ADVERTISEMENT

ಸೆನ್ಸೆಕ್ಸ್‌ 220 ಅಂಶ ಇಳಿಕೆ

ಪಿಟಿಐ
Published 28 ಮೇ 2024, 15:27 IST
Last Updated 28 ಮೇ 2024, 15:27 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ಲೋಕಸಭಾ ಚುನಾವಣಾ ಫಲಿತಾಂಶದ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಲಾಭದ ಉದ್ದೇಶಕ್ಕಾಗಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ನಕಾರಾತ್ಮಕ ವಹಿವಾಟು ನಡೆಯಿತು. 

ಆರಂಭಿಕ ವಹಿವಾಟಿನಲ್ಲಿ ಕಂಡುಕೊಂಡಿದ್ದ ಏರಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 220 ಅಂಶ ಕುಸಿತ (ಶೇ 0.29ರಷ್ಟು) ಕಂಡು, 75,170 ಅಂಶಗಳಲ್ಲಿ ವಹಿವಾಟು ಸ್ಥಿರಗೊಂಡಿತು. 

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 44 ಅಂಶ ಇಳಿಕೆ (ಶೇ 0.19ರಷ್ಟು) ಕಂಡು 22,888 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು. 

ಸೆನ್ಸೆಕ್ಸ್ ಗುಚ್ಛದಲ್ಲಿನ ಪವರ್‌ ಗ್ರಿಡ್‌, ಎನ್‌ಟಿಪಿಸಿ, ಟೆಕ್‌ ಮಹೀಂದ್ರ, ಭಾರ್ತಿ ಏರ್‌ಟೆಲ್‌, ಟಾಟಾ ಮೋಟರ್ಸ್, ಇಂಡಸ್‌ಇಂಡ್‌ ಬ್ಯಾಂಕ್‌, ರಿಲಯನ್ಸ್ ಇಂಡಸ್ಟ್ರೀಸ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌ ಹಾಗೂ ಮಾರುತಿ ಸುಜುಕಿ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಏಷ್ಯನ್‌ ಪೇಂಟ್ಸ್‌, ವಿಪ್ರೊ, ಜೆಎಸ್‌ಡಬ್ಲ್ಯು ಸ್ಟೀಲ್‌, ಹಿಂದುಸ್ತಾನ್‌ ಯೂನಿಲಿವರ್‌, ಬಜಾಜ್‌ ಫಿನ್‌ಸರ್ವ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. 

‘ಚುನಾವಣಾ ಫಲಿತಾಂಶದ ಅನಿಶ್ಚಿತತೆಯಿಂದಾಗಿ ಮಾರುಕಟ್ಟೆಯಲ್ಲಿ ಚಂಚಲ ವಹಿವಾಟು ಮುಂದುವರಿಯಬಹುದು’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ಸೋಲ್‌, ಟೋಕಿಯೊ, ಶಾಂಘೈ, ಹಾಂಗ್‌ಕಾಂಗ್‌ ಮಾರುಕಟ್ಟೆಗಳು ಇಳಿಕೆ ಕಂಡಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾತೈಲದ ಬೆಲೆಯಲ್ಲಿ ಶೇ 0.13ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ 83.21 ಡಾಲರ್‌ ಆಗಿದೆ.

ಬೆಳ್ಳಿ ದರ ₹3100 ಏರಿಕೆ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಬೆಳ್ಳಿ ಧಾರಣೆಯು ಕೆ.ಜಿಗೆ ₹3100 ಏರಿಕೆಯಾಗಿದ್ದು ₹95950ಕ್ಕೆ ತಲುಪಿದೆ. ಆದರೆ ಹಳದಿ ಲೋಹದ ದರದಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. 10 ಗ್ರಾಂ ಚಿನ್ನದ ದರ ₹130 ಏರಿಕೆಯಾಗಿ ₹72950 ಆಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.  ‘ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರವು ಇಳಿಕೆಯಾದರಷ್ಟೇ ಅಲ್ಲಿನ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆಯಿದೆ. ಹಾಗಾಗಿ ಹೂಡಿಕೆದಾರರು ಹಣದುಬ್ಬರದ ಇಳಿಕೆಯತ್ತ ದೃಷ್ಟಿ ನೆಟ್ಟಿದ್ದಾರೆ. ಬಡ್ಡಿದರ ಕಡಿತವಾದರೆ ಚಿನ್ನದ ಬೆಲೆಯ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್‌ ಗಾಂಧಿ ತಿಳಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.