ADVERTISEMENT

ಮೂರೂ ಪಕ್ಷಗಳನ್ನು ತಿರಸ್ಕರಿಸಿದ ಸೂಕ್ತ ಜನಾದೇಶ

ನಾರಾಯಣ ಎ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಮೂರೂ ಪಕ್ಷಗಳನ್ನು ತಿರಸ್ಕರಿಸಿದ ಸೂಕ್ತ ಜನಾದೇಶ
ಮೂರೂ ಪಕ್ಷಗಳನ್ನು ತಿರಸ್ಕರಿಸಿದ ಸೂಕ್ತ ಜನಾದೇಶ   

ಕರ್ನಾಟಕದ 2018ರ ಚುನಾವಣೆಯ ಮೂಲಕ ಮತದಾರರು ನೀಡಿದ ಜನಾದೇಶ ಗೊಂದಲಮಯವಾಗಿರುವುದರಿಂದ ಆಗಬಾರದ್ದೆಲ್ಲಾ ಆಗುತ್ತಿದೆ ಎನ್ನುವ ಕೂಗೆದ್ದಿದೆ. ವಾಸ್ತವದಲ್ಲಿ ಜನ ನೀಡಿದ ತೀರ್ಪಿನಲ್ಲಿ ಏನೂ ಗೊಂದಲವಿಲ್ಲ.

ಯಾವ ಅಸ್ಪಷ್ಟತೆಯೂ ಇಲ್ಲ. ಮಾತ್ರವಲ್ಲ, ಚುನಾವಣಾಪೂರ್ವದಲ್ಲಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಮೂರೂ ಮುಖ್ಯ ಪಕ್ಷಗಳು ನಡೆದುಕೊಂಡ ರೀತಿಯನ್ನು ಗಮನಿಸಿದರೆ ಈ ಬಾರಿ ಮತದಾರರು ನೀಡಿದ ತೀರ್ಪು ಅತ್ಯಂತ ಸೂಕ್ತವೂ ಆಗಿದೆ. ಫಲಿತಾಂಶ ಹೀಗೆ ಬಂದದ್ದೇ ಲೇಸಾಯ್ತು.

ಮೂರೂ ಮುಖ್ಯ ಪಕ್ಷಗಳ ಪೈಕಿ ಯಾರೊಬ್ಬರಲ್ಲೂ ಭರವಸೆ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು  ಚುನಾವಣಾ ಫಲಿತಾಂಶದ ಮೂಲಕ ಜನ ರವಾನಿಸಿದ್ದಾರೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳಬೇಕು ಎಂದರೆ ‘ಮೂವರಲ್ಲಿ ಯಾರೂ ಸ್ವತಂತ್ರವಾಗಿ ಸರ್ಕಾರ ರಚಿಸುವುದು ಬೇಡ’ ಎನ್ನುವುದೇ ಜನರ ಸ್ಪಷ್ಟವಾದ ನಿರ್ಣಯ.

ADVERTISEMENT

ಚುನಾವಣೆಯ ಮೂಲಕ ಜನ ಹೇಳಿದ್ದು ಮತ್ತು ಹೇಳಬಹುದಾದದ್ದು ಇಷ್ಟೇ. ಯಾರು ಯಾರ ಜತೆ ಸೇರಿ ಸರ್ಕಾರ ನಡೆಸಬೇಕು ಎನ್ನುವುದನ್ನು ಚುನಾವಣೆಯ ಮೂಲಕ ಜನ ತೀರ್ಮಾನಿಸುವುದಿಲ್ಲ. ಆದಕಾರಣ ಯಾರು ಯಾರ ಜತೆ ಸೇರಿ ಸರ್ಕಾರ ನಡೆಸಿದರೂ ಅದರಲ್ಲಿ ಜನಾದೇಶದ ಪರ ಅಥವಾ ವಿರುದ್ಧ ಎನ್ನುವ ಪ್ರಶ್ನೆಯೇ ಇಲ್ಲ.

