ಧರ್ಮಗುರುಗಳು ಎಂದು ಕರೆಸಿಕೊಳ್ಳುವ ಗಂಡಸರಲ್ಲಿ ಕೆಲವರು ರಹಸ್ಯವಾಗಿ ಹೆಣ್ಣಿನ ಜತೆ ಇರಿಸಿಕೊಳ್ಳುವ ಅನಧಿಕೃತ ಸಂಬಂಧಗಳಲ್ಲಿ ಮೂರು ವಿಧಗಳಿವೆ. ಮೊದಲನೆಯದ್ದು, ಒಪ್ಪಿತ ಸಂಬಂಧ. ಇದು ಕಾನೂನಿನ ಪ್ರಕಾರ ತಪ್ಪೇನಲ್ಲ. ಆದರೆ ನೈತಿಕವಾಗಿ ತಪ್ಪು ಅಂತ ಕೆಲವರು ಭಾವಿಸುತ್ತಾರೆ. ಎರಡನೆಯದ್ದು, ಬಲವಂತವಾಗಿ ಇರಿಸಿಕೊಳ್ಳುವ ದೈಹಿಕ ಸಂಬಂಧ. ಇದು ಬಲಾತ್ಕಾರ, ಅತ್ಯಾಚಾರ, ವಂಚನೆ ಇತ್ಯಾದಿ ಯಾವುದೇ ಸ್ವರೂಪದಲ್ಲೂ ಇರಬಹುದು. ಹಾಗಾಗಿ ಇಂತಹ ಸಂಬಂಧಗಳು ನೈತಿಕವಾಗಿ ತಪ್ಪು ಮತ್ತು ಕಾನೂನಿನ ಪ್ರಕಾರ ಅಪರಾಧ. ಮೂರನೆಯದ್ದು, ಮಕ್ಕಳನ್ನು ಲೈಂಗಿಕವಾಗಿ ಪೀಡಿಸುವುದು. ಇದು ಅನೈತಿಕತೆಯ ಪರಾಕಾಷ್ಠೆ, ಕಾನೂನಿನ ದೃಷ್ಟಿಯಿಂದ ಹೀನಾತಿಹೀನ ಅಪರಾಧ. ಅಷ್ಟೇ ಅಲ್ಲ, ಅಪ್ಪಟ ವಿಕೃತಿ ಕೂಡಾ.
ಮೇಲೆ ಹೇಳಿದ ಮೂರೂ ರೀತಿಯ ಪ್ರಕರಣಗಳು ದೇಶಾತೀತವಾಗಿ ಮತ್ತು ಧರ್ಮಾತೀತವಾಗಿ ಕಾಲಕಾಲಕ್ಕೆ ವರದಿಯಾಗುತ್ತಲೇ ಇವೆ. ಹೀಗಾದಾಗಲೆಲ್ಲ ಕೇಳಿಬರುವ ಒಂದು ಪ್ರತಿಕ್ರಿಯೆ ಹೀಗಿರುತ್ತದೆ: ‘ಯಾರೋ ಕೆಲವರು ಹೀಗೆಲ್ಲಾ ಮಾಡುತ್ತಾರೆ. ಅದರಿಂದಾಗಿ ಎಲ್ಲರಿಗೂ ಕೆಟ್ಟಹೆಸರು ಬರುತ್ತದೆ’ ಅಂತ. ಇಲ್ಲಿ ‘ಯಾರೋ ಕೆಲವರು’ ಎಂದರೆ ಯಾರು? ಯಾರ ರಹಸ್ಯ ವ್ಯವಹಾರಗಳು ಬಹಿರಂಗವಾಗಿವೆಯೋ ಅವರು ಮಾತ್ರವೇ ಅಥವಾ ಬಯಲಿಗೆ ಬಾರದೆ ಮುಗಿದುಹೋಗುವ
ಪ್ರಕರಣಗಳಲ್ಲಿ ಭಾಗಿಯಾದವರೂ ಈ ‘ಯಾರೋ ಕೆಲವರಲ್ಲಿ’ ಸೇರುತ್ತಾರೆಯೇ? ಎರಡೂ ಸೇರಿದರೆ ‘ಯಾರೋ ಕೆಲವರ’ ಸಂಖ್ಯೆ ಒಟ್ಟು ಧರ್ಮಗುರುಗಳ ಸಮುದಾಯದಲ್ಲಿ ಎಷ್ಟು ಪ್ರತಿಶತ ಆಗಬಹುದು? ಈ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ. ಇದೊಂದೇ ಅಂತ ಅಲ್ಲ, ಇಂತಹ ಪ್ರಕರಣದಲ್ಲಿ ಕೇಳಲೇಬೇಕಾದ ಯಾವ ಪ್ರಶ್ನೆಯನ್ನೂ ಯಾರೂ ಕೇಳುವುದಿಲ್ಲ.
