ನವದೆಹಲಿ: ಕುಮಾರ ಮಂಗಲಂ ಬಿರ್ಲಾ ಅವರು ವೊಡಾಫೋನ್ ಐಡಿಯಾ ಲಿಮಿಟೆಡ್‌ನ (ವಿಐಎಲ್) ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ, ಕಂಪನಿಯ ಷೇರು ಬೆಲೆ ತೀವ್ರ ಕುಸಿತಕ್ಕೆ ಒಳಗಾಗಿದೆ. ಗುರುವಾರ ಷೇರು ಬೆಲೆ ಶೇ.24ರಷ್ಟು ಇಳಿಕೆಯಾಗಿದೆ.
ಸತತ ನಾಲ್ಕು ವಹಿವಾಟುಗಳಲ್ಲಿ ಇಳಿಕೆಯಾಗಿರುವ ವೊಡಾಫೋನ್ ಐಡಿಯಾ ಷೇರು, ನಾಲ್ಕು ದಿನಗಳಲ್ಲಿ ಶೇ.45ರಷ್ಟು ಕುಸಿತ ಕಂಡಿದೆ. ಇಂದು ಮುಂಬೈ ಷೇರುಪೇಟೆಯಲ್ಲಿ ಪ್ರತಿ ಷೇರು ಬೆಲೆಯು ಶೇ.24.54ರಷ್ಟು ಇಳಿಕೆಯೊಂದಿಗೆ 52 ವಾರಗಳ ಕನಿಷ್ಠ ಮಟ್ಟವಾದ ₹ 4.55ಕ್ಕೆ ತಲುಪಿದೆ.
ಬ್ರಿಟನ್‌ನ ವೊಡಾಫೋನ್ ಸಹಭಾಗಿತ್ವದಲ್ಲಿರುವ ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಯಲ್ಲಿ ತನ್ನ ಪಾಲಿನ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಕುಮಾರ ಮಂಗಲಂ ಬಿರ್ಲಾ ಜೂನ್‌ನಲ್ಲಿ ತಿಳಿಸಿದ್ದರು. ಅವರು ಕಂಪನಿಯಲ್ಲಿ ಶೇಕಡ 27ರಷ್ಟು ಷೇರು ಹೊಂದಿದ್ದಾರೆ. ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕ ಮತ್ತು ಅಧ್ಯಕ್ಷ ಸ್ಥಾನವನ್ನು ಬುಧವಾರ ಬಿರ್ಲಾ ತ್ಯಜಿಸಿದರು.
ಅಧಿಕೃತ ಅಂಕಿ–ಅಂಶಗಳ ಪ್ರಕಾರ ವಿಐಎಲ್ ಕಂಪನಿಯು ಹೊಂದಾಣಿಕೆ ಮಾಡಿದ ಒಟ್ಟು ಆದಾಯ (ಎಜಿಆರ್) ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ₹ 50,399 ಕೋಟಿ ಪಾವತಿಸಬೇಕಿದೆ. ಎಜಿಆರ್ ಲೆಕ್ಕಹಾಕಿದ್ದು ಸರಿಯಾಗಿಲ್ಲ ಎಂದು ವಿಐಎಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಕಂಪನಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ತಿರಸ್ಕರಿಸಿದೆ.
ಸದ್ಯ ಆದಿತ್ಯ ಬಿರ್ಲಾ ಸಮೂಹದಿಂದ ನಾಮನಿರ್ದೇಶನ ಆಗಿರುವ ಹಿಮಾಂಶು ಕಪಾನಿಯಾ ಅವರನ್ನು ಕಂಪನಿಯ ಕಾರ್ಯನಿರ್ವಾಹಕೇತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.