ಕಾನೂನು ಮತ್ತು ನೈತಿಕತೆಯ ಪರಿಧಿಯೊಳಗೆ ಇದ್ದ ಮೂವರಲ್ಲಿ ಯಾರು ಯಾರ ಜತೆ ಸೇರಿದರೂ ತಪ್ಪು- ಸರಿಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಎಲ್ಲವೂ ಅನಗತ್ಯವಾಗಿ ಸೃಷ್ಟಿಸಲಾದ ಗೊಂದಲಗಳು.

ಕಾಂಗ್ರೆಸ್ ಆಳ್ವಿಕೆ  ಬೇಡ ಎನ್ನುವುದು ಜನರ ತೀರ್ಮಾನ ಅಂತ ಬಿಜೆಪಿಯವರು ಹೇಳುತ್ತಿದ್ದಾರೆ. ಅವರು ಹೇಳುವುದು ಸರಿಯಾಗಿದೆ. ಆದರೆ ಅಷ್ಟೇ ಸರಿಯಾದ ಇನ್ನೊಂದು ಅಂಶವನ್ನೂ ಪರಿಗಣಿಸಬೇಕಾಗುತ್ತದೆ. ಕಾಂಗ್ರೆಸ್ ಬೇಡ ಅಂದ ಜನ ಬಿಜೆಪಿ ಬೇಕು ಅಂತ ತೀರ್ಮಾನ ನೀಡಿಲ್ಲ.

ಸ್ವೀಕರಿಸುವ ಮನಸ್ಸು ಬಿಜೆಪಿಯವರಿಗೆ ಇದ್ದದ್ದೇ ಆದರೆ ಜನ ಅವರಿಗೆ ನೀಡಿದ ಸಂದೇಶ ಸ್ಪಷ್ಟಾತಿಸ್ಪಷ್ಟವಾಗಿದೆ: ‘ಐದು ವರ್ಷಗಳ ನಂತರವೂ ನಿಮ್ಮನ್ನು ನಾವು ಪೂರ್ತಿಯಾಗಿ ಕ್ಷಮಿಸಿಲ್ಲ’ ಎನ್ನುವುದೇ ಆ ಸಂದೇಶ.

‘ನಮಗೆ ಎಲ್ಲರಿಗಿಂತಲೂ ಹೆಚ್ಚಿನ ಸ್ಥಾನಗಳು ಲಭಿಸಿರುವ (104/222) ಕಾರಣ ಜನಾದೇಶ ನಮ್ಮ ಪರವಾಗಿಯೇ ಇದೆ ಮತ್ತು ಆ ಕಾರಣದಿಂದ ನ್ಯಾಯವಾಗಿ ನಾವೇ ಅಧಿಕಾರ ಪಡೆಯಬೇಕು’ ಅಂತ ಬಿಜೆಪಿಯವರು ವಾದಿಸುತ್ತಾರೆ.

ಪರೋಕ್ಷವಾಗಿ ಅವರು ಹೇಳುತ್ತಿರುವುದು ಬಿಜೆಪಿ ಮತ್ತು ಜನತಾದಳ ಸೇರಿ ಸರ್ಕಾರ ಮಾಡಲು ಕಾಂಗ್ರೆಸ್ ಅನುವು ಮಾಡಿಕೊಡಬೇಕಿತ್ತು ಅಂತ. ಅವರು ಹಾಗೆ ವಾದಿಸುವುದು ಸಹಜ. ಇಲ್ಲಿ ಬಿಜೆಪಿಯ ನೂರಾನಾಲ್ಕು ಸ್ಥಾನಗಳನ್ನು ಗೆದ್ದ ಸಾಧನೆ ಇದೆಯಲ್ಲಾ ಅದನ್ನು ಸ್ವಲ್ಪ ಕೂಲಂಕಷವಾಗಿ ನೋಡಬೇಕು.

ಚುನಾವಣೆಯನ್ನು ಗೆಲ್ಲಲು ಒಂದು ರಾಜಕೀಯ ಪಕ್ಷಕ್ಕೆ ಯಾವ್ಯಾವ ಅನುಕೂಲಗಳೆಲ್ಲಾ ಇರಲು ಸಾಧ್ಯವೋ ಅವೆಲ್ಲವೂ ಬಿಜೆಪಿಯ ಪಾಲಿಗೆ ಈ ಬಾರಿ ಅನಾಯಾಸವಾಗಿ ಒದಗಿಬಂದಿದ್ದವು.

