ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಭಾರತೀಯ ಷೇರುಪೇಟೆ ಗಳಿಕೆಯೊಂದಿಗೆ ಆರಂಭವಾಗಿದೆ.
ನಿಫ್ಟಿ 50 ಸೂಚ್ಯಂಕವು 95 ಅಂಶಗಳು ಅಥವಾ ಶೇಕಡ 0.39ರಷ್ಟು ಗಳಿಕೆ ಕಂಡು 24,308ರಲ್ಲಿ ವಹಿವಾಟು ಆರಂಭಿಸಿದೆ. ಆದರೆ, ಬಿಎಸ್‌ಇ ಸೆನ್ಸೆಕ್ಸ್ 295 ಅಂಶಗಳು ಅಥವಾ ಶೇಕಡ 0.37 ರಷ್ಟು ಏರಿಕೆ ಕಂಡು 79,771ರಲ್ಲಿ ವಹಿವಾಟು ಆರಂಭಿಸಿದೆ.
ಅಮೆರಿಕ ಚುನಾವಣೆಯು ವಿಶ್ವದಾದ್ಯಂತದ ಷೇರು ಮಾರುಕಟ್ಟೆಗಳನ್ನು ಅನಿಶ್ಚಿತತೆಗೆ ದೂಡಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಫಲಿತಾಂಶ ಬರುವ ಹೊತ್ತಿಗೆ ಮಾರುಕಟ್ಟೆ ಏರಿಳಿತ ಕಾಣಬಹುದು ಎಂದಿದ್ದಾರೆ.
ಅಮೆರಿಕ ಚುನಾವಣಾ ಮತ ಎಣಿಕೆ ಆರಂಭವಾಗಿದೆ. ಮಾರುಕಟ್ಟೆಗಳು ಪ್ರತಿ ಸುದ್ದಿ ಹರಿವಿಗೆ ಪ್ರತಿಕ್ರಿಯಿಸುತ್ತಿವೆ. ಚುನಾವಣಾ ದಿನವು ಚುನಾವಣಾ ರಾತ್ರಿಯಾಗಿ ಬದಲಾಗುತ್ತದೆ. ಅಪಾಯವೆಂದರೆ, ವಾರಗಟ್ಟಲೆ ಮಾರುಕಟ್ಟೆಯಲ್ಲಿ ಏರಿಳಿತ ಕಂಡುಬರಬಹುದು. ಈಗ ಟ್ರಂಪ್ ಮುನ್ನಡೆಯಲ್ಲಿದ್ದು, ಒಂದೊಮ್ಮೆ ಹ್ಯಾರಿಸ್ ಮುನ್ನಡೆ ಸಾಧಿಸಿದರೆ. ಮಾರುಕಟ್ಟೆಯ ಗತಿ ಬದಲಾಗಲಿದೆ ಎಂದು ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ ಹೇಳಿದ್ದಾರೆ.
‘7 ನಿರ್ಣಾಯಕ ರಾಜ್ಯಗಳ ಫಲಿತಾಂಶ ಸನಿಹದಲ್ಲಿದೆ. ಕೆಲವು ರಾಜ್ಯಗಳಲ್ಲಿ ಮತದಾನವು ಮಧ್ಯರಾತ್ರಿವರೆಗೆ ಮುಂದುವರಿಯುತ್ತದೆ. ನಾವು ಈಗಾಗಲೇ ಪೂರ್ವ ಕರಾವಳಿ ರಾಜ್ಯಗಳಲ್ಲಿ ಫಲಿತಾಂಶವನ್ನು ನೋಡುತ್ತಿದ್ದೇವೆ. ಹೂಡಿಕೆದಾರರಿಗೆ ಅತ್ಯಂತ ತಾಳ್ಮೆಯಿಂದ ಕಾಯಬೇಕಿದೆ’ಎಂದೂ ಹೇಳಿದ್ದಾರೆ.
ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಹೊರತುಪಡಿಸಿ ಎನ್‌ಎಸ್‌ಸಿಯ ಎಲ್ಲ ವಲಯಗಳ ಷೇರುಗಳು ಗಳಿಕೆಯೊಂದಿಗೆ ವಹಿವಾಟು ಆರಂಭಿಸಿವೆ. ನಿಫ್ಟಿಯ ಐಟಿ ಷೇರುಗಳು ಶೇಕಡ 0.86 ರಷ್ಟು ಏರಿಕೆಯೊಂದಿಗೆ ಮುಂಚೂಣಿಯಲ್ಲಿವೆ. ನಂತರದ ಸ್ಥಾನದಲ್ಲಿ ನಿಫ್ಟಿ ಬ್ಯಾಂಕ್ ಶೇಕಡ 0.45 ರಷ್ಟು ಮತ್ತು ನಿಫ್ಟಿ ಆಟೋ ಶೇಕಡ 0.51ರಷ್ಟು ಏರಿಕೆಯಾಗಿದೆ.
ನಿಫ್ಟಿ 50 ಷೇರುಗಳ ಪಟ್ಟಿಯಲ್ಲಿ, 38 ಷೇರುಗಳು ಲಾಭದೊಂದಿಗೆ ವಹಿವಾಟು ಆರಂಭಿಸಿದರೆ, 12 ಷೇರುಗಳು ಆರಂಭಿಕ ಅವಧಿಯಲ್ಲಿ ಕುಸಿತ ಕಂಡಿದ್ದವು. ಅಪೊಲೊ ಆಸ್ಪತ್ರೆ ಮತ್ತು ಎಚ್‌ಸಿಎಲ್ ಟೆಕ್ ಷೇರುಗಳು ಅಧಿಕ ಲಾಭ ಗಳಿಸಿವೆ.
ಏಷ್ಯಾ ಷೇರುಪೇಟೆಗಳ ಪೈಕಿ ಜಪಾನ್‌ನ ನಿಕ್ಕಿ 225 ಅಂಶಗಳಷ್ಟು, ವಾನ್ ಷೇರುಪೇಟೆಯು ಸೂಚ್ಯಂಕವು ಶೇಕಡ 1.21ರಷ್ಟು ಏರಿಕೆಯಾಗಿದೆ. ಆದರೆ, ದಕ್ಷಿಣ ಕೊರಿಯಾದ ಕಾಸ್ಪಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇಕಡ 3 ಕ್ಕಿಂತ ಇಳಿಕೆ ದಾಖಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.