ADVERTISEMENT

70 ವರ್ಷಗಳಲ್ಲಿ ಆಗದ್ದೆಲ್ಲಾ ಆಗುತ್ತಿದೆ!

ಚುನಾವಣೆಯಲ್ಲಿ ನಡೆಯುವ ಮೋಡಿ, ಅರ್ಥವ್ಯವಸ್ಥೆ ಕುಸಿದಾಗ ನೆರವಿಗೆ ಬರದು ನೋಡಿ

ನಾರಾಯಣ ಎ
Published 16 ಸೆಪ್ಟೆಂಬರ್ 2019, 20:24 IST
Last Updated 16 ಸೆಪ್ಟೆಂಬರ್ 2019, 20:24 IST
   

ಇದನ್ನು ಭಕ್ತಿಸಾಹಿತ್ಯದ ಆಶಾವಾದ ಮತ್ತು ದ್ವೇಷ ಸಾಹಿತ್ಯದ ಸಿನಿಕತನಗಳಾಚೆ ಅವಲೋಕಿಸಿದರೆ, ಇದು ಚಕ್ರೀಯವೋ (cyclical) ಅಥವಾ ರಾಚನಿಕವೋ (structural) ಎನ್ನುವ ತಾಂತ್ರಿಕ ಪರಿಭಾಷೆಯ ಚರ್ಚೆಯನ್ನು ಬದಿಗಿರಿಸಿ ನೋಡಿದರೆ, ಇದು ಹಿಂಜರಿತವೋ (recession) ಅಥವಾ ಹಿನ್ನಡೆಯೋ (slow-down) ಎನ್ನುವ ಅರ್ಥಶಾಸ್ತ್ರೀಯ ವಿಂಗಡಣೆ ಗಳನ್ನು ಪರಿಗಣಿಸದೆ ವೀಕ್ಷಿಸಿದರೆ, ಸದ್ಯ ದೇಶದ ಆರ್ಥಿಕ ರಂಗ ಅನುಭವಿಸುತ್ತಿರುವ ತಲ್ಲಣದ ಕುರಿತು ಎರಡು ಸ್ಥೂಲವಾದ ಅಭಿಪ್ರಾಯಗಳನ್ನು ಗುರುತಿಸಬಹುದು.

ಮೊದಲನೆಯ ವಾದದ ಪ್ರಕಾರ, ಆಗುತ್ತಿರುವುದೆಲ್ಲ ಒಳ್ಳೆಯದಕ್ಕೆ. ಅರ್ಥಾತ್, ಈ ಸರ್ಕಾರ ಇಡೀ ಅರ್ಥ ವ್ಯವಸ್ಥೆಯನ್ನು ಮತ್ತು ವ್ಯಾಪಾರ-ವ್ಯವಹಾರಗಳ ಸಾಂಸ್ಥಿಕ ಚೌಕಟ್ಟನ್ನು ಹೆಚ್ಚು ಸಂಘಟಿತಗೊಳಿಸಲು ಮತ್ತು ಅಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದಂತೆ ಮಾಡಲು ವ್ಯಾಪಕವಾಗಿ ಮುರಿದುಕಟ್ಟುವ ಕೆಲಸ ಮಾಡುತ್ತಿದೆ. ಹಳೆ ವ್ಯವಸ್ಥೆಗೆ ಒಗ್ಗಿಹೋದವರು ಹೊಸ ವ್ಯವಸ್ಥೆಯಲ್ಲಿ ಸ್ವಲ್ಪ ಧೃತಿಗೆಟ್ಟಿದ್ದಾರೆ. ಈ ಪ್ರಕ್ರಿಯೆ ನಡೆಯುತ್ತಿರುವಾಗ ಕೊಂಚಮಟ್ಟಿಗೆ ಹಿನ್ನಡೆ ಸಹಜ. ಆ ನಂತರ ಆರ್ಥಿಕತೆ ಬೃಹತ್ತಾಗಿ ಬೆಳೆಯಲಿದೆ ಮತ್ತು ಹೆಚ್ಚು ಗುಣಾತ್ಮಕವಾಗಿ ಬೆಳೆಯಲಿದೆ.

