೋಹ ಸೃಷ್ಟಿ

* ಬ್ಯಾಂಕ್ ಆಫ್ ಜಪಾನ್‌ನ ಬಡ್ಡಿ ದರ ಏರಿಕೆ

* ಜಪಾನ್‌ನ ಷೇರು ಸೂಚ್ಯಂಕ ಕುಸಿತ

* ಎಫ್‌ಐಐಗಳು ಭಾರತದ ಷೇರುಗಳನ್ನು ಮಾರಾಟ ಮಾಡಿದ್ದು

* ದೇಶದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.