ಇಷ್ಟೆಲ್ಲವೂ ಇದ್ದೂ ಸರಳ ಬಹುಮತ ಬರುವ ಪ್ರಶ್ನೆ ಬಿಡಿ, ತಾನು 2008ರಲ್ಲಿ ಗೆದ್ದುಕೊಂಡಷ್ಟು ಸ್ಥಾನಗಳನ್ನು ಕೂಡಾ ಅದಕ್ಕೆ ಗೆಲ್ಲಲಾಗಲಿಲ್ಲ ಎನ್ನುವ ವಾಸ್ತವ ಬಿಜೆಪಿ ನಾಯಕರನ್ನು ಯಾವ ರೀತಿಯಲ್ಲೂ ಬಾಧಿಸಿದಂತೆ ಕಾಣಿಸುವುದಿಲ್ಲ. ಈ ವಿಷಯದ ಗಂಭೀರತೆ ಅರ್ಥವಾಗಬೇಕಿದ್ದರೆ ಬಿಜೆಪಿಗೆ ಇದ್ದ ಅನುಕೂಲಗಳನ್ನು ವಿಸ್ತೃತವಾಗಿ ಗಮನಿಸಬೇಕು.

ಬಿಜೆಪಿಯ ಪ್ರಚಾರದ ಮುಂಚೂಣಿಯಲ್ಲಿ ಆರಂಭದಿಂದಲೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಬಂದು ನಿಂತಿದ್ದರು. ಚುನಾವಣಾ ತಂತ್ರಗಳನ್ನು ಹೆಣೆಯುವುದರಲ್ಲಿ ಅವರೊಂದು ದಂತಕತೆ. ಪೂರ್ಣಾಹುತಿಯ ಹೊತ್ತಿಗೆ ಶಾ ಅವರಿಗಿಂತ ನೂರ್ಮಡಿ ಹೆಚ್ಚು ಬಲ ಇರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಬಂದು ‘ಮ್ಯಾಜಿಕ್’ ಮಾಡಲು ತೊಡಗಿದರು.

ಇಲ್ಲಿ ‘ಮ್ಯಾಜಿಕ್’ ಎನ್ನುವ ಶಬ್ದದ ಬಳಕೆ ಸೂಕ್ತವಾಗಿದೆ. ಯಾಕೆಂದರೆ ಈ ಬಾರಿ ಅವರು ಸಾರ್ವಜನಿಕ ಸಭೆಗಳಲ್ಲಿ ದೇಶದ ಪ್ರಧಾನಿಯಂತೆ ವರ್ತಿಸಲಿಲ್ಲ. ಅವರ ಮಾತುಗಾರಿಕೆ, ಹಾವಭಾವ, ನುಡಿಗಟ್ಟು ಎಲ್ಲವೂ ಜಾತ್ರೆಯಲ್ಲಿ ಕಾಣಿಸುವ ಮೆಜೀಶಿಯನ್ ಶೈಲಿಯಲ್ಲೇ ಇತ್ತು.

ಹೀಗೆಲ್ಲಾ ಆಡಿ, ವರ್ತಿಸಿ ವೋಟು ಗಿಟ್ಟಿಸಿಕೊಳ್ಳಲು ಅಂತಹ ಎತ್ತರದ ನಾಯಕನೇ ಬೇಕೇ ಎನ್ನುವ ಬಗ್ಗೆ ಈಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಇರಲಿ, ಬಿಜೆಪಿಗೆ ಪ್ರಚಾರದಲ್ಲಿ ಹೆಗಲು ಕೊಡಲು ಇದ್ದದು ಇವರೀರ್ವರೇ ಅಲ್ಲ. ಕರ್ನಾಟಕದ ಬಹುತೇಕ ಮಠಾಧೀಶರು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಆ ಪಕ್ಷಕ್ಕೆ ಮಂತ್ರಾಕ್ಷತೆ ಇತ್ತು ಹರಸಿದರು.

