ರಾಜ್ಯದಲ್ಲಿ ಈಗ ನಡೆಯುತ್ತಿರುವುದು ಉಪಚುನಾವಣೆಯಲ್ಲ. ಶಾಸಕರ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆಯುತ್ತಿರುವ ಅಕ್ರಮ- ಸಕ್ರಮ ದಂಧೆಯೊಂದನ್ನು ಉಪಚುನಾವಣೆ ಅಂತ ಸಭ್ಯ ಹೆಸರಲ್ಲಿ ಕರೆಯಲಾಗುತ್ತಿದೆ. ಇದು ಅಂಥಿಂಥ ದಂಧೆಯಲ್ಲ. ಈ ದಂಧೆಯ ಮೂಲಕ ವಿಧಾನಸಭೆಗೆ ಮರು ಆಯ್ಕೆ ಬಯಸಿರುವ ಅನರ್ಹರ ಮಂದೆಯಲ್ಲಿ ಒಬ್ಬನೇ ಒಬ್ಬ ಗೆಲುವಿನ ನಗೆ ಬೀರಿದರೂ ಅಲ್ಲಿ ಸೋಲುವುದು ಗೆದ್ದಾತನ ವಿರುದ್ಧ ಸ್ಪರ್ಧಿಸಿದವರಷ್ಟೇ ಅಲ್ಲ. ಅಲ್ಲಿ ನಿಜಕ್ಕೂ ಸೋಲುವುದು ಈ ದೇಶದ ಸಂವಿಧಾನ. ಹೀಗೆ ಸಂವಿಧಾನದ ಬೆನ್ನಿಗೆ ಇರಿದು ಅದರ ಅಂತಃಸತ್ವವನ್ನು ಸೋಲಿಸಲು ಅನರ್ಹಗೊಂಡಿರುವ ಹದಿನೈದು ಶಾಸಕರು ತೊಡೆ ತಟ್ಟುತ್ತಿರುವ ವಿದ್ಯಮಾನ ಒಂದೆಡೆ ವಿಜೃಂಭಿಸುತ್ತಿರುವಾಗಲೇ ಇನ್ನೊಂದೆಡೆ ಇಂದು (ನ. 26) ಸಂವಿಧಾನ ದಿನ ಎದುರಾಗಿದ್ದು ವಿಲಕ್ಷಣವೂ, ವಿಪರ್ಯಾಸಕರವೂ ಆಗಿ ಕಾಣಿಸುತ್ತದೆ.
ಈ ಅನರ್ಹ ಮಂದಿಯ ಗೆಲುವು ಸಂವಿಧಾನದ ಸೋಲು ಯಾಕೆ ಮತ್ತು ಹೇಗೆ ಆಗುತ್ತದೆ ಎನ್ನುವುದನ್ನು ವಿಶದೀಕರಿಸುವ ಮುನ್ನ ಇನ್ನೊಂದು ವಿಚಾರವನ್ನು ಸ್ಪಷ್ಟ ಪಡಿಸಬೇಕಿದೆ. ಸ್ವತಂತ್ರ ಭಾರತದ ಚರಿತ್ರೆಯುದ್ದಕ್ಕೂ ಲಕ್ಷಾಂತರ ಮಂದಿ ಪಕ್ಷಾಂತರ ಮಾಡಿದ್ದಾರೆ, ನಾವೂ ಮಾಡಿದ್ದೇವೆ, ಏನೀಗ ಎನ್ನುವ ಅರ್ಥದ ಪ್ರಶ್ನೆಯನ್ನು ಅನರ್ಹ ಮಂದಿ ಮುಂದಿಡುತ್ತಿದ್ದಾರೆ. ಇದು ಜನರ ಹಾದಿ ತಪ್ಪಿಸುವ ಪ್ರಶ್ನೆ. ವಾಸ್ತವದಲ್ಲಿ ಈ ಮಂದಿ ಮಾಡಿರುವುದು ಕೇವಲ ಪಕ್ಷಾಂತರವನ್ನಲ್ಲ. ಅವರು ಪ್ರದರ್ಶಿಸಿದ್ದು ಪಕ್ಷಾಂತರೋತ್ತರ ಪ್ರವೃತ್ತಿಯೊಂದನ್ನು. ಇದು ಶಾಸಕಾಂಗದ ನಗದೀಕರಣ (monetisation), ಮಾರುಕಟ್ಟೀಕರಣ (marketisation), ಕ್ಷುಲ್ಲಕೀಕರಣ (trivialization) ಅಂತ ಒತ್ತಟ್ಟಿಗೆ ಕರೆಯಬಹುದಾದ ವಿದ್ಯಮಾನ.