ಎರಡನೆಯ ವಾದದ ಪ್ರಕಾರ, ಆರ್ಥಿಕತೆ ಹೈರಾಣಾಗಿ ಹೋಗಿದೆ. ಕಂಡುಕೇಳರಿಯದ ಬೆಳವಣಿಗೆ ಸಾಧಿಸುತ್ತೇವೆ ಎನ್ನುವ ಕನಸನ್ನು ಬಿತ್ತಿ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ವರ್ಷ ಎರಡು ತುಂಬುವುದರೊಳಗೆ ಖಾಸಗಿ ಹೂಡಿಕೆದಾರರ ಭರವಸೆ ನೆಲಕಚ್ಚಿತ್ತು. ಹೂಡಿಕೆಯ ಪತನ ಇನ್ನೂ ನಿಂತಿಲ್ಲ. ಸರ್ಕಾರ ವಾಸ್ತವವನ್ನು ಮರೆಮಾಚಿತ್ತು. ನಮಗೆ ‘ಹಾರ್ವರ್ಡ್‌ನವರು ಬೇಡ ಹಾರ್ಡ್ ವರ್ಕ್’ ಮಾಡುವವರು ಬೇಕು ಅಂತ ತಜ್ಞರನ್ನೆಲ್ಲಾ ಒದ್ದೋಡಿಸಿ, ತಾತ್ವಿಕವಾಗಿ ಒಪ್ಪಿಗೆಯಾಗುವ ಸ್ವಯಂಘೋಷಿತ ಪರಿಣತರ ಆಣತಿಯಂತೆ ನಿರ್ಧಾರ ಕೈಗೊಳ್ಳುತ್ತಾ ಸಾಗಿತು. ಇದರ ಪರಿಣಾಮವಾಗಿಯೇ ನೋಟು ರದ್ದತಿ, ಜಿಎಸ್‌ಟಿ ಅನುಷ್ಠಾನದಲ್ಲಿ ಎಡವಟ್ಟುಗಳು, ತೆರಿಗೆ ಭಯೋತ್ಪಾದನೆ ಇತ್ಯಾದಿಗಳೆಲ್ಲಾ ಆಗಿದ್ದು, ಆಗುತ್ತಿರುವುದು. ಇಲ್ಲದೇ ಹೋಗಿದ್ದರೆ, ಒಂದು ಕಾಲದಲ್ಲಿ ಈ ಸರ್ಕಾರ ಎಲ್ಲದಕ್ಕೂ ಪರಿಹಾರ ಅಂತ ಡಂಗುರ ಸಾರುತ್ತಿದ್ದ ಉದ್ಯಮಿಗಳೇ (ಉದಾ: ಮೋಹನ್ ದಾಸ್ ಪೈ) ಈಗ ಅದರ ದೊಡ್ಡ ಟೀಕಾಕಾರರು ಹೇಗಾಗುತ್ತಿದ್ದರು? ಒಂದು ವೇಳೆ ಸರ್ಕಾರ ಹೇಳುವಂತೆ ಆರ್ಥಿಕತೆ ಸಹಜವಾಗಿಯೇ ಚೇತರಿಸಿಕೊಳ್ಳುವುದು ನಿಶ್ಚಿತ ಎಂದಾದರೆ, ಮತ್ಯಾಕೆ ಈಗ ರಿಸರ್ವ್‌ ಬ್ಯಾಂಕ್‌ನ ಸಂಗ್ರಹವನ್ನೆಲ್ಲ ಬರಿದು ಮಾಡಿ ಆತುರಾತುರವಾಗಿ ಪರಿಹಾರ ಮಾರ್ಗಗಳನ್ನು ಘೋಷಿಸುತ್ತಿರುವುದು? ಒಟ್ಟಿನಲ್ಲಿ, ಈ ವಾದದ ಪ್ರಕಾರ ಈಗಿನ ಸರ್ಕಾರಕ್ಕೆ ಆರ್ಥಿಕತೆಯನ್ನು ನಿಭಾಯಿಸಲು ಬರುವುದಿಲ್ಲ ಮತ್ತು ಅದು ಈಗಾಗಲೇ ಮಾಡಿರುವ ಎಡವಟ್ಟು ಗಳಿಂದಾಗಿ ದೇಶ ಬಹಳಷ್ಟು ಕಾಲ ತೀವ್ರವಾದ ಕಷ್ಟ-ನಷ್ಟ ಅನುಭವಿಸಬೇಕಾಗುತ್ತದೆ.

