ADVERTISEMENT

ಷೇರು ಮಾತು: ಷೇರು ಹೂಡಿಕೆಯಲ್ಲಿ ಈ ತಪ್ಪು ಮಾಡಲೇಬೇಡಿ...

ಶರತ್ ಎಂ.ಎಸ್.
Published 24 ಜನವರಿ 2022, 19:31 IST
Last Updated 24 ಜನವರಿ 2022, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಷೇರುಗಳಲ್ಲಿ ಹೂಡಿಕೆ ಮಾಡುವಾಗ ಅರಿವಿಲ್ಲದೆ ನಷ್ಟ ಮಾಡಿಕೊಳ್ಳುವವರಿಗಿಂತ ಹುಂಬತನಕ್ಕೆ ಬಿದ್ದು, ವಿವೇಚನೆ ಮರೆತು ದುಡ್ಡು ಕಳೆದುಕೊಳ್ಳುವವರೇ ಹೆಚ್ಚು. ಹೀಗಾಗಬಾರದು ಅಂದರೆ, ಷೇರು ಹೂಡಿಕೆಯಲ್ಲಿ ಆಗುವ ಸಾಮಾನ್ಯ ತಪ್ಪುಗಳ ಬಗ್ಗೆ ಹೆಚ್ಚು ಅರಿತುಕೊಳ್ಳಬೇಕು.

ತುರ್ತು ಅಗತ್ಯದ ಹಣ ತೊಡಗಿಸುವುದು: ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಶುರುವಾಗಿದೆ ಎಂದು ಪತ್ರಿಕೆಗಳು, ಸುದ್ದಿ ವಾಹಿನಿಗಳ ಮೂಲಕ ಮಾಹಿತಿ ಪಡೆದ ಕೂಡಲೇ ಅನೇಕರು ದಿಢೀರ್‌ಶ್ರೀಮಂತರಾಗುವ ಹಗಲುಗನಸಿಗೆ ಬೀಳುತ್ತಾರೆ. ಮಕ್ಕಳ ಶಾಲೆ ಶುಲ್ಕಕ್ಕೆ ಕೂಡಿಟ್ಟಿರುವ ಹಣ, ಸಾಲ ಮರುಪಾವತಿಗೆ ಮೀಸಲಿಟ್ಟಿರುವ ನಗದು, ವಿಮೆ ಪ್ರೀಮಿಯಂಗಾಗಿ ಹೊಂದಿಸಿರುವ ಮೊತ್ತ, ತುರ್ತು ಅಗತ್ಯಗಳಿಗಾಗಿ ಕಾಯ್ದಿರಿಸಿರುವ ದುಡ್ಡನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲು ಮುಂದಾಗುತ್ತಾರೆ. ಇದು ಅತ್ಯಂತ ಅಪಾಯಕಾರಿ ನಿರ್ಧಾರ.

ತುರ್ತು ಅಗತ್ಯಗಳಿಗೆ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಬಾರದು. ಷೇರು ಹೂಡಿಕೆಯಲ್ಲಿ ರಿಸ್ಕ್ ಹೆಚ್ಚಿಗೆ ಇರುವ ಕಾರಣ ಲಾಭದ ಸಾಧ್ಯತೆ ಎಷ್ಟಿದೆಯೋ ನಷ್ಟದ ಸಾಧ್ಯತೆಯೂ ಅಷ್ಟೇ ಇರುತ್ತದೆ. ತುರ್ತು ಅಗತ್ಯಕ್ಕೆ ಬೇಕಿರುವ ಹಣವನ್ನು ಉಳಿತಾಯ ಖಾತೆ, ಅಲ್ಪಾವಧಿ ಎಫ್.ಡಿ., ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಇಡುವುದು ಒಳಿತು.