ನ್ಯಾಯಯುತವಾಗಿ ನೋಡಿದರೆ, ಈ ಮಂದಿ ಸಂವಿಧಾನವನ್ನು ಉಲ್ಲಂಘಿಸಿದ್ದಕ್ಕೆ ಮತ್ತು ಮತದಾರರಿಗೆ ವಿಶ್ವಾಸದ್ರೋಹ ಬಗೆದದ್ದಕ್ಕೆ ವಿಧಾನಸಭೆಯ ಅವಧಿಯುದ್ದಕ್ಕೂ ಅನರ್ಹರಾಗಿಯೇ ಉಳಿಯಬೇಕಿತ್ತು. ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪು ಕೂಡಾ ಅದೇ ಆಗಿತ್ತು. ಆದರೆ ಅನರ್ಹತೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಅನರ್ಹತೆಯ ಅವಧಿಯನ್ನು ವಿಧಾನಸಭೆಯ ಅಂತ್ಯದವರೆಗೂ ವಿಸ್ತರಿಸಲು ಸಂವಿಧಾನದ ಪ್ರಕಾರ ಅಸಾಧ್ಯ ಎಂದು ನಿರ್ಣಯಿಸಿತು. ಹಾಗೆಯೇ ಈ ವಿಚಾರವನ್ನು ಮತದಾರರ ವಿವೇಚನೆಗೆ ಬಿಟ್ಟು ಅನರ್ಹ ಮಂದಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತು. ಸುಪ್ರೀಂ ಕೋರ್ಟ್, ಸಂವಿಧಾನದ ಪ್ರಕಾರ ಅನರ್ಹಗೊಳಿಸಿದವರನ್ನು ಈಗ ಜನ ಮತ್ತೆ ಚುನಾವಣೆಯಲ್ಲಿ ಅರ್ಹ ಶಾಸಕರನ್ನಾಗಿ ರೂಪಾಂತರಿಸಿದರೆ ಜನರೂ ಸಂವಿಧಾನವನ್ನು ಸೋಲಿಸುವ ಅನರ್ಹ ಮಂದಿಯ ದಂಧೆಗೆ ಸಾಥ್ ನೀಡಿದಂತೆ ಆಗುವುದಿಲ್ಲವೇ?
ಈಗ ಒಂದು ಪ್ರಶ್ನೆ ಬರುತ್ತದೆ. ಹಾಗಾದರೆ ಸಂವಿಧಾನವೇ ಇವರ ಅನರ್ಹತೆಯ ಅವಧಿಯನ್ನು ನಿರ್ಧರಿಸಬಹುದಿತ್ತಲ್ಲಾ? ಸಂವಿಧಾನ ಹಾಗೆ ಮಾಡದಿರುವಾಗ ಜನ ಮತ್ತೆ ಇವರನ್ನು ಮರುಚುನಾಯಿಸಿದರೆ ಸಂವಿಧಾನಕ್ಕೆ ಅಪಚಾರವಾಗುವ ಪ್ರಶ್ನೆ ಎಲ್ಲಿ ಬಂತು ಅಂತ. ಸೂಕ್ಷ್ಮಗಳು ಅಡಗಿರುವುದೇ ಇಲ್ಲಿ.