ADVERTISEMENT

ಸತ್ಯ ಈ ಎರಡೂ ವಾದಗಳ ಮಧ್ಯೆ ಎಲ್ಲೋ ಇದ್ದೀತು. ನಿಜಕ್ಕೂ ಈಗ ಆಗುತ್ತಿರುವುದೆಲ್ಲಾ ಏನು? ಅರ್ಥವ್ಯವಸ್ಥೆ ಬಲಗೊಳ್ಳುತ್ತಿರುವ ಸೂಚನೆಯೇ ಅಥವಾ ಅದರ ಅಡಿಪಾಯ ಶಿಥಿಲಗೊಳ್ಳುತ್ತಿರುವುದರ ಪರಿಣಾಮವೇ? ಕರಾರುವಾಕ್ಕಾಗಿ ಯಾರಿಗೂ ತಿಳಿದಿದೆ ಅಂತ ಅನ್ನಿಸುತ್ತಿಲ್ಲ.

ಜಾನ್ ಮೆಯ್ನಾರ್ಡ್ ಕೇನ್ಸ್ ಎಂಬ ಅರ್ಥಶಾಸ್ತ್ರಜ್ಞನ (1883-1946) ಆತ್ಮ ತಣ್ಣಗೆ ಮುಗುಳ್ನಗುತ್ತಿರಬಹುದು. ದೊಡ್ಡ ಮಟ್ಟದ ಆರ್ಥಿಕ ಹಿಂಜರಿತ ಎದು ರಾದಾಗ ಸರ್ಕಾರ ದೊಡ್ಡ ಮೊತ್ತದ ಹಣ ಖರ್ಚು ಮಾಡ ಬೇಕು ಎನ್ನುವ ಪರಿಹಾರವನ್ನು ಮೊದಲಿಗೆ ಸೂಚಿಸಿದವ ಆತ. ‘ದುಡ್ಡಿಲ್ಲ ಅಂದರೆ ಸಾಲ ಮಾಡಿ, ಹೇಗೆ ಖರ್ಚು ಮಾಡಬೇಕು ಅಂತ ಗೊತ್ತಾಗದಿದ್ದರೆ ಗುಂಡಿ ತೋಡಿ ಗುಂಡಿ ಮುಚ್ಚುವ ಕೆಲಸವನ್ನಾದರೂ ಮಾಡಿಬಿಡಿ; ಆಗ ಆರ್ಥಿಕತೆ ಚಿಗುರುತ್ತದೆ’ ಎಂದಿದ್ದ ಕೇನ್ಸ್. ದೊಡ್ಡ ಹಿಂಜರಿತವೋ, ಸಣ್ಣ ಹಿನ್ನಡೆಯೋ, ಅಂತೂ ಕೇನ್ಸ್‌ನನ್ನು ಮತ್ತೊಮ್ಮೆ ನೆನೆಸಿಕೊಳ್ಳುವುದೀಗ ಭಾರತದ ಸರದಿ. ಆರ್‌ಬಿಐ ತನ್ನ ‘ಹಣಕಟ್ಟೆ’ಯ ತೂಬುಗಳನ್ನೆಲ್ಲಾ ತೆರೆದು ಸರ್ಕಾರದತ್ತ ದೊಡ್ಡ ಮಟ್ಟದ ಹಣದ ಹೊಳೆ ಹರಿಸಿದೆ. ಸರ್ಕಾರ ಇದನ್ನು ಖರ್ಚು ಮಾಡಲಿದೆ. ಜತೆಗೆ, ನೆರವು, ಉತ್ತೇಜನ, ಪುನಶ್ಚೇತನ, ಪುನರ್ನಿರ್ಮಾಣ ಅಂತ ಪ್ಯಾಕೇಜ್ ಘೋಷಿಸುತ್ತಿದೆ. ಪರಿಣಾಮವಾಗಿ, ಕುಸಿದ ಆರ್ಥಿಕತೆ ಮೈಕೊಡವಿ ನಿಲ್ಲಬಹುದು. ಇದಕ್ಕೆ ಎಷ್ಟು ಸಮಯ ಬೇಕಾದೀತು? ಉತ್ತರವಿಲ್ಲ. ಭವಿಷ್ಯದಲ್ಲಿ ಏನೇ ಆಗಲಿ, ಈ ಕ್ಷಣದ ಸತ್ಯ ಏನೆಂದರೆ, ಕಳೆದ 70 ವರ್ಷಗಳಲ್ಲಿ ಆಗದ್ದು ನಿಜಕ್ಕೂ ಆಗಿದೆ. ಆರ್ಥಿಕತೆ ಹಿಂದೆಂದೂ ಎದುರಿಸದ ಸಂಕಷ್ಟ ಸ್ಥಿತಿಯನ್ನು ಈಗ ಎದುರಿಸುತ್ತಿದೆ. ಹಾಗೇನೂ ಆಗಿಲ್ಲ, ಎಲ್ಲಾ ದೇಶದ್ರೋಹಿಗಳ ಅಳಲು ಅಂತ ಹೇಳಿ ವಿಷಯಾಂತರ ಮಾಡುವ ಹಾಗಿಲ್ಲ. ಯಾಕೆಂದರೆ 70 ವರ್ಷಗಳಲ್ಲಿ ಕಾಣದ ದುರ್ದಿನಗಳನ್ನು ದೇಶದ ಆರ್ಥಿಕತೆ ಈಗ ಎದುರಿಸುತ್ತಿದೆ ಅಂತ ಹೇಳಿದ್ದು ಸ್ವತಃ ನೀತಿ ಆಯೋಗದ ಮುಖ್ಯಸ್ಥರು (ರಾಜೀವ್ ಕುಮಾರ್– 2019, ಆಗಸ್ಟ್ 23).