ಇಲ್ಲದೇ ಹೋದರೆ, ಕರ್ನಾಟಕದಲ್ಲಿ ಮಠವೊಂದರ ಮುಖ್ಯಸ್ಥ ಎದುರಿಸಿದ ಅತ್ಯಾಚಾರ ಪ್ರಕರಣದಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳೇ ಒಬ್ಬರಾದ ನಂತರ ಒಬ್ಬರಂತೆ ಒಟ್ಟು ಹತ್ತು ಮಂದಿಯು ವಿಚಾರಣೆಯಿಂದ ಹಿಂದೆ ಸರಿದಾಗ ‘ಏನಾಗುತ್ತಿದೆ ಈ ದೇಶದಲ್ಲಿ’ ಅಂತ ಯಾರಾದರೂ ಕೇಳಬೇಕಿತ್ತಲ್ಲ. ಧರ್ಮಪೀಠಕ್ಕೆ ಏನಾಗುತ್ತಿದೆ ಎನ್ನುವ ಪ್ರಶ್ನೆಯನ್ನು ಕೇಳುವ ಜವಾಬ್ದಾರಿಯನ್ನು, ಆಪಾದಿತ ವ್ಯಕ್ತಿಯನ್ನು ಧರ್ಮಗುರು ಅಂತ ಸ್ವೀಕರಿಸಿದ ಜಾತಿಯವರ ವಿವೇಚನಾಶಕ್ತಿಗೆ ಬಿಟ್ಟುಬಿಡೋಣ. ಆದರೆ ಈ ದೇಶದ ನ್ಯಾಯದಾನ ವ್ಯವಸ್ಥೆಗೆ ಏನಾಗಿದೆ ಎನ್ನುವ ಪ್ರಶ್ನೆಯನ್ನು ಯಾರಾದರೂ ದೊಡ್ಡ ಮಟ್ಟದಲ್ಲಿ ಎತ್ತಬೇಕಿತ್ತಲ್ಲ. ಇಲ್ಲ, ಹಾಗಾಗಲಿಲ್ಲ!
ಈಗ ಕರ್ನಾಟಕದಲ್ಲಿ ಸುದ್ದಿಯಾಗಿರುವ ಹೊಚ್ಚಹೊಸ ಪ್ರಕರಣದಲ್ಲಿ ರಾಜಕಾರಣಿಗಳು ಸುಮ್ಮನಿದ್ದಾರೆ ಅಂತ ಕೆಲವರು ಹೇಳುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ
ನ್ಯಾಯಮೂರ್ತಿಗಳೇ ವಿಚಾರಣೆಯಿಂದ ಹಿಂದೆ ಸರಿದ ನಿದರ್ಶನಗಳಿರುವಾಗ ರಾಜಕಾರಣಿಗಳ ಅಳುಕನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ನೈತಿಕವಾಗಿ ಪತನ ಹೊಂದಿದ ವ್ಯಕ್ತಿಗಳು ದುರ್ಬಲರಾಗುತ್ತಾರೆ ಅಂತ ಇತಿಹಾಸ ಮತ್ತು ಪುರಾಣಗಳು ನಮಗೆ ತಿಳಿಸುತ್ತವೆ. ಆದರೆ ಈ ಧರ್ಮಗುರು ಸಮುದಾಯದವರು ಮತ್ತು ಅವರ ಸರೀಕರು ಇದಕ್ಕೆ ವ್ಯತಿರಿಕ್ತ. ಅವರ ನೈತಿಕತೆ ಪಾತಾಳಕ್ಕೆ ಕುಸಿದ ಸ್ಥಿತಿಯಲ್ಲೂ ಅವರು ಇಡೀ ಸಾಂವಿಧಾನಿಕ ವ್ಯವಸ್ಥೆಯನ್ನೇ ಮಣಿಸಿ ಕುಣಿಸಬಲ್ಲರು. ಇದು ಸಾತ್ವಿಕ ಶಕ್ತಿಯೇ? ರಾಜಸವೇ? ತಾಮಸವೇ? ಏನೇ ಇರಲಿ, ಇದು ತುಂಬಾ ಅಪಾಯಕಾರಿ ಶಕ್ತಿ.
ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುವ ವಿದ್ಯಮಾನದ ಹಿಂದೆ ಇರುವುದು ‘ಕೇವಲ ಕೆಲವೇ ಕೆಲವು’ ವ್ಯಕ್ತಿಗಳ ತಪ್ಪು ಮಾತ್ರವಲ್ಲ. ಇಂತಹ ಧರ್ಮಗುರುಗಳನ್ನು ಸೃಷ್ಟಿಸುವ ವ್ಯವಸ್ಥೆ ಮತ್ತು ಆ ವ್ಯವಸ್ಥೆಗೊಂದು ಉನ್ನತ ಸ್ಥಾನಮಾನ ಕಲ್ಪಿಸಿಕೊಟ್ಟ ಈ ಸಮಾಜ ಎರಡನ್ನೂ ಇಲ್ಲಿ ಕಟಕಟೆಯಲ್ಲಿ ನಿಲ್ಲಿಸ
ಬೇಕಾಗುತ್ತದೆ.
ಒಂದು ಸಮಾಜಕ್ಕೆ ಸಂತರ ಅಗತ್ಯವಿದೆ ಎನ್ನುವುದನ್ನು ಒಪ್ಪೋಣ. ಆದರೆ ಈಗಿನ ಧರ್ಮಗುರು ಸಮೂಹದಲ್ಲಿರುವ ಬಹುತೇಕರು ಸಂತರಲ್ಲ ಎನ್ನುವುದನ್ನು ಮೊದಲು ಗುರುತಿಸಬೇಕಿದೆ. ಇವರು, ಯಾವುದೋ ಒಂದು ಪೀಠ ಇದೆ, ಅದಕ್ಕೊಂದು ಅಧಿಪತಿ ಬೇಕು ಅಂತ ಪೀಠ ಏರಿದವರು; ಯಾವುದೋ ಒಂದು ತತ್ವ ಇದೆ, ಅದಕ್ಕೊಂದು ಪ್ರಚಾರಕ ಬೇಕು ಅಂತ ನೇಮಕಗೊಂಡವರು; ರಾಜಕೀಯ- ಆರ್ಥಿಕ ಶಕ್ತಿಗಳ ಜತೆಗೆ ವ್ಯವಹರಿಸಲು ಯಾವುದೋ ಒಂದು ಜಾತಿ– ಉಪಜಾತಿಗೆ ಧರ್ಮದ ಪೋಷಾಕು ತೊಟ್ಟ ಮಧ್ಯವರ್ತಿಗಳು ಬೇಕು, ಆ ಅಗತ್ಯವನ್ನು ಪೂರೈಸುವವರು ಇವರು. ಹೀಗೆ ಸಂತತ್ವದ ಲವಲೇಶವೂ ಇಲ್ಲದವರನ್ನು ಸಂತರಂತೆ ಗೌರವಿಸುವುದು ಸಮಾಜ ಮಾಡುವ ಮೊದಲ ತಪ್ಪು.
