ನಿಮ್ಮ ವಯಸ್ಸಿಗೂ, ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಹಣದ ಮೊತ್ತಕ್ಕೂ ಸಂಬಂಧವಿದೆಯೇ? ಹೌದು! ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ತೊಡಗಿಸಬೇಕು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೂಡಿಕೆ ವಲಯದಲ್ಲಿ ‘100 ಮೈನಸ್ ಏಜ್’ ಎನ್ನುವ ಸೂತ್ರವೊಂದನ್ನು ಬಳಸಲಾಗುತ್ತದೆ.
ನಿಮ್ಮ ವಯಸ್ಸನ್ನು 100ರಿಂದ ಕಳೆದಾಗ ಯಾವ ಸಂಖ್ಯೆ ಬರುವುದೋ, ಶೇಕಡವಾರು ಅಷ್ಟು ಮೊತ್ತವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಕು ಎಂದು ಹೇಳುತ್ತದೆ ಈ ಸೂತ್ರ. ಆದರೆ ನಿಜಕ್ಕೂ ಈ ಮಾನದಂಡ ಸರಿಯೇ? ವಯಸ್ಸನ್ನೇ ಆಧಾರವಾಗಿಟ್ಟುಕೊಂಡು ಷೇರು ಹೂಡಿಕೆ ಪ್ರಮಾಣ ತೀರ್ಮಾನಿಸುವುದು ಸೂಕ್ತವೇ?
100 ಮೈನಸ್ ಏಜ್: ನಿಮ್ಮ ವಯಸ್ಸು 25 ವರ್ಷ ಎಂದಿಟ್ಟುಕೊಳ್ಳೋಣ. ವಯಸ್ಸನ್ನು 100ರಿಂದ ಕಳೆದಾಗ (100-25=75) 75 ಬರುತ್ತದೆ. ಅಂದರೆ ಈ ನಿಯಮದ ಪ್ರಕಾರ, ನಿಮ್ಮ ಬಳಿ ಹೂಡಿಕೆಗೆ ಇರುವ ನೂರು ರೂಪಾಯಿಯಲ್ಲಿ, ₹ 75ನ್ನು ಮಾತ್ರ ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಕು. 50 ವರ್ಷ ವಯಸ್ಸಿನ ವ್ಯಕ್ತಿ ತನ್ನ ಬಳಿ ಹೂಡಿಕೆಗೆ ₹ 50ನ್ನು ಮಾತ್ರ (100–50=50) ಷೇರು ಮಾರುಕಟ್ಟೆಯಲ್ಲಿ ತೊಡಗಿಸಬಹುದು. ಸರಳವಾಗಿ ಹೇಳುವುದಾದರೆ, ವಯಸ್ಸಿಗೆ ಅನುಗುಣವಾಗಿ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಪ್ರಮಾಣ ತೀರ್ಮಾನಿಸಬೇಕು ಎಂದು ಈ ನಿಯಮ ಸೂಚಿಸುತ್ತದೆ.
ಆದರೆ, ಇದನ್ನು ಎಲ್ಲರೂ ಯಥಾವತ್ತಾಗಿ ಪಾಲಿಸಬೇಕಾಗಿಲ್ಲ. ಹೂಡಿಕೆದಾರನ ಆರ್ಥಿಕ ಹಿನ್ನೆಲೆ, ಆತನ ಹೂಡಿಕೆ ಉದ್ದೇಶ, ಹೂಡಿಕೆಗಿರುವ ಸಮಯಾವಕಾಶ ಸೇರಿ ಹಲವು ಅಂಶಗಳನ್ನು ಆಧರಿಸಿ ಹೂಡಿಕೆ ತೀರ್ಮಾನ ಮಾಡಬೇಕಾಗುತ್ತದೆ.