ಬಳ್ಳಾರಿಯ ರೆಡ್ಡಿಗಳು ಸಮಸ್ತ ಬಲದೊಂದಿಗೆ ಪಕ್ಷಕ್ಕೆ ಪುನರ್‌ಪ್ರವೇಶ ಪಡೆದರು. ಕಾಂಗ್ರೆಸ್ ಅದೇನೇನೋ ಲೆಕ್ಕಹಾಕಿದ್ದೆಲ್ಲಾ ವ್ಯರ್ಥವಾಗಿ ಲಿಂಗಾಯತ ಸಮೂಹ ಮತ್ತೆ ಬಿಜೆಪಿಯ ಬೆನ್ನಿಗೆ ನಿಂತಿತ್ತು. ರೆಡ್ಡಿ ಬಳಗದ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತಾರೆ ಎನ್ನುವ ಜಾಡು ಹಿಡಿದು ರಾಜ್ಯದ ಪೂರ್ವಭಾಗದಲ್ಲಿ ಸಾಂದ್ರೀಕೃತವಾಗಿ ನೆಲೆಸಿರುವ ಪರಿಶಿಷ್ಟ ವರ್ಗದ ಮಂದಿ ಬಿಜೆಪಿಯ ಕೈಹಿಡಿದರು.

ಈ ಕಡೆಯಿಂದ ಎಡಗೈ ದಲಿತರೂ ಬಿಜೆಪಿಗೆ ಜೈ ಎಂದರು. ಕಾಂಗ್ರೆಸ್ ಪಕ್ಷವು ‘ಹಿಂದೂ ಧರ್ಮದ ವೈರಿ’ ಎಂಬ ಬಿಜೆಪಿಯ ವ್ಯವಸ್ಥಿತ ಅಪಪ್ರಚಾರವನ್ನು ತೆಪ್ಪಗೆ ಒಪ್ಪಿಕೊಂಡ ಕರಾವಳಿ ಮತ್ತು ಮಲೆನಾಡು ಭಾಗಗಳ ಬಹುತೇಕ ಪ್ರಜ್ಞಾವಂತ ಮಂದಿ ಹಿಂದಿಲ್ಲ- ಮುಂದಿಲ್ಲ ಎಂಬಷ್ಟರ ಮಟ್ಟಿಗೆ ಬಿಜೆಪಿಯ ತೆಕ್ಕೆಯೊಳಗೆ ಸೇರಿಕೊಂಡರು.

ಇಷ್ಟೇ ಅಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಆ ಪಕ್ಷಕ್ಕೆ ಕಾಯಾ ವಾಚಾ ಮನಸಾ ದುಡಿಯಲು ‘ಎದ್ದು ನಿಲ್ಲು ವೀರಾ ದೇಶ ಕರೆದಿದೆ’ ಎಂದು ರಾಜ್ಯದ ಮೂಲೆ ಮೂಲೆಗೂ ಧಾವಿಸಿ ದುಡಿದರು.

ಇವರೆಲ್ಲರನ್ನೂ ಮೀರಿಸಿ ಅಂತರ್ಜಾಲದ ಮೂಲಕ ಬಿಜೆಪಿಯ ಪರವಾಗಿ ಪ್ರಚಾರ ಮತ್ತು ಅಪಪ್ರಚಾರದಲ್ಲಿ ತೊಡಗಲು ದೇಶದಾದ್ಯಂತ ವ್ಯಾಪಿಸಿದ ‘ಭೂಗತ’ ಪಡೆಯೇ ಇತ್ತು. ಆದರೆ, ಇಷ್ಟೆಲ್ಲಾ ಆಗಿ, ಇಷ್ಟೆಲ್ಲಾ ಮಾಡಿ ಕೊನೆಗೆ ಆ ಪಕ್ಷ ಸಂಪಾದಿಸಿದ್ದು ಮಾತ್ರ 2008ರ ಚುನಾವಣೆಯಲ್ಲಿ ಪಡೆದದ್ದಕ್ಕಿಂತ ಆರು ಸೀಟು ಕಡಿಮೆ!