ಸಮಾಜದ ಆಷಾಢಭೂತಿ ನಡೆ ಎಷ್ಟರಮಟ್ಟಿಗಿದೆ ಎಂದರೆ, ಈ ವ್ಯಕ್ತಿಗಳು ಎಷ್ಟು ಹಣ ಸಂಪಾದಿಸಿ ಗುಡ್ಡೆ ಹಾಕಿದರೂ ಅದಕ್ಕೆ ಸಮಾಜದ ಆಕ್ಷೇಪವೇನಿಲ್ಲ. ಅವರು ತಮ್ಮ ತಮ್ಮ ಜಾತಿ ಅಥವಾ ಧರ್ಮದ ಪರವಾಗಿ ಸಂವಿಧಾನವಿರೋಧಿ ಅತಾರ್ಕಿಕ ಬೇಡಿಕೆಗಳನ್ನು ಮುಂದಿಟ್ಟು ಚುನಾಯಿತ ಸರ್ಕಾರಗಳನ್ನು ಬ್ಲ್ಯಾಕ್‌ಮೇಲ್ ಮಾಡಿದರೆ ಸಮಾಜ ಅದನ್ನು ಆಕ್ಷೇಪಿಸುವುದಿಲ್ಲ. ಯಾವುದೋ ರಾಜಕೀಯ ಪಕ್ಷ ತನ್ನ ಮತಬೇಟೆಯ ಪ್ರಯತ್ನದಲ್ಲಿ ಹೂಡುವ ಧರ್ಮೋನ್ಮಾದದ ಹೂಟದ ಭಾಗವಾಗಿ ಇವರು ಕಾಣಿಸಿಕೊಂಡರೆ ಸಮಾಜಕ್ಕೇನೂ ಅಭ್ಯಂತರ ಇಲ್ಲ. ಅಪರಾಧಿ ಹಿನ್ನೆಲೆಯ, ಸರ್ವಾಧಿಕಾರಿ ಧೋರಣೆಯ ಅಧಿಕಾರಸ್ಥ ನಾಯಕರನ್ನು ಇವರು ಓಲೈಸು ತ್ತಿದ್ದರೆ ಅದಕ್ಕೆ ಕೂಡಾ ಸಮಾಜದ ಆಕ್ಷೇಪವೇನೂ ಇಲ್ಲ. ಲೌಕಿಕ- ಭೌತಿಕ ಬದುಕಿನಲ್ಲಿ ಈ ಮಟ್ಟಕ್ಕೆ ಮುಳುಗಿರುವ ಈ ವ್ಯಕ್ತಿಗಳು ಲೌಕಿಕ ಬದುಕಿನ ಸಹಜಭಾಗವೇ ಆಗಿರುವ ಹೆಣ್ಣಿನ ಸಂಪರ್ಕವನ್ನು ಮಾತ್ರ ಬೆಳೆಸುವಂತಿಲ್ಲ ಅಂತ ಸಮಾಜ ಅಪೇಕ್ಷಿಸುತ್ತದೆ!
ಯಾವುದೋ ಜಾತಿ ಅಥವಾ ನಿರ್ದಿಷ್ಟ ಸಮುದಾಯದವರು ತಮ್ಮ ರಾಜಕೀಯ ಅಥವಾ ಆರ್ಥಿಕ ಸಬಲೀಕರಣ ಸಾಧಿಸುವ ಹಾದಿಯಲ್ಲಿ ತೋರಿಕೆಗಾಗಿ ಅಲೌಕಿಕರಂತೆ ವರ್ತಿಸುವವ್ಯಕ್ತಿಗಳನ್ನು ಗುರುಗಳು ಎಂದು ಪ್ರತಿಷ್ಠಾಪಿಸಿಕೊಂಡರೆ ಅದಕ್ಕೇನೂ ಮಾಡುವ ಹಾಗಿಲ್ಲ. ಅಂತಹ ವ್ಯಕ್ತಿ ಗಳನ್ನು ಆ ಜಾತಿ, ಉಪಜಾತಿ ಇಲ್ಲವೇ ಸಮುದಾಯದ ಗುರುಗಳಂತೆ ಕಂಡರೆ ಕ್ಷೇಮ. ಅವರನ್ನು ಜಗದ್ಗುರು ಗಳೆಂದೋ ಪರತತ್ವ ಪರಿಣತರೆಂದೋ ಸಮಸ್ತ ಧರ್ಮದ ವಕ್ತಾರರೆಂದೋ ವೈಭವೀಕರಿಸಿ ದರೆ, ಅದರಿಂದಾಗಿ ಅಂತಹ ವ್ಯಕ್ತಿಗಳಲ್ಲಿ ಕೇಂದ್ರೀಕೃತ ವಾಗುವ ಅಧಿಕಾರ ಯಾವುದೇ ನಿಯಂತ್ರಣಕ್ಕೆ ಸಿಗದೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ.