ಮೂಲ ಸಂವಿಧಾನದಲ್ಲಿ ಪಕ್ಷಾಂತರ ನಿಷೇಧವೇ ಇರಲಿಲ್ಲ. ಪಕ್ಷಾಂತರ ನಿಷೇಧ ಜಾರಿಗೆ ಬಂದದ್ದು 1985ರಲ್ಲಿ. ಇದರ ಅರ್ಥ, ಮೂಲ ಸಂವಿಧಾನ ಬೇಕಾಬಿಟ್ಟಿ ಪಕ್ಷಾಂತರವನ್ನು ಒಪ್ಪಿಕೊಂಡಿತ್ತು ಅಂತ ಅಲ್ಲ. ಸಂವಿಧಾನ ನಿರ್ಮಾತೃಗಳಿಗೆ ಈ ದೇಶದ ಮುಂದಿನ ತಲೆಮಾರಿನ ನಾಯಕರಲ್ಲಿ ಎಷ್ಟು ವಿಶ್ವಾಸ ಇತ್ತು ಅಂದರೆ, ಮುಂದೊಂದು ದಿನ ಈ ದೇಶದ ಜನನಾಯಕರು ಪಕ್ಷದಿಂದ ಪಕ್ಷಕ್ಕೆ ಜಿಗಿದು ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಾರೆ ಎಂಬುದನ್ನು ಅವರು ಊಹಿಸಲೂ ಇಲ್ಲ. ಆ ಕಾರಣಕ್ಕೆ, ಸಂವಿಧಾನ ಬರೆದವರು ಪಕ್ಷಾಂತರ ನಿಷೇಧಿಸುವ ಗೋಜಿಗೆ ಹೋಗಲಿಲ್ಲ. ಇಂತಹದ್ದೊಂದು ಸಾಂವಿಧಾನಿಕ ವಿಶ್ವಾಸಕ್ಕೆ ದ್ರೋಹ ಬಗೆಯುವ ಕೆಲಸ ಎಗ್ಗಿಲ್ಲದೆ ನಡೆಯತೊಡಗಿದಾಗ ಸಂವಿಧಾನವನ್ನು ತಿದ್ದುಪಡಿ (52ನೆಯ) ಮಾಡಿ ಪಕ್ಷಾಂತರವನ್ನು ನಿಷೇಧಿಸಲಾಯಿತು. ಪಕ್ಷಾಂತರ ಮಾಡುವ ಜನಪ್ರತಿನಿಧಿಗಳು ತಮ್ಮ ಸದಸ್ಯತ್ವದಿಂದ ಅನರ್ಹಗೊಳ್ಳುವುದು ಎಂದಾಯಿತು. ಅನರ್ಹತೆಯ ಭೀತಿ ಪಕ್ಷಾಂತರವನ್ನು ನಿಯಂತ್ರಿಸಬಹುದು ಎಂಬುದು ಇದರ ಹಿಂದಿನ ತರ್ಕ.
ಆದರೆ, ಮುಂದೊಂದು ದಿನ ‘ಅನರ್ಹತೆ’ಯ ಶಿಕ್ಷೆಗೂ ಹೆದರದೆ ಇನ್ನೊಂದು ಪಕ್ಷಕ್ಕೆ ತಮ್ಮನ್ನು ಮಾರಿಕೊಂಡು, ಬರುವ ಲಾಭವನ್ನು ಬಳಸಿ ಉಪಚುನಾವಣೆಯಲ್ಲಿ ಮತದಾರರನ್ನೇ ಖರೀದಿಸಲು ಮುಂದಾಗುವ ಶಾಸಕರು, ಸಂಸದರ ತಲೆಮಾರೊಂದು ಸೃಷ್ಟಿಯಾದೀತು ಎನ್ನುವ ಊಹೆ ಸಂವಿಧಾನ ಬರೆದವರಿಗೆ ಬಿಡಿ, ಅದನ್ನು ತಿದ್ದುಪಡಿ ಮಾಡಿದವರಿಗೂ ಇರಲಿಲ್ಲ. ಅದಲ್ಲದೇ ಹೋಗಿದ್ದರೆ ಆಗಲೇ ಅನರ್ಹತೆ ಮತ್ತು ಅದಕ್ಕೆ ಸಮಯಾವಧಿ ಎರಡನ್ನೂ ಸಂವಿಧಾನದಲ್ಲಿ ಸೇರಿಸುವ ಕೆಲಸ ಆಗುತ್ತಿತ್ತು. ಅಂದರೆ ಈಗ ತಮ್ಮನ್ನು ತಾವು ಮಾರಿಕೊಂಡಿರುವ ಜನಪ್ರತಿನಿಧಿಗಳ ಸಮೂಹ, ಅವರಿಗೆ ಮತ್ತೆ ಮತ ನೀಡಲು ಸಿದ್ಧರಾಗಿರುವ ಜನಸಮೂಹ ಮತ್ತು ಅವರಿಗೆ ಮತ ನೀಡಿ ಅಂತ ಅಂಗಲಾಚುವ ಒಂದು ರಾಜಕೀಯ ಪಕ್ಷ ಈ ದೇಶದ ಸಂವಿಧಾನಕ್ಕೆ ವಿಶ್ವಾಸದ್ರೋಹ ಎಸಗು ತ್ತಿವೆ ಎಂದಾಯಿತು. ಸಂವಿಧಾನದ ಒಳ್ಳೆಯತನಕ್ಕೆ ಅಪಚಾರ ಬಗೆಯುತ್ತಿವೆ ಎಂದಾಯಿತು.