ಅಂದರೆ 2008ರಲ್ಲಿ ಬಿ.ಎಸ್‌. ಯಡಿಯೂರಪ್ಪ ಏಕಾಕಿಯಾಗಿ ಅನುಕಂಪದ ಅಲೆಯ ಬೆನ್ನು ಹಿಡಿದು ಪಡೆದುಕೊಂಡಷ್ಟೂ ಸ್ಥಾನಗಳನ್ನು ಶಾ-ಮೋದಿ ಜೋಡಿಯಾದಿಯಾಗಿ ಪ್ರಪಂಚದ ಎಲ್ಲಾ ಶಕ್ತಿಗಳು ಸೇರಿ ಶ್ರಮಿಸಿದರೂ ಬಿಜೆಪಿಗೆ ಪಡೆಯಲಾಗಲಿಲ್ಲ.

ಇದು ಏನನ್ನು ತೋರಿಸುತ್ತದೆ? ಕರ್ನಾಟಕದಲ್ಲಿ ಬಿಜೆಪಿಗೆ ಇರುವ ಶಕ್ತಿಯನ್ನೇ ಅಥವಾ ಅದರ ಶಕ್ತಿಗಿರುವ ಮಿತಿಯನ್ನೇ? ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಂತಹ ಮಹಾನ್ ನಾಯಕ ಮೋದಿಯವರನ್ನು ತಂದು ನಿಲ್ಲಿಸಿದರೂ ಬಿಜೆಪಿಯ ಬಗ್ಗೆ 2013ರ ಹೊತ್ತಿಗೆ ಹುಟ್ಟಿಕೊಂಡ ಜನಾಕ್ರೋಶ ಇನ್ನೂ ಪೂರ್ಣ ತಣ್ಣಗಾಗಿಲ್ಲ ಎಂದು ಹೇಳಲೇಬೇಕಲ್ಲವೇ? ಇರುವ ಮೂರು ಪಕ್ಷಗಳ ಪೈಕಿ ನಾವೇ ಹೆಚ್ಚು ಹಿತವರು ಅಂತ ಬಿಜೆಪಿಯವರು ಹೇಳಿಕೊಳ್ಳಬಹುದು. ಆದರೆ ಸಂಖ್ಯೆಗಳಾಚೆಗಿನ ಸತ್ಯ ಮಾತ್ರ ಅದಲ್ಲ. ಇಲ್ಲಿ ಅಸ್ಪಷ್ಟ ಎನ್ನುವುದು ಯಾವುದೂ ಇಲ್ಲ.

ಇನ್ನು ಕರ್ನಾಟಕದ ಜನ ಈ ಮೂರೂ ಮುಖ್ಯ ಪಕ್ಷಗಳನ್ನು ತಿರಸ್ಕರಿಸಿ ತೀರ್ಪು ನೀಡಿದ್ದು ಅತ್ಯಂತ ಸೂಕ್ತವಾಗಿದೆ ಅಂತ ಆರಂಭದಲ್ಲಿ ಹೇಳಿದ ವಿಚಾರಕ್ಕೆ ಬರೋಣ. ಬಿಜೆಪಿ ಈ ಚುನಾವಣೆಯಲ್ಲಿ ಅನುಸರಿಸಿದ್ದು ಒಂದು ಕರಾಳ ಮಾದರಿಯನ್ನು. ಕಾಂಗ್ರೆಸ್‌ ಅನುಸರಿಸಿದ್ದು ಒಂದು ನಿರಾಳವಾದ ಮಾದರಿಯನ್ನು. ಬಿಜೆಪಿಯ ಮಾದರಿ ಅನರ್ಥಕಾರಿಯಾಗಿದ್ದರೆ, ಕಾಂಗ್ರೆಸ್ಸಿನ ಮಾದರಿ ಅಸಮರ್ಥತೆಯನ್ನು ಪ್ರತಿನಿಧಿಸುತ್ತಿತ್ತು.