ADVERTISEMENT

ಕುಸಿದಾಗ ಷೇರು ಹೂಡಿಕೆ ಮಾಡುವ ಲೆಕ್ಕಾಚಾರ: ‘ಷೇರುಪೇಟೆಯಲ್ಲಿ ಇನ್ನಷ್ಟು ಕುಸಿತವಾಗಲಿ, ಆಗ ಷೇರು ಖರೀದಿಸುತ್ತೇನೆ’ ಎಂದು ಅನೇಕರು ಹೇಳುವುದನ್ನು ಕೇಳಿದ್ದೇನೆ. ಆದರೆ, ಅತ್ಯಂತ ಕಡಿಮೆ ಬೆಲೆಗೆ ಕಂಪನಿ
ಯೊಂದರ ಷೇರು ಕೊಳ್ಳುವ ಮತ್ತು ಷೇರಿನ ಬೆಲೆ ಗರಿಷ್ಠ ಮಟ್ಟಕ್ಕೆ ಏರಿಕೆಯಾದಾಗ ಮಾರಾಟ ಮಾಡುವ ಲೆಕ್ಕಾಚಾರದ ನಿರ್ಧಾರ ಮಾಡಲು ಯಾವ ಮಾರುಕಟ್ಟೆ ತಜ್ಞರಿಗೂ ಸಾಧ್ಯವಿಲ್ಲ. ಈ ತಲೆಬುಡವಿಲ್ಲದ ಲೆಕ್ಕಾಚಾರಕ್ಕೆ ಬಿದ್ದು ಷೇರು ಮಾರುಕಟ್ಟೆ ಹೂಡಿಕೆ ನಿರ್ಧಾರಗಳನ್ನು ಮಾಡಬೇಡಿ. ಆರ್ಥಿಕವಾಗಿ ಉತ್ತಮವಾಗಿರುವ ಮತ್ತು ಭವಿಷ್ಯದಲ್ಲಿ ಬೆಳವಣಿಗೆಯ ಸಾಧ್ಯತೆ ತೋರುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿ. ಕಂಪನಿಯೊಂದರಲ್ಲಿ ಹೂಡಿಕೆ ಮಾಡುವ ಮುನ್ನ ಷೇರುಗಳ ಮೂಲಭೂತ ವಿಶ್ಲೇಷಣೆ (ಫಂಡಮೆಂಟಲ್ ಅನಾಲಿಸಿಸ್) ಮಾಡಿಕೊಂಡು ಮುನ್ನಡೆಯಿರಿ. ಫಂಡಮೆಂಟಲ್ ಅನಾಲಿಸಿಸ್‌ನಿಂದ ಕಂಪನಿಯೊಂದರ ಷೇರಿನ ಆಂತರಿಕ ಮೌಲ್ಯ ಅಂದರೆ ನಿಜವಾದ ಮೌಲ್ಯ ಅರಿಯಲು ಸಾಧ್ಯವಿದೆ.

ಹಿಂದಿನ ಗಳಿಕೆ ಆಧಾರದಲ್ಲಿ ಭವಿಷ್ಯದ ಅಂದಾಜು: ‘ಇವತ್ತು ಹೂಡಿಕೆ ಮಾಡುವವನು ನಿನ್ನೆ ಷೇರುಪೇಟೆಯಲ್ಲಿ ಉಂಟಾದ ಏರಿಕೆಯಿಂದ ಲಾಭ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ. ಕಳೆದ 10 ವರ್ಷಗಳಲ್ಲಿ ಆ ಕಂಪನಿ ಇಷ್ಟು ಲಾಭಾಂಶ ಕೊಟ್ಟಿದೆ. ಮುಂದಿನ ಕೆಲವು ವರ್ಷಗಳಲ್ಲಿ ಇಷ್ಟು ಲಾಭ ಸಿಗಬಹುದು ಎಂದು ನಾವು ಹಲವು ರೀತಿಯಲ್ಲಿ ಲೆಕ್ಕಾಚಾರ ಮಾಡಬಹುದು. ಆದರೆ ಈ ಹಿಂದೆ ಲಾಭ ಗಳಿಸಿರುವ ಕಂಪನಿ ಮುಂದೆ ಹೆಚ್ಚು ಲಾಭ ಗಳಿಸದೇ ಇರಬಹುದು. ಈವರೆಗೆ ಹೆಚ್ಚು ಲಾಭ ಕೊಡದ ಕಂಪನಿ ಮುಂದೆ ಉತ್ತಮ ಲಾಭಾಂಶ ನೀಡಬಹುದು. ಲಾಭದ ಲೆಕ್ಕಾಚಾರ ಕಂಪನಿಯ ಪ್ರಸ್ತುತ ಬೆಳವಣಿಗೆ ಮತ್ತು ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲು ಕಂಪನಿಯ ಬ್ಯಾಲೆನ್ಸ್ ಶೀಟ್ ನೋಡುವುದು ಮುಖ್ಯವಾಗುತ್ತದೆ.

ತಜ್ಞರ ಮೇಲೆ ಅತಿಯಾದ ವಿಶ್ವಾಸ: ನಿಮ್ಮ ಹೂಡಿಕೆಯನ್ನು ನಿಮ್ಮಷ್ಟು ಕಾಳಜಿಯಿಂದ ನಿರ್ವಹಿಸಲು ಯಾರಿಂದಲೂ ಸಾಧ್ಯವಿಲ್ಲ. ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯಿರಿ, ಆದರೆ ಅಂತಿಮವಾಗಿ ನೀವೇ ನಿರ್ಧಾರ ತೆಗೆದುಕೊಳ್ಳಿ. ನೆನಪಿರಲಿ, ಶ್ರೀಮಂತರಾದವರೆಲ್ಲರೂ ಅವರ ಹಣಕಾಸಿನ ನಿರ್ಧಾರಗಳನ್ನು ಅವರೇ ತೆಗೆದುಕೊಂಡಿದ್ದಾರೆ. ಮತ್ತೊಬ್ಬರ ಮೇಲೆ ಆ ಜವಾಬ್ದಾರಿ ಹೊರಿಸಿ ಸುಮ್ಮನಾಗಿಲ್ಲ. ಹೀಗೆ ಹಣಕಾಸಿನ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳುವಂತಾಗಬೇಕಾದರೆ ಅದಕ್ಕಾಗಿ ಒಂದಿಷ್ಟು ಕಲಿಕೆ ಮತ್ತು ಅಧ್ಯಯನ ಇರಬೇಕು. ಕಲಿಕೆಯಿಂದ ಮಾತ್ರ ಗಳಿಕೆ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.