ಅಧಿಕಾರಕ್ಕೆ ಬಂದಾಕ್ಷಣ ಆರ್ಥಿಕ ಬೆಳವಣಿಗೆಯ ದರವನ್ನು ಅಷ್ಟೆತ್ತರಕ್ಕೇರಿಸುತ್ತೇನೆ, ಆರ್ಥಿಕತೆಯ ಗಾತ್ರವನ್ನು ಹಿರಿಹಿರಿ ಹಿಗ್ಗಿಸುತ್ತೇನೆ ಎಂದೆಲ್ಲಾ ಹೇಳು ವುದು ತಮಾಷೆಯಾಗಿ ಕಾಣಿಸುತ್ತದೆ. ಆರ್ಥಿಕತೆಯ ಚರಿತ್ರೆಯಲ್ಲಿ ಭಾರಿ ಎನ್ನುವಷ್ಟು ಏರಿದ್ದೆಲ್ಲಾ ಅನಾಮತ್ತಾಗಿ ಇಳಿದಿವೆ. ಪೂರ್ವ ಏಷ್ಯಾದ ದೇಶಗಳು ಒಂದಷ್ಟು ಕಾಲ ಅರ್ಥರಂಗದ ‘ಹುಲಿ’ಗಳು ಅಂತ ಕರೆಸಿಕೊಂಡು ಆ ನಂತರ ‘ಇಲಿ’ಗಳಾಗಿ ಹೋದ ಕತೆ ತೀರಾ ಇತ್ತೀಚಿನದ್ದು. ನೋಟು ರದ್ದತಿ ಮಾಡಿದ ಕಾಲದಲ್ಲಿ ಹರಿಬಿಟ್ಟಿದ್ದ ಅರ್ಥಭ್ರಮೆಗಳನ್ನೊಮ್ಮೆ ನೆನಪಿಸಿಕೊಳ್ಳಬೇಕು: ‘ಮೋದಿಯ ಆರ್ಥಿಕ ಬ್ರಹ್ಮಾಸ್ತ್ರ; ಇನ್ನು ಮುಂದೆ ಭಾರತದಲ್ಲಿ ತೆರಿಗೆಗಳೇ ಇರುವುದಿಲ್ಲ, ಬದಲಿಗೆ ಬ್ಯಾಂಕ್ ವ್ಯವಹಾರದ ಮೇಲೆ ಹಾಕುವ ಸಣ್ಣ ಶುಲ್ಕವೇ ಖಜಾನೆ ತುಂಬಲಿದೆ; ಇನ್ನು ನಕಲಿ ನೋಟುಗಳೇ ಇರುವುದಿಲ್ಲ, ಇನ್ನು ಸರ್ಕಾರದ ಬಳಿ ಹಣದ ಕೊರತೆ ಎನ್ನುವುದೇ ಇರುವುದಿಲ್ಲ’ ಇತ್ಯಾದಿ. ಗಿಮಿಕ್ ಮಾಡಿ ಕೆಲಕಾಲ ಚುನಾವಣೆ ಗೆಲ್ಲಬಹುದು, ಅರ್ಥವ್ಯವಸ್ಥೆಯಲ್ಲಿ ಅವೆಲ್ಲಾ ಒಂದೇ ಒಂದು ಸಲವೂ ಪ್ರಯೋಜನಕ್ಕೆ ಬರುವುದಿಲ್ಲ ಎನ್ನುವುದಲ್ಲವೇ ಪಾಠ!