ಚುನಾವಣೆಗೊಂದು ಪ್ರಮುಖವಾದ ವಿಚಾರ ಇಲ್ಲ ಎಂದು ತಿಳಿಯುತ್ತಲೇ ಬಿಜೆಪಿ ಅಪಪ್ರಚಾರದ ತಂತ್ರವನ್ನು ಅನುಸರಿಸಿತು. ಪತ್ರಿಕೆಗಳಿಗೆ ನೀಡಿದ ಜಾಹೀರಾತುಗಳಿಂದ ಹಿಡಿದು ಒಂದೊಂದು ಪ್ರದೇಶವನ್ನು ಗುರಿಯಾಗಿರಿಸಿಕೊಂಡು ಆ ಪಕ್ಷ ನಡೆಸಿದ ಸೈಬರ್ ಪ್ರಚಾರ ತಂತ್ರ, ಅದು ಬಳಸಿದ ಭಾಷೆ, ಕಳುಹಿಸುತಿದ್ದ ವಿಡಿಯೊಗಳು ಮನುಷ್ಯ ಮಾತ್ರರನ್ನು ಬೆಚ್ಚಿ ಬೀಳಿಸುವಂತಿತ್ತು.

ಪೇಜ್ ಪ್ರಮುಖರಿಂದ ಹಿಡಿದು ಸಾಕ್ಷಾತ್ ಪ್ರಧಾನ ಮಂತ್ರಿಯ ತನಕ ಪ್ರತಿಯೊಬ್ಬರೂ ಇದೇ ರೀತಿಯ ತಂತ್ರವನ್ನು ಅನುಸರಿಸಿದರು. ಅಲ್ಲಿ ಧನಾತ್ಮಕವಾದದ್ದು ಏನೂ ಕಾಣಿಸಲಿಲ್ಲ. ಏನಾದರೂ ಇದ್ದರೂ ಅದು ಯಥೇಚ್ಛವಾಗಿ ಕಾಣಿಸುತ್ತಿದ್ದ ಅಣಕ, ನಿಂದನೆ, ಅರ್ಧಸತ್ಯಗಳ ಪ್ರವಾಹದಲ್ಲಿ ಕಳೆದುಹೋಗುತ್ತಿತ್ತು.

ಅದೇ ವೇಳೆಗೆ, ಕಾಂಗ್ರೆಸ್ ಈ ಕಾಲದ ಸವಾಲುಗಳಿಗೆ, ಈ ತಲೆಮಾರಿನ ಆಶೋತ್ತರಗಳಿಗೆ ಸ್ಪಂದಿಸುವ ಒಂದು ಸಮರ್ಥ ಪಕ್ಷವಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳಲೇ ಇಲ್ಲ. ಬಿಜೆಪಿ ಅಂಜಿಕೆ, ಅಳುಕು, ನಾಚಿಕೆ ಮುಂತಾದ ಮನುಷ್ಯ ಸಹಜವಾದ ಯಾವುದೇ ನಿರ್ಬಂಧಗಳನ್ನೂ ಇಟ್ಟುಕೊಳ್ಳದೆ ದೈತ್ಯನಂತೆ ಅಪಪ್ರಚಾರದಲ್ಲಿ ತೊಡಗಿದ್ದಾಗ ಕಾಂಗ್ರೆಸ್‌  ತನ್ನನ್ನು ತಾನು ಸಮರ್ಥಿಸಿಕೊಳ್ಳುವಷ್ಟು ಚೈತನ್ಯವನ್ನೂ ಪ್ರದರ್ಶಿಸಲಿಲ್ಲ.