ಹಾಗಾದರೆ ಪಕ್ಷಾಂತರಕ್ಕೆ ಅವಕಾಶ ಇರಬಾರದೇ? ಇರಬೇಕು. ಪಕ್ಷಾಂತರ ಬೇರೆ, ಇನ್ನೊಂದು ಪಕ್ಷಕ್ಕೆ ಮಾರಿ ಕೊಂಡು ಚುನಾಯಿತ ಸ್ಥಾನಕ್ಕೆ ರಾಜೀನಾಮೆ ನೀಡಿ, ಖರೀದಿಸಿದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬೇರೆ. ವಿಚ್ಛೇದನಕ್ಕೂ ವ್ಯಭಿಚಾರಕ್ಕೂ ವ್ಯತ್ಯಾಸವಿದೆ. ‘ಮಾರಿಕೊಂಡದ್ದಕ್ಕೆ ಪುರಾವೆ ಏನು? ಖರೀದಿಸಿದವರನ್ನು ತಂದು ನಿಲ್ಲಿಸಿ’ ಅಂತ ಅನರ್ಹ ಮಂದಿಯ ಪೈಕಿ ಒಬ್ಬರು ಕೇಳಿದ್ದಾರಂತೆ! ಕೆಲವೊಂದು ವ್ಯವಹಾರಗಳಲ್ಲಿ ಖರೀದಿಸಿದವರು ಯಾರು ಅಂತ ಮಾರಿಕೊಂಡವರಿಗೆ ಬಿಟ್ಟರೆ ಉಳಿದ ಯಾರಿಗೂ ತಿಳಿಯುವುದಿಲ್ಲ. ಅಂತಹ ವ್ಯವಹಾರಗಳು ಯಾವುವು ಅಂತ ಇಲ್ಲಿ ಹೇಳುವ ಅಗತ್ಯ ಇಲ್ಲ.
ಹಿಂದಿದ್ದ ಸರ್ಕಾರ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡಿಲ್ಲವಾದ ಕಾರಣ ಹೀಗೆಲ್ಲಾ ಮಾಡಬೇಕಾಯಿತು ಅಂತ ಅನರ್ಹ ಮಂದಿ ಹೇಳಿಕೊಳ್ಳುತ್ತಿದ್ದಾರೆ. ಇದು ಸುಳ್ಳು ಅಂತ ಸಾಧಿಸಲು ಪುರಾವೆ ಏನೂ ಬೇಕಿಲ್ಲ. ಈ ಮಂದಿ ರಾಜೀನಾಮೆ ನೀಡಿದ ನಂತರ ಅವರನ್ನು ‘ಅಳಿಯಂದಿರನ್ನಾಗಿ’ ದತ್ತು ಪಡೆದುಕೊಂಡ ಪಕ್ಷದ ನೇತೃತ್ವದ ಸರ್ಕಾರ ಇವರ ಕ್ಷೇತ್ರಗಳ ‘ಅಭಿವೃದ್ಧಿ’ಗೆ ಭರಪೂರ ಹಣ ನೀಡಿದೆ ಎಂಬ ಸುದ್ದಿ ಇದೆ. ಇಲ್ಲೊಂದು ಪ್ರಶ್ನೆ. ಯಾವ ಕ್ಷೇತ್ರಕ್ಕೆ ಯಾವ ಆಧಾರದ ಮೇಲೆ ಹಣ ಬಿಡುಗಡೆಯಾಗಬೇಕು ಎನ್ನುವುದಕ್ಕೆ ಒಂದು ನೀತಿ, ನಿಯಮ, ರೀತಿ, ರಿವಾಜು, ಮಾನದಂಡ ಏನೂ ಇಲ್ಲವೇ? ಬೇಕಾದವರಿಗೆ ನೀಡುವುದು, ಬೇಡವಾದವರಿಗೆ ನೀಡದಿರಲು ಇದೇನು ಮಹಾರಾಜ ನೀಡುವ ದಾನವೇ? ಕರ್ನಾಟಕದ ಮುಖ್ಯಮಂತ್ರಿ ಮಹಾರಾಜನಾದದ್ದು ಮತ್ತು ಕರ್ನಾಟಕದ ಶಾಸಕರು ಚೌಕಾಸಿ ನಡೆಸುವ ದಲ್ಲಾಳಿಗಳಾಗಿದ್ದು ಯಾವಾಗ ಮತ್ತು ಯಾವ ಸಂವಿಧಾನದ ಅಡಿಯಲ್ಲಿ?