ಹೂಡಿಕೆಯು ವ್ಯಕ್ತಿ ಕೇಂದ್ರಿತ: 40 ವರ್ಷ ವಯಸ್ಸಿನ ಇಬ್ಬರು ಸ್ನೇಹಿತರಿದ್ದಾರೆ ಎಂದಿಟ್ಟುಕೊಳ್ಳೋಣ. ಮೇಲಿನ ನಿಯಮದಂತೆ ಇಬ್ಬರೂ ಹೂಡಿಕೆಗೆ ತಮ್ಮಲ್ಲಿರುವ ಶೇ 60ರಷ್ಟು ಹಣವನ್ನು ಮಾತ್ರ ಷೇರುಗಳಲ್ಲಿ ತೊಡಗಿಸಬೇಕು. ಆದರೆ, ಇಬ್ಬರ ಆರ್ಥಿಕ ಸ್ಥಿತಿ ಬೇರೆ ಬೇರೆ. ಮೊದಲನೆಯ ವ್ಯಕ್ತಿ ದೊಡ್ಡ ವಾಣಿಜ್ಯೋದ್ಯಮಿ. ಆತನ ಪತ್ನಿ ಕೂಡ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಅವರ ಮಗು ಅಂತರರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದೆ. ತಂದೆ-ತಾಯಿ ನಿವೃತ್ತ ಸರ್ಕಾರಿ ಉದ್ಯೋಗಿಗಳಾಗಿದ್ದು ಅವರಿಗೆ ಪಿಂಚಣಿ ಬರುತ್ತಿದೆ. ಎರಡನೆಯ ವ್ಯಕ್ತಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದು ಆತನ ಪತ್ನಿ ಗೃಹಿಣಿ. ಮಕ್ಕಳಿಬ್ಬರು ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಂದೆ ಮತ್ತು ತಾಯಿ ಮಗನ ಆದಾಯದ ಮೇಲೆ ಅವಲಂಬಿತರಾಗಿದ್ದಾರೆ. ಎರಡೂ ಸ್ಥಿತಿಗಳು ಭಿನ್ನ ಎನ್ನುವುದನ್ನು ನೀವು ಒಪ್ಪಿಕೊಳ್ಳುವಿರಿ ಅಲ್ಲವೇ?
ಹೌದು, ಈ ಕಾರಣಕ್ಕಾಗಿಯೇ 100ರಿಂದ ನಿಮ್ಮ ವಯಸ್ಸನ್ನು ಕಳೆದಾಗ ಎಷ್ಟು ಸಂಖ್ಯೆ ಬರುವುದೋ ಅಷ್ಟು ಪ್ರಮಾಣದ ಮೊತ್ತವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಎಂದು ಹೇಳುವ ನಿಯಮವು ಎಲ್ಲರಿಗೂ ಅನ್ವಯ ಆಗುವಂಥದ್ದಲ್ಲ ಎಂದು ಹೇಳಿದ್ದು.
ಗುರಿ ಆಧಾರಿತ ಹೂಡಿಕೆ: ಷೇರುಪೇಟೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು ಎನ್ನುವುದನ್ನು ವಯಸ್ಸಿನ ಆಧಾರದಲ್ಲಿ ತೀರ್ಮಾನಿಸುವುದಕ್ಕಿಂತ ಹಣಕಾಸಿನ ಗುರಿ ಆಧರಿಸಿ ತೀರ್ಮಾನಿಸಬೇಕು. ನಿಮ್ಮ ಸದ್ಯದ ಆರ್ಥಿಕ ಸ್ಥಿತಿಗತಿ ಹೇಗಿದೆ? ಮನೆಯಲ್ಲಿ ಎಷ್ಟು ಮಂದಿ ದುಡಿಯುತ್ತಿದ್ದಾರೆ? ಪ್ರತಿ ತಿಂಗಳು ಎಷ್ಟು ಉಳಿತಾಯ ಮಾಡಬಹುದು? ಉಳಿತಾಯ ಮಾಡಿದ ಹಣ ಮತ್ತೆ ಯಾವಾಗ ಬೇಕಾಗುತ್ತದೆ? ಹೂಡಿಕೆ ಮಾಡುವಾಗ ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು ಹೀಗೆ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.