ಒಬ್ಬ ಸಿದ್ದರಾಮಯ್ಯನವರ ಕಡೆಯಿಂದ ಆಗೊಮ್ಮೆ ಈಗೊಮ್ಮೆ ಅಂತಹ ಪ್ರಯತ್ನಗಳ ಎಳೆಗಳು ಅಲ್ಲಲ್ಲಿ ಕಾಣಿಸಿಕೊಂಡವಾದರೂ ಬಿಜೆಪಿಯ ವ್ಯವಸ್ಥಿತ ಆಕ್ರಮಣದೆದುರು ಕಾಂಗ್ರೆಸ್ ತೀರಾ ಸಪ್ಪೆಯಾಗಿಬಿಟ್ಟಿತು. ತನ್ನನ್ನು ತಾನು ಸಮರ್ಥಿಸಿಕೊಳ್ಳಲಾಗದ ಪಕ್ಷವೊಂದಕ್ಕೆ ಬಹುಮತ ನೀಡಿದರೆ, ನಾಳೆ ರಾಜ್ಯ ಎದುರಿಸುವ ಸವಾಲುಗಳನ್ನು ಅದು ಹೇಗೆ ನಿಭಾಯಿಸೀತು ಎನ್ನುವ ರೀತಿಯಲ್ಲಿ ಮತದಾರ ಯೋಚಿಸಿದ್ದು ಸರಿಯಾಗಿಯೇ ಇದೆ.

ತನ್ನ ಬಗ್ಗೆ ವಿರೋಧಿ ಪಾಳಯದವರು ಹರಿಬಿಟ್ಟಿರುವ ಸುಳ್ಳುಗಳನ್ನು ಸಮರ್ಥವಾಗಿ ನಿಭಾಯಿಸಲಾಗದ ಒಂದು ಪಕ್ಷಕ್ಕೆ ಮತದಾರರು ರಾಜ್ಯದ ಭವಿಷ್ಯವನ್ನು ಯಾಕಾದರೂ ವಹಿಸಿಕೊಡಬೇಕು? ಪಕ್ಷದ ಅಸ್ತಿತ್ವವೇ ಅಲುಗಾಡುವ ಹೊತ್ತಿನಲ್ಲೂ ಒಂದು ಸಮರ್ಥ, ಸಂಘಟಿತ ಹೋರಾಟ ನಡೆಸದ ಪಕ್ಷಕ್ಕೆ ತಿರಸ್ಕಾರವೇ ಸರಿಯಾದ ಪಾಠ ಎಂದು ಜನ ನಿರ್ಧರಿಸಿದಂತಿದೆ.

ಆದಕಾರಣವೇ ಆಡಳಿತ ವಿರೋಧಿ ಅಲೆ ಎನ್ನುವುದು ಇಲ್ಲದೆ ಹೋದಾಗಲೂ ಆ ಪಕ್ಷದ ನಿರ್ವಹಣೆ ಆರಕ್ಕೆ ಏರದೇ ಮೂರಕ್ಕೆ ಇಳಿದದ್ದು, ಅದಕ್ಕೆ 2008 ರಲ್ಲಿ ಪಡೆದಷ್ಟು ಸ್ಥಾನಗಳನ್ನೂ ಪಡೆಯಲು ಸಾಧ್ಯವಾಗದೆ ಹೋದದ್ದು. ಇನ್ನು ಜನತಾದಳ. ಅದು ಇಡೀ ರಾಜ್ಯದಲ್ಲಿ ತನಗೆ ಬಹುಮತ ಬರಬೇಕು ಎನ್ನುವ ನಿಟ್ಟಿನಲ್ಲಿ ತಯಾರಾಗಲೇ ಇಲ್ಲ.

ಆರಂಭದಿಂದಲೂ ಅದಕ್ಕೆ ಹೇಗಾದರೂ ಮಾಡಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವಂತೆ ನೋಡಿಕೊಂಡು ಅದರಲ್ಲೇ ತನ್ನ ಬೇಳೆ ಬೇಯಿಸಿಕೊಳ್ಳಬೇಕು ಎನ್ನುವ ಗುರಿಯೇ ಇದ್ದದ್ದು. ಅದೂ ಹೋದ ಚುನಾವಣೆಯಲ್ಲಿ ಪಡೆದುಕೊಂಡದ್ದಕ್ಕಿಂತ ಎರಡು ಸ್ಥಾನಗಳನ್ನು ಕಡಿಮೆ ಗೆದ್ದಿತು.