ಹೋದ ವಾರ ಪ್ರಸನ್ನ ಅವರು ಈ ಪುಟದಲ್ಲಿ ಆಧುನಿಕ ಅರ್ಥವ್ಯವಸ್ಥೆಯನ್ನು ರಾಕ್ಷಸ ಅಂತ ಕರೆದದ್ದನ್ನು ನೆನಪಿಸಿಕೊಳ್ಳಿ. ಯಾರ ನಿಯಂತ್ರಣಕ್ಕೂ ಸಿಗುವುದಿಲ್ಲ ಈ ಅರ್ಥವ್ಯವಸ್ಥೆ. ನಾಯಕನ ಎದೆ ಎಷ್ಟೇ ಇಂಚು ಅಗಲವಿದ್ದರೂ ಆರ್ಥಿಕತೆಯ ಲಗಾಮು ಆತನ ಕೈಗೆ ಸಿಕ್ಕೀತು ಎನ್ನುವ ಕಾಲಘಟ್ಟ ಕಳೆದುಹೋಗಿದೆ. ಅನಿಶ್ಚಿತತೆ ಎನ್ನುವುದು ಆಧುನಿಕ ಅರ್ಥವ್ಯವಸ್ಥೆಯ ಅನಿವಾರ್ಯ ಅಂಗ. ಹೆಚ್ಚೆಚ್ಚು ಮಂದಿ ಏನೇನೋ ಉತ್ಪಾದಿಸುತ್ತಲೇ ಇದ್ದರೆ, ಹೆಚ್ಚು ಮಂದಿ ತಮಗೆ ಬೇಕಾದದ್ದನ್ನು ಮತ್ತು ಬೇಡವಾದದ್ದನ್ನು ಇನ್ನೂ ಹೆಚ್ಚು ಖರೀದಿಸುತ್ತಲೇ ಇದ್ದರೆ ಬೆಳವಣಿಗೆ ದರ ಏರುಮುಖವಾಗಿ ಇರುತ್ತದೆ. ಹೂಡಿಕೆ- ಬೇಡಿಕೆ–ಉತ್ಪಾದನೆ-ಬಳಕೆ ಹೀಗೆ ಗಿರಕಿ ಹೊಡೆಯುವ ಅರ್ಥವ್ಯವಸ್ಥೆಯ ಗಾಲಿಗಳಿಗೆ ದೈನೇಸಿ ಗ್ರೀಸ್ ಹಚ್ಚುವ ಕೆಲಸವನ್ನಷ್ಟೇ ಸರ್ಕಾರಗಳು ಮಾಡಲು ಸಾಧ್ಯ.

