ADVERTISEMENT

Share Market | ಕರಡಿ ಕುಣಿತ: ಸೆನ್ಸೆಕ್ಸ್‌ ಕುಸಿತ

ಪಿಟಿಐ
Published 24 ಜುಲೈ 2024, 15:43 IST
Last Updated 24 ಜುಲೈ 2024, 15:43 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಹಣಕಾಸು ಮತ್ತು ಬ್ಯಾಂಕಿಂಗ್‌ ವಲಯದ ಷೇರುಗಳ ಮಾರಾಟದ ಹೆಚ್ಚಳದಿಂದಾಗಿ ಸತತ ನಾಲ್ಕನೇ ದಿನವಾದ ಬುಧವಾರ ಕೂಡ ದೇಶದ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಇಳಿಕೆ ದಾಖಲಿಸಿವೆ.

ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಹಾಗೂ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆ ಹೆಚ್ಚಿಸಿರುವುದು ಷೇರುಪೇಟೆಯಲ್ಲಿ ಕರಡಿ ಕುಣಿತಕ್ಕೆ ಕಾರಣವಾಯಿತು. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 280 ಅಂಶ ಇಳಿಕೆ ಕಂಡು 80,148 ಅಂಶಗಳಲ್ಲಿ ಸ್ಥಿರಗೊಂಡಿತು. ಸೆನ್ಸೆಕ್ಸ್‌ ಗುಚ್ಛದಲ್ಲಿನ 30 ಕಂಪನಿಗಳ ಪೈಕಿ 19 ಕಂಪನಿಗಳ ಷೇರಿನ ಮೌಲ್ಯ ಇಳಿಕೆಯಾಗಿದೆ. 

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 65 ಅಂಶ ಇಳಿಕೆ ಕಂಡು, 24,413 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ಸೆನ್ಸೆಕ್ಸ್‌ ಗುಚ್ಛದಲ್ಲಿನ ಬಜಾಜ್‌ ಫಿನ್‌ಸರ್ವ್‌ ಷೇರಿನ ಮೌಲ್ಯದಲ್ಲಿ ಶೇ 2ರಷ್ಟು ಇಳಿಕೆಯಾಗಿದೆ. ಬಜಾಜ್‌ ಫೈನಾನ್ಸ್‌, ಹಿಂದುಸ್ತಾನ್‌ ಯೂನಿಲಿವರ್‌, ಕೋಟಕ್‌ ಮಹೀಂದ್ರ, ಅದಾನಿ ಪೋರ್ಟ್ಸ್‌, ಎಕ್ಸಿಸ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಟೆಕ್‌ ಮಹೀಂದ್ರ, ಐಟಿಸಿ, ಎನ್‌ಟಿಪಿಸಿ, ಟಾಟಾ ಮೋಟರ್ಸ್‌ ಮತ್ತು ಸನ್‌ ಫಾರ್ಮಾ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಮಂಗಳವಾರ ನಡೆದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹2,975 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾತೈಲದ ಬೆಲೆಯು ಶೇ 0.75ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 81.62 ಡಾಲರ್‌ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.