ಬಿಜೆಪಿಯ ಕರಾಳ ಮಾದರಿಯನ್ನು ಜನ ಒಪ್ಪಿಕೊಂಡಿಲ್ಲ. ಹಾಗೆಯೇ ಕಾಂಗ್ರೆಸ್ಸಿನ ನಿರಾಳ ಮಾದರಿಯನ್ನು ಕೂಡಾ ಅವರು ಒಪ್ಪಿಕೊಂಡಿಲ್ಲ. ಜನತಾದಳದ ಸರಳ ಲೆಕ್ಕಾಚಾರದ ಮಾದರಿಯನ್ನೂ ಜನ ಪ್ರೋತ್ಸಾಹಿಸಲಿಲ್ಲ. ಈ ಮೂರೂ ಪಕ್ಷಗಳನ್ನು ಬೇರೆ ಬೇರೆ ರೀತಿಯಲ್ಲಿ ತಿವಿದಿದ್ದಾರೆ.

‘ನಿಮ್ಮ ಮಾದರಿಗಳನ್ನು ಬದಲಿಸಿಕೊಳ್ಳಿ’ ಎನ್ನುವ ಸಮಷ್ಟಿ ಸಂದೇಶವನ್ನು ನೀಡಿದ್ದಾರೆ. ಮೂವರಲ್ಲಿ ಯಾರ‍್ಯಾರು ಸೇರಿಕೊಂಡು ಅಧಿಕಾರ ನಡೆಸಬೇಕು ಎನ್ನುವ ಸಂದೇಶವನ್ನು ಚುನಾವಣಾ ಫಲಿತಾಂಶದಲ್ಲಿ ಹುಡುಕಬಾರದು. ಅದನ್ನು ನಿರ್ಧರಿಸುವ ಹಕ್ಕನ್ನು ಈಗಿರುವ ವ್ಯವಸ್ಥೆ ಜನರಿಗೆ ನೀಡಿಲ್ಲ.

ಒಟ್ಟಿನಲ್ಲಿ, ಈ ತೀರ್ಪು ಹೀಗೆಯೇ ಇರಬೇಕಿತ್ತು. ಒಂದು ವೇಳೆ ಕಾಂಗ್ರೆಸ್ಸಿಗೆ ಬಹುಮತ ಬಂದಿದ್ದರೆ ಆ ಪಕ್ಷ ತನ್ನ ಅಸಮರ್ಥ, ಅಪಕ್ವ, ಸೋಂಬೇರಿತನದ ಮಾದರಿಯನ್ನೇ ಚುನಾವಣಾ ರಾಜಕೀಯದಲ್ಲಿ ಮತ್ತು ಆಡಳಿತದಲ್ಲಿ ಪ್ರತಿಷ್ಠಾಪಿಸಿಕೊಳ್ಳುತ್ತಿತ್ತು. ಬಿಜೆಪಿಗೆ ಬಹುಮತ ಬಂದಿದ್ದರೆ ಆ ಪಕ್ಷ  ಅನುಸರಿಸಿದ ಲಂಗು-
ಲಗಾಮಿಲ್ಲದ ಅಪಾಯಕಾರಿ ಅಪಪ್ರಚಾರದ ಮಾದರಿಗೆ ಜನಮನ್ನಣೆಯ ಮುದ್ರೆ ಒತ್ತಿದಂತಾಗುತ್ತಿತ್ತು.

ಅದು ಹೊಸ ರಾಜಕೀಯ ಸಂಸ್ಕೃತಿಯಾಗಿ ಪ್ರತಿಷ್ಠಾಪನೆಯಾಗುತ್ತಿತ್ತು. ಚುನಾವಣೆಯ ಫಲಿತಾಂಶ ನಿರ್ಧರಿಸುವಲ್ಲಿ ಜಾತಿ, ಹಣ, ಧರ್ಮ ಇತ್ಯಾದಿಗಳೆಲ್ಲಾ ಎಷ್ಟೇ ಕೆಲಸ ಮಾಡಿದರೂ ಅಲ್ಲಿ ಕೊನೆಗೂ ಒಂದು ಸಂದೇಶ ಇದ್ದೇ ಇರುತ್ತದೆ ಎನ್ನುವ ಸತ್ಯವನ್ನು ಈ ಚುನಾವಣೆಯಲ್ಲಿ ದೇಶ ಮತ್ತೊಮ್ಮೆ ಕಂಡುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.