ADVERTISEMENT

ನಷ್ಟದ ನಡುವೆಯೂ ಶೇ 9ರಷ್ಟು ಜಿಗಿದ ಟಾಟಾ ಕಂಪನಿ ಷೇರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 10:04 IST
Last Updated 13 ಮೇ 2022, 10:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಟಾಟಾ ಮೋಟಾರ್ಸ್‌ ನಾಲ್ಕನೇ ತ್ರೈಮಾಸಿಕದಲ್ಲಿ ₹992.05 ಕೋಟಿ ನಷ್ಟಕ್ಕೆ ಒಳಗಾಗಿದ್ದರೂ ಅದರ ಷೇರು ಬೆಲೆ ಶುಕ್ರವಾರ ದಿಢೀರ್‌ ಜಿಗಿತ ಕಂಡಿದೆ. ನಷ್ಟದ ನಡುವೆಯೂ ಟಾಟಾದ ಕಾರುಗಳಿಗೆ ಬೇಡಿಕೆ ಹೆಚ್ಚಿರುವ ಬೆನ್ನಲ್ಲೇ ಹೂಡಿಕೆದಾರರು ಅದರ ಷೇರು ಖರೀದಿಗೆ ಒಲವು ತೋರಿದ್ದಾರೆ.

ಟಾಟಾ ಕಂಪನಿಯ ಷೇರು ಬೆಲೆ ಶೇಕಡ 9ರ ವರೆಗೂ ಏರಿಕೆ ದಾಖಲಿಸಿತು. ಪ್ರಸ್ತುತ ಪ್ರತಿ ಷೇರು ₹404.8ರಲ್ಲಿ ವಹಿವಾಟು ನಡೆದಿದೆ.

2022ರ ಮಾರ್ಚ್‌ಗೆ ಕೊನೆಕೊಂಡಂತೆ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯು ₹992.05 ಕೋಟಿ ನಿವ್ವಳ ನಷ್ಟ ದಾಖಲಿಸಿರುವುದನ್ನು ಗುರುವಾರ ಪ್ರಕಟಿಸಿತ್ತು. ಸೆಮಿಕಂಡಕ್ಟರ್‌ ಕೊರತೆ ಮತ್ತು ಹಣ ದುಬ್ಬರ ಏರಿಕೆಯ ಸವಾಲುಗಳನ್ನು ಕಂಪನಿಯು ಎದುರಿಸಿದೆ.

ADVERTISEMENT

ಕಳೆದ ಹಣಕಾಸು ವರ್ಷ ಇದೇ ಅವಧಿಯಲ್ಲಿ ಕಂಪನಿಯು ಒಟ್ಟಾರೆ ₹7,585.34 ಕೋಟಿ ನಷ್ಟ ದಾಖಲಿಸಿತ್ತು.

ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆಗಳಿಂದ ಬಂದಿರುವ ಒಟ್ಟು ಆದಾಯ ₹78,439.06 ಕೋಟಿ. ಕಳೆದ ವರ್ಷ ₹88,627.90 ಕೋಟಿ ಆದಾಯ ಗಳಿಸಿತ್ತು.

ಟಾಟಾ ಜೊತೆಗೆ ಹೂಡಿಕೆದಾರರು ರಿಲಯನ್ಸ್‌ ಷೇರು ಖರೀದಿಗೆ ನಡೆಸಿದ್ದರಿಂದ ದೇಶದ ಷೇರುಪೇಟೆಗಳ ಸೂಚ್ಯಂಕಗಳು ಅಲ್ಪ ಏರಿಕೆ ದಾಖಲಿಸಿದವು. ಸತತ ಐದು ದಿನ ತೀವ್ರ ಕುಸಿತಕ್ಕೆ ಒಳಗಾಗಿದ್ದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಶೇಕಡ 1ರವರೆಗೂ ಹೆಚ್ಚಳ ಕಂಡು ಮತ್ತೆ ಇಳಿಕೆ ಕಂಡವು. ಸೆನ್ಸೆಕ್ಸ್‌ 100 ಅಂಶ ಕಡಿಮೆಯಾಗಿ 52,830 ತಲುಪಿದರೆ, ನಿಫ್ಟಿ 17.05 ಅಂಶ ಇಳಿಕೆಯಾಗಿ 15,790.95 ಅಂಶ ಮುಟ್ಟಿತು.

ಗುರುವಾರದವರೆಗೂ ಐದು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರು ₹18.74 ಲಕ್ಷ ಕೋಟಿ ಸಂಪತ್ತು ಕಳೆದುಕೊಂಡಿದ್ದಾರೆ. ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಏಪ್ರಿಲ್‌ನಲ್ಲಿ ಎಂಟು ವರ್ಷಗಳ ಗರಿಷ್ಠ ಮಟ್ಟವಾದ ಶೇಕಡ 7.79ಕ್ಕೆ ತಲುಪಿದೆ.

ಇತ್ತೀಚೆಗೆ ಮತ್ತೊಂದು ಎಲೆಕ್ಟ್ರಿಕ್‌ ಕಾರು ಬಿಡುಗಡೆ ಮಾಡಿದ ಟಾಟಾ

ವಿದ್ಯುತ್ ಚಾಲಿತ 'ನೆಕ್ಸಾನ್ ಇವಿ ಮ್ಯಾಕ್ಸ್' ವಾಹನವನ್ನು ಬುಧವಾರ ಬಿಡುಗಡೆ ಮಾಡಿದೆ. ಇದರ ಎಕ್ಸ್‌ಷೋರೂಂ ಬೆಲೆಯು ₹17.74 ಲಕ್ಷದಿಂದ ₹19.24 ಲಕ್ಷದವರೆಗೆ ಇದೆ.

ಇದು ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ನೆಕ್ಸಾನ್‌ ಇವಿ ವಾಹನಕ್ಕಿಂತ ಶೇಕಡ 33ರಷ್ಟು ಹೆಚ್ಚು ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 437 ಕಿ.ಮೀ. ದೂರ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.