ಇನ್ನು, ಇವರಲ್ಲಿ ಕೆಲವರು ಶಾಲೆ ನಡೆಸುತ್ತಿದ್ದಾರೆ, ಬಡವರಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದಾರೆ, ಅನ್ನ, ಔಷಧ ನೀಡುತ್ತಾರೆ ಎಂದೆಲ್ಲಾ ಹೇಳಿಕೊಂಡು ಇವರ ಅಸ್ತಿತ್ವವನ್ನು ಸಮರ್ಥಿಸುವವರಿದ್ದಾರೆ. ಈ ಸಮರ್ಥನೆ ಈಗ ಅರ್ಥಹೀನ. ಸರ್ಕಾರದ ಬಳಿ ಹಣವಿಲ್ಲದ ಕಾಲದಲ್ಲಿ, ವಿದ್ಯಾಭ್ಯಾಸ ಇನ್ನೂ ಒಂದು ಸಾರ್ವಜನಿಕ ಆದ್ಯತೆ ಆಗದಿದ್ದ ಕಾಲದಲ್ಲಿ ಧರ್ಮಗುರು ಅಂತ ಗುರುತಿಸಲ್ಪಡುವ ಕೆಲವು ವ್ಯಕ್ತಿಗಳು ಮಾಡಿದ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸೋಣ. ಈಗ ಸರ್ಕಾರದ ಬಳಿ ಹಣವಿದೆ, ಸಾರ್ವಜನಿಕ ಆದ್ಯತೆಗಳು ಬದಲಾಗಿವೆ, ಆಹಾರ ಭದ್ರತಾ ಕಾಯ್ದೆ ಇದೆ. ಹಾಗಾಗಿ ಬಡವರಿಗೆ ಅನ್ನ, ಔಷಧ, ಶಿಕ್ಷಣ ನೀಡದೆ ಅವರನ್ನು ಯಾವುದೋ ಖಾಸಗಿ ಸಂಸ್ಥೆಗಳ ಆಶ್ರಯಕ್ಕೆ ನೂಕಿದರೆ ಅದು ಸರ್ಕಾರದ ವೈಫಲ್ಯ.
ಸರ್ಕಾರಿ ಸೌಲಭ್ಯಗಳಿರುವಾಗಲೂ ಹೆತ್ತವರು ತಮ್ಮ ಮಕ್ಕಳನ್ನು ಉಚಿತ ಶಿಕ್ಷಣ ನೀಡುವ ಸರ್ಕಾರೇತರ ಸಂಸ್ಥೆಗಳಿಗೆ ಸೇರಿಸಲು ಹೊರಟರೆ ಅವರಿಗೆ ಇಷ್ಟು ಹೇಳಬಹುದು: ಸರ್ಕಾರದಿಂದ ಉಚಿತವಾಗಿ ಶಿಕ್ಷಣ ಪಡೆದರೆ ಅದು ಹಕ್ಕು. ಇನ್ನಾವುದೇ ಬಗೆಯ ಸರ್ಕಾರೇತರ ವ್ಯವಸ್ಥೆಯಿಂದ ಉಚಿತವಾಗಿ ಏನನ್ನಾದರೂ ಪಡೆದರೆ ಅದು ಹಂಗು. ಇಲ್ಲಿ ಹಂಗಿನ ಪ್ರಶ್ನೆ ಮಾತ್ರವಲ್ಲ, ಅಪಾಯದ ಪ್ರಶ್ನೆಯೂ ಇದೆ ಅಂತ ಚಿತ್ರದುರ್ಗದ ಪ್ರಕರಣವೂ ಸೇರಿದಂತೆ ಈಗಾಗಲೇ ಆಗಿಹೋದ ಹಲವು ಪ್ರಕರಣಗಳು ಸ್ಪಷ್ಟವಾಗಿ ಸಾರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.