ಮತ್ತೆ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ನೀಡಿದ ತೀರ್ಪಿನ ವಿಚಾರಕ್ಕೆ ಬರೋಣ. ಶಾಸಕರ ಅನರ್ಹತೆಯ ಅವಧಿ ನಿರ್ಧರಿಸಲು ಸಂವಿಧಾನದಲ್ಲಿ ಮತ್ತು ಕಾನೂನಿನ ವ್ಯಾಪ್ತಿಯಲ್ಲಿ ನ್ಯಾಯಾಂಗಕ್ಕೆ ಅವಕಾಶ ಇರಲಿಲ್ಲ ಎಂದೇ ಒಪ್ಪಿಕೊಳ್ಳೋಣ. ಆದರೆ ಅಯೋಧ್ಯೆಯ ವಿವಾದದಲ್ಲಿ ತೀರ್ಪು ನೀಡುವಾಗ ಇದೇ ಸುಪ್ರೀಂ ಕೋರ್ಟ್ ‘ಉದಾತ್ತ ನ್ಯಾಯ’ ನೀಡುವ ದೃಷ್ಟಿಯಿಂದ ಸಂವಿಧಾನದ 142ನೇ ವಿಧಿಯ ಪ್ರಕಾರ ಪ್ರದತ್ತವಾದ ಅಧಿಕಾರ ಬಳಸಿಕೊಂಡು, ‘ದೇವಾಲಯ ಕಟ್ಟಿ’, ‘ಟ್ರಸ್ಟ್ ಮಾಡಿ’ ಎಂಬಿತ್ಯಾದಿ ಆದೇಶಗಳನ್ನು ಧರ್ಮ ನಿರಪೇಕ್ಷವಾಗಿರಬೇಕಾಗಿರುವ ಸರ್ಕಾರವೊಂದಕ್ಕೆ ಎಗ್ಗಿಲ್ಲದೇ ನೀಡುತ್ತದೆ. ದೇವಾಲಯ, ನಂಬಿಕೆ ಇತ್ಯಾದಿಗಳನ್ನೆಲ್ಲಾ ರಕ್ಷಿಸಲು ಇಷ್ಟೆಲ್ಲಾ ಮಾಡುವ ಅದೇ ಸುಪ್ರೀಂ ಕೋರ್ಟ್, ಪ್ರಜಾತಂತ್ರದ ಪರಮೋಚ್ಚ ಗರ್ಭಗುಡಿಯಾಗಿರುವ ಸಂಸತ್ತು ಮತ್ತು ವಿಧಾನಸಭೆಗಳ ಪಾವಿತ್ರ್ಯ ಉಳಿಸಲು, ಪ್ರಜಾತಂತ್ರದ ಮಾನ ಉಳಿಸಲು 142ನೇ ವಿಧಿಯನ್ನು ಬಳಸಿಕೊಂಡು ಶಾಸಕರ ಅನರ್ಹತೆಯ ಅವಧಿ ನಿಗದಿಪಡಿಸಲು ಸಾಧ್ಯ ಇರಲಿಲ್ಲವೇ? ಸಂವಿಧಾನ ತಜ್ಞರು ಉತ್ತರಿಸಬೇಕು.
ಏನೇ ಇರಲಿ. ಸಂವಿಧಾನ ದಿನದ ಅಂಗವಾಗಿ ರಾಷ್ಟ್ರಪ್ರಶಸ್ತಿಯೊಂದನ್ನು ನೀಡುವ ಪರಿಪಾಟವೇನಾದರೂ ಇದ್ದಿದ್ದೇ ಆದಲ್ಲಿ, ಈ ವರ್ಷ ಆ ಪ್ರಶಸ್ತಿಯನ್ನು ರಮೇಶ್ ಕುಮಾರ್ ಪಡೆಯಬೇಕು; ಸ್ಪೀಕರ್ ಸ್ಥಾನದ ಮಿತಿಯೊಳಗೆ ಅಥವಾ ಮಿತಿಯನ್ನು ಮೀರಿ ಸಂವಿಧಾನದ ಆಶಯವನ್ನು ಎತ್ತಿಹಿಡಿಯುವ ಅಪೂರ್ವ ಧೈರ್ಯ ತೋರಿಸಿದ್ದಕ್ಕಾಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.