ಈ ಅಸಂಗತ ಆಟವನ್ನು ಎಷ್ಟು ಸಮಯ ನಡೆಸಿ ಕೊಂಡು ಹೋಗಬಹುದು ಎನ್ನುವ ಪ್ರಶ್ನೆ ಜಾಗತಿಕ ಮಟ್ಟದ್ದು. ಸದ್ಯಕ್ಕಂತೂ ಉತ್ಪಾದನೆ ಇಲ್ಲವೇ ಉತ್ಪಾತ ಎನ್ನುವ ಈ ವ್ಯವಸ್ಥೆಗೆ ಪರ್ಯಾಯ ಎನ್ನುವುದಿಲ್ಲ. ಕೇನ್ಸ್ ಹೇಳಿದ ಗುಂಡಿ ತೋಡಿ ಗುಂಡಿ ಮುಚ್ಚುವ ಸೂತ್ರ ವ್ಯಾವಹಾರಿಕ ಮಾತ್ರವಲ್ಲ, ತತ್ವಶಾಸ್ತ್ರೀಯವಾಗಿಯೂ ಕಾಣಿಸುವುದು ಇದೇ ಕಾರಣಕ್ಕಾಗಿ. ಏನೇ ಇರಲಿ, ಒಮ್ಮೊಮ್ಮೆ ಆ ಗಾಲಿಗಳು ಚಲಿಸುವುದಿಲ್ಲ ಎಂದಾದಾಗ ಸರ್ಕಾರ ಹಣದ ಪ್ರವಾಹ ಹರಿಸಿ ಅದನ್ನೊಮ್ಮೆ ಮುಂದಕ್ಕೆ ತಳ್ಳಬೇಕು. ಈಗ ಗ್ರೀಸ್ ಹಚ್ಚುವ (ಸುಧಾರಣೆ) ಕೆಲಸ ನಡೆಯುತ್ತಿದೆ, ಮುಂದಕ್ಕೆ ನೂಕುವ ಕೆಲಸವೂ ನಡೆಯುತ್ತಿದೆ. ಪರಿಣಾಮವಾಗಿ, ಅರ್ಥ ವ್ಯವಸ್ಥೆ ಮೈಕೊಡವಿ ಎದ್ದು, ಎಲ್ಲಾ ದಾಖಲೆಗಳನ್ನೂ ಮೀರಿ ಏರುಮುಖವಾದರೆ ಅದರ ಸಕಲ ಶ್ರೇಯಸ್ಸು ನಮ್ಮ ಕಾಲದ ಮಹಾನ್ ನಾಯಕನಿಗೆ ಮಾತ್ರವೇ ಸಂದು ಹೋಗಲಿದೆ. ಗಾಲಿಗಳು ಚಲಿಸುವುದು ವಿಳಂಬವಾದರೆ, ಅದರ ಹೊಣೆಯನ್ನು ಎಂದಿನಂತೆ ಜವಾಹರಲಾಲ್ ನೆಹರೂ ಅವರ ತಲೆಗೆ ಕಟ್ಟಲು ಭಕ್ತಸೇನೆ ಡಿಜಿಟಲ್ ಕೋಟೆಕೊತ್ತಲಗಳ ಆಯಕಟ್ಟಿನ ಜಾಗಗಳಲ್ಲೆಲ್ಲಾ ಜಮಾಯಿಸುತ